ಬೆಂಕಿ ಹಚ್ಚುವ ಬಿಜೆಪಿ ನಾಯಕರಿಂದ ಉಪದೇಶ ಕೇಳುವ ಅಗತ್ಯವಿಲ್ಲ – ಶಾಸಕ ಉದಯ್
ಕೋಮುಗಲಭೆ ನಡೆದಾಗ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಹೇಳುವುದನ್ನು ಬಿಟ್ಟು, ತಮ್ಮ ರಾಜಕೀಯ ಲಾಭಕ್ಕಾಗಿ ಪ್ರಚೋದನಾ ಭಾಷಣ ಮಾಡಿ ಬೆಂಕಿ ಹಚ್ಚುವ ಬಿಜೆಪಿ- ಆರ್.ಎಸ್.ಎಸ್ ನಾಯಕರಿಂದ ಉಪದೇಶ ಕೇಳುವ ಅಗತ್ಯವಿಲ್ಲ ಬೆಂಕಿ ಹಚ್ಚಲು ಇದು ಮಂಗಳೂರು ಅಲ್ಲ ಮಂಡ್ಯ ಎಂದು ಶಾಸಕ ಕದಲೂರು ಉದಯ್ ಕಿಡಿಕಾರಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಂತಿ ಮತ್ತು ಸೌಹಾರ್ದತೆಯ ನೆಲೆಯಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ಜನರು ಬಹಳ ಪ್ರಬುದ್ಧರು.ರಾಜಕೀಯ ಸ್ವಾರ್ಥಕ್ಕಾಗಿ ಜನರನ್ನು ಪ್ರಚೋದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಶಿವಮೊಗ್ಗ ಹಾಗೂ ಮಲೆನಾಡು ಭಾಗದ ಬಿಜೆಪಿ ನಾಯಕರಿಂದ ನನ್ನ ಕ್ಷೇತ್ರದ ಜನರು ನೀತಿ ಕೇಳುವ ಅಗತ್ಯವಿಲ್ಲ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಯಾರು ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅರಿತುಕೊಳ್ಳಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಭ್ರಷ್ಟಾಚಾರದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಜೈಲಿಗೆ ಹೋಗಿದ್ದರು. ಪ್ರಸ್ತುತ ಪೋಕ್ಸೋ ಕೇಸ್ ನಲ್ಲಿ ಜಾಮೀನು ಪಡೆದಿದ್ದಾರೆ. ಇಂತಹವರ ಮಕ್ಕಳಿಂದ ನಾನಾಗಲಿ ಅಥವಾ ಮದ್ದೂರು ಜನರಾಗಲಿ ಪಾಠ ಕೇಳುವ ಅಗತ್ಯವಿಲ್ಲ ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಾಪ ‘ಸಿಂಹ’ ಅಲ್ಲ ‘ನಾಯಿ’
ಮಾಜಿ ಸಂಸದ ಪ್ರತಾಪ ಸಿಂಹ ಮದ್ದೂರಿಗೆ ಬಂದು ಜನರನ್ನು ಪ್ರಚೋದಿಸಿ ಮಾತನಾಡುತ್ತಾನೆ. ಆತನನ್ನು ಸಿಂಹ ಎನ್ನುವ ಬದಲು ನಾಯಿ ಎಂದು ನಾಮಕರಣ ಮಾಡಬೇಕಿತ್ತು.ಆತನ ರಾಸಲೀಲೆಗಳ ಬಗ್ಗೆ ಆತನ ಪತ್ನಿಯೇ ಬೇಸತ್ತು ಬಿಜೆಪಿ ಹೈಕಮಾಂಡ್ ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅವನಿಗೆ ಬಿ.ಫಾರಂ ದೊರೆಯಲಿಲ್ಲ.ಯುವಕರನ್ನು ಪ್ರಚೋದಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಕೆಂಡಕಾರಿದರು.
ಮದ್ದೂರಿಗೆ ಏನು ಮಾಡಿಲ್ಲ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ಧಾಗ ಮದ್ದೂರು ತಾಲ್ಲೂಕಿನಲ್ಲಿ ರಸ್ತೆ, ನೀರಾವರಿ ಸೇರಿದಂತೆ ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ರೈತರಿಗೂ ಏನೂ ಮಾಡಿಲ್ಲ.ನಾನು ಕಳೆದ ಎರಡೂವರೆ ವರ್ಷಗಳ ಕಾಂಗ್ರೆಸ್ ಸರ್ಕಾರದಲ್ಲಿ 1500 ಕೋಟಿ ರೂ. ಅನುದಾನ ತಂದಿದ್ದೇನೆ.ಅವರು ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಕುತಂತ್ರ ಫಲಿಸಲ್ಲ
ಮದ್ದೂರು ಪಟ್ಟಣದಲ್ಲಿ ಗಣಪತಿ ವಿಜರ್ಸನೆ ವೇಳೆ ನಡೆದ ಅಹಿತಕರ ಘಟನೆಯನ್ನು ಬಿಂಬಿಸಿ ಜನರನ್ನು ಎತ್ತಿಕಟ್ಟುವುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕುತಂತ್ರ ಫಲಿಸಲ್ಲ. ನಮ್ಮ ಪಕ್ಷ ಕಲ್ಲು ಹೊಡೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ.ಕಲ್ಲು ಒಡೆದ ಕಿಡಿಗೇಡಿಗಳು ಕಚಡಾ ಕೆಲಸ ಮಾಡಿದ್ದಾರೆ. ಅವರನ್ನು ಕ್ಷಮಿಸುವ ಮಾತೇ ಇಲ್ಲ ಎಂದರು.
ಜನರಿಗೆ ಸತ್ಯ ಗೊತ್ತಿದೆ
ನನ್ನ ಪುತ್ರಿಯ ಶೈಕ್ಷಣಿಕ ಪ್ರವೇಶಾತಿಗಾಗಿ ವಿದೇಶಕ್ಕೆ ತೆರಳಿದ್ದ ವೇಳೆ ಉಂಟಾದ ಗಲಭೆಯನ್ನು ನೆಪ ಮಾಡಿದ ಬಿಜೆಪಿ ನಾಯಕರು ನಾನು ಮೋಜು- ಮಸ್ತಿ ಮಾಡಲು ವಿದೇಶಕ್ಕೆ ಹೋಗಿದ್ದೇನೆ ಎಂದು ಹೇಳಿದ್ದಾರೆ.ಮದ್ದೂರಿನ ಜನರಿಗೆ ನಾನು ಹೋಗಿದ್ದ ಸತ್ಯ ಗೊತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹಾಗೂ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಗಳಿಗೆ ಅವರ ಕೊಡುಗೆ ಏನು?
ಮದ್ದೂರು ತಾಲ್ಲೂಕಿನಲ್ಲಿ ಶೇ. 97 ರಷ್ಟು ಹಿಂದೂಗಳು ವಾಸವಿದ್ದಾರೆ. ನಾನೂ ಒಬ್ಬ ಹಿಂದೂ. ಕ್ಷೇತ್ರದ ಹತ್ತಾರು ಹಿಂದೂ ದೇವಾಲಯಗಳ ಜೀರ್ಣೋದ್ದಾರಕ್ಕೆ ಆರ್ಥಿಕ ನೆರವು ಹಾಗೂ ಸರ್ಕಾರಿ ಅನುದಾನ ನೀಡಿದ್ದೇನೆ. ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳುವ ಬಿಜೆಪಿ ನಾಯಕರು, ತಾಲ್ಲೂಕಿನ ಎಷ್ಟು ಹಿಂದೂ ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದಾರೆ ಹೇಳಲಿ.ಕೋಮು ಗಲಭೆ ನಡೆದ ಸಂದರ್ಭದಲ್ಲಿ ಶಾಂತಿ ಕಾಪಾಡುವುದನ್ನು ಬಿಟ್ಟು ರಾಜಕೀಯ ಅಸ್ತಿತ್ವಕ್ಕಾಗಿ ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ನನ್ನ ನಾಲ್ಕು ವರ್ಷಗಳ ರಾಜಕೀಯ ಜೀವನದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಪ್ರತಿ ಗ್ರಾಮಗಳ ಯುವಕರ ತಂಡಗಳಿಗೆ ಪ್ರತಿ ವರ್ಷ ಗಣಪತಿ ಮೂರ್ತಿ ಅಥವಾ ಅರ್ಥಿಕ ನೆರವು ನೀಡಲಾಗಿದೆ ಎಂದರು.
ಹೀನ ರಾಜಕಾರಣ
ಮಂಡ್ಯ ಜಿಲ್ಲೆಯಲ್ಲಿ ನೆಲೆಯಿಲ್ಲದ ಬಿಜೆಪಿ ನಾಯಕರು ಜೆಡಿಎಸ್ ಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡು ಅಶಾಂತಿ ಸೃಷ್ಟಿಸಿ ಶಾಂತಿ ಪ್ರಿಯ ಮಂಡ್ಯವನ್ನು ಮಂಗಳೂರು ಮಾಡಲು ಹೊರಟ್ಟಿದ್ದಾರೆ. ಬಡವರ ಮಕ್ಕಳನ್ನು ಪ್ರಚೋದಿಸಿ ಗುಂಪು ಘರ್ಷಣೆಯಲ್ಲಿ ತೊಡಗಿಸಿ, ಅಮಾಯಕರನ್ನು ಬಲಿ ಕೊಡುತ್ತಾರೆ. ಯಾವ ಬಿಜೆಪಿ ನಾಯಕರ ಮಕ್ಕಳು ಗುಂಪು ಘರ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಮಕ್ಕಳು ಉನ್ನತ ವ್ಯಾಸಂಗ ಮಾಡಿಕೊಂಡು ಉತ್ತಮ ಜೀವನ ಮಾಡಿದರೆ,ಬಡವರ ಮಕ್ಕಳು ಕೋಮು ಗಲಭೆಯಲ್ಲಿ ಭಾಗಿಯಾಗಿ ಕೇಸು ಹಾಕಿಸಿಕೊಂಡು ನಿಮ್ಮ ಹೀನ ರಾಜಕೀಯಕ್ಕೆ ಬಲಿಯಾಗಬೇಕಾ ಎಂದು ಪ್ರಶ್ನಿಸಿದರು.
ರಾಮ್ ರಹೀಮ್ ನಗರದಲ್ಲಿ ನಡೆದಿರುವ ಘಟನೆ ಬಗ್ಗೆ ನಮಗೂ ನೋವಿದೆ, ಶಾಂತಿ ಪ್ರಿಯ ಮಂಡ್ಯವನ್ನು ಮಂಗಳೂರು ಮಾಡಲು ಹೊರಟಿರುವ ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರಿಗೆ ನಮ್ಮ ಅಧಿಕಾರಾವಧಿಯಲ್ಲಿ ಮದ್ದೂರಿನಲ್ಲಿ ನಡೆದಿರುವ ರೈತ ಪರ ಯೋಜನೆಗಳು ರಸ್ತೆ ಅಭಿವೃದ್ದಿಗಳನ್ನು ಕಂಡು ಜ್ಞಾನೋದಯವಾಗಬೇಕು ಎಂದರು.
ಸುಮಲತಾಗೆ ಅರಿವಿಲ್ಲ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ರಾಜಕೀಯ ಪೂರ್ಣ ಅರಿವು ಇಲ್ಲ, ಪ್ರಸ್ತುತ ಬಿಜೆಪಿಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಬಡವರಿಗೆ ನೀಡಿರುವ ಪಂಚ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಸರ್ವ ಜನಾಂಗದ ಹಿತ ಕಾಂಗ್ರೆಸ್ ಗುರಿ
ಬಡಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ವಿಪಕ್ಷ ನಾಯಕರು ಜಾತ್ಯತೀತ ಮತ್ತು ಧರ್ಮಾತೀತವಾಗಿ ಯೋಜನೆ ಅನುಷ್ಠಾನಗೊಳಿಸಿರುವ ಬಗ್ಗೆ ಭ್ರಮನಿರಸನಗೊಂಡು ಮಾತನಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಇಂದಿರಾಗಾಂಧಿಯವರ ಕಾಲದಿಂದಲೂ ಎಲ್ಲ ಸಮಾಜದವರ ಹಿತ ಕಾಯುವ ಬದ್ಧತೆ ಮೆರೆದಿದೆ ಎಂದರು.
ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಅಣ್ಣೂರು ರಾಜೀವ್, ಚಲುವರಾಜು, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಉಪಸ್ಥಿತರಿದ್ದರು.