ಮಂಡ್ಯ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ತೊರೆಚಾಕನಹಳ್ಳಿ ಸಿ.ಪುಟ್ಟಸ್ವಾಮಿ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಅವರ ₹3.54 ಕೋಟಿ ಅಕ್ರಮ ಆದಾಯವನ್ನು ಪತ್ತೆ ಹಚ್ಚಲಾಗಿದೆ.
ಮಂಡ್ಯದ ನಗರಸಭೆ ಕಚೇರಿ, ತೊರೆಚಾಕನಹಳ್ಳಿಯಲ್ಲಿನ ಮೂರಂತಸ್ತಿನ ಸ್ವಂತ ಮನೆ, ಸಂಬಂಧಿಕರ 2 ಮನೆ ಹಾಗೂ ಮೈಸೂರಿನಲ್ಲಿರುವ ಮೂರಂತಸ್ತಿನ ಸ್ವಂತ ಮನೆ ಮೇಲೆ ದಾಳಿ ನಡೆದಿದೆ.
‘ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ವಾಚ್ಗಳು ದೊರೆತಿವೆ. ಪುಟ್ಟಸ್ವಾಮಿ ಈ ಹಿಂದೆ ಚನ್ನಪಟ್ಟಣ, ಮದ್ದೂರು ಸೇರಿ ಹಲವು ಕಡೆ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿದ್ದರು. ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

ಪುಟ್ಟಸ್ವಾಮಿ ವಿರುದ್ಧ ಈ ಹಿಂದೆ ಸದನ ಸಮಿತಿ ತನಿಖೆ ನಡೆದಿತ್ತು. ವಿಧಾನಪರಿಷತ್ ಸದಸ್ಯರಾದ ಎನ್.ಅಪ್ಪಾಜಿಗೌಡ, ಆರ್.ಚೌಡಾರೆಡ್ಡಿ, ಕೆ.ಟಿ. ಶ್ರೀಕಂಠೇಗೌಡ ಅವರು ಭ್ರಷ್ಟಾಚಾರ, ದಾಖಲೆಗಳ ನಾಶ, ಸರ್ಕಾರಕ್ಕೆ ಬರುವ ಶುಲ್ಕ ತಪ್ಪಿಸುವುದು, ಅಧಿಕಾರ ದುರ್ಬಳಕೆ, ಅಭಿವೃದ್ಧಿ ಕಾರ್ಯದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಸದನದಲ್ಲಿ ಪ್ರಸ್ತಾಪಿಸಿದ್ದರು.
ಹಲವು ಗಂಭೀರ ಆರೋಪ ಎದುರಿಸುತ್ತಿದ್ದ ಪುಟ್ಟಸ್ವಾಮಿ ಅವರನ್ನು ಅರ್ಹತೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ, ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರನ್ನಾಗಿ ನೇಮಿಸಲಾಗಿತ್ತು ಎಂದು ವರದಿಯಾಗಿತ್ತು.
2016ರ ಡಿ.27ರ ರಾತ್ರಿ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಉದ್ಯಮಿ ಕುಮಾರ್ ಎನ್ನುವವರು, ‘ನನ್ನ ಸಾವಿಗೆ ಪುಟ್ಟಸ್ವಾಮಿ ಕಾರಣ’ ಎಂದು ಡೆತ್ನೋಟ್ ಬರೆದಿಟ್ಟಿದ್ದ ಪ್ರಕರಣ ಹೆಚ್ಚು ಸದ್ದು ಮಾಡಿತ್ತು.


