ಮಂಡ್ಯ ವಿಧಾನಸಭಾ ಕ್ಷೇತ್ರದ ವಿ.ಸಿ.ನಾಲೆ ವ್ಯಾಪ್ತಿಯ ಪಿಕಪ್, ಸಂಪರ್ಕ, ಶಾಖಾ ನಾಲೆಗಳ ಅಭಿವೃದ್ಧಿಗೆ ಜಲಸಂಪನ್ಮೂಲ ಇಲಾಖೆಯಿಂದ ೧೦೦ ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ಗೌಡ ಗಣಿಗ ತಿಳಿಸಿದರು.
ಮಂಡ್ಯನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬೆಳಗಳಿಗೆ ಅನುಕೂಲವಾಗಲೆಂದು ಹಣ ಬಿಡಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇದಕ್ಕೆ ಸಹಕಾರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದು ಹೇಳಿದರು.
ಕಳೆದ ಎರಡೂವರೆ ವರ್ಷದಲ್ಲಿ ೨೦೦ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಕೈಗೊಳ್ಳಲಾಗಿದ್ದು, ಈಗಾಗಲೇ ಶೇ.೮೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ಇನ್ನೂ ೪೦ ಕೋಟಿ ರೂ. ಕಾಮಗಾರಿ ಪ್ರಾರಂಭ ಮಾಡಬೇಕಾಗಿದೆ. ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ ೩೫೦ ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ಈಗಾಗಲೇತಾಂತ್ರಿಕ ಅನುಮೋದನೆ ದೊರೆತಿದ್ದು, ಸಂಪುಟದಲ್ಲಿ ಇಟ್ಟು ಅನುಮೋದನೆ ಪಡೆಯಲಾಗುವುದು. ಅನುಮೋದನೆ ನಂತರ ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮಂಡ್ಯ ನಗರಕ್ಕೆ ಹೊಸರೂಪ ಕೊಡಲುಮುಂದಾಗಿದ್ದು, ಡೆಲ್ಟಾ ಮೂಲಕ ಮಹಾನಗರ ಪಾಲಿಕೆ ಮಾದರಿಯಲ್ಲಿ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂಪಟದವರೆಗೆ ಉತ್ತಮ ರೀತಿಯ ರಸ್ತೆ, ಫುಟ್ಪಾತ್, ಸೈಕಲ್ ವೇ ನಿರ್ಮಿಸಲಾಗುವುದು. ಜೊತೆಗೆ ಬನ್ನೂರು ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.ಹೊಸಹಳ್ಳಿ ವೃತ್ತದ ಅಭಿವೃದ್ಧಿಗೆ ೧.೫ ಕೋಟಿ ಬಿಡುಗಡೆಯಾಗಿದೆ. ನಗರಸಭೆ ಮೂಲಕ ಹಣ ಬಿಡುಗಡೆಯಾಗಿ ವಿದೇಶಿ ಮಾದರಿಯಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಲಾಗುವುದು. ವಿ.ವಿ.ರಸ್ತೆಗೆ ೪ ಕೋಟಿ ವೆಚ್ಚದಲ್ಲಿ ನಗರಸಭೆ ಮತ್ತು ಡೆಲ್ಟಾ ಮೂಲಕ ಸಂಪೂರ್ಣ ಅಭಿವೃದ್ಧಿಪಡಿಸಿ, ಸ್ಕಾಂಟ್ಲ್ಯಾಂಡ್ನ ರಸ್ತೆಯ ಮಾದರಿಯಲ್ಲಿ ವಾಹನ ಮುಕ್ತ ರಸ್ತೆಯನ್ನಾಗಿ ಪರಿವರ್ತಿಸುವ ಮೂಲಕಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಮೈಷುಗರ್ ಹೊಸ ಕಾರ್ಖಾನೆ ನಿರ್ಮಿಸುವ ಬದಲು ಈಗ ಇರುವ ಕಾರ್ಖಾನೆಗೆ ಹೊಸ ಬಾಯ್ಲರ್ ಅಳವಡಿಸಲಾಗುವುದು. ಇದಕ್ಕೆ ೬೦ ಕೋಟಿ ರೂ. ಖರ್ಚಾಗಲಿದ್ದು, ಟೆಂಡರ್ ಸಹ ಕರೆಯಲಾಗಿದೆ. ಇದಿಷ್ಟೇ ಅಲ್ಲದೇ ೩೩ ಕೋಟಿ ರೂ. ವೆಚ್ಚದಲ್ಲಿ ಮಂಡ್ಯಕ್ಕೆ ಕಾರ್ಮಿಕ ವಸತಿ ಶಾಲೆಯನ್ನು ಬಜೆಟ್ನಲ್ಲಿ ಮಂಜೂರುಮಾಡಲಾಗಿದೆ. ಇದರ ಜೊತೆಗೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ೩೫ ಕೋಟಿ ರೂ. ವೆಚ್ಚದಲ್ಲಿ ಅಬ್ದುಲ್ ಕಲಾಂ ಆಜಾದ್ ವಸತಿ ಶಾಲೆಯನ್ನು ಬಿ.ಹೊಸೂರು ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಎರಡೂವರೆ ಎಕರೆ ಜಾಗ ಮಂಜೂರಾಗಿದ್ದು, ಇನ್ನು ೨.೫ ಎಕರೆ ಜಾಗ ಬೇಕಾಗಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿ ಉಳಿದ ಜಾಗ ಮಂಜೂರು ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.ಅಮೃತ್ ೧ ಯೋಜನೆಯಡಿ ನಗರದ ೧೨ ವಾರ್ಡ್ಗಳಲ್ಲಿ ಈಗಾಗಲೇ ೨೪*೭ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ೨೩ ವಾರ್ಡ್ಗೆ ಕುಡಿಯುವ ನೀರು ಒದಗಿಸಲು ಸದನದಲ್ಲಿ ಚರ್ಚೆ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ೧೫೦ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಶೀಘ್ರದಲ್ಲಿಯೇ ಅದನ್ನು ಜಾರಿಗೊಳಿಸುವ ಮೂಲಕ ಇಡೀಮಂಡ್ಯ ನಗರದ ಎಲ್ಲ ವಾರ್ಡ್ಗಳಿಗೂ ೨೪*೭ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ನನ್ನ ಗುರಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ತ್ಯಾಗರಾಜು ಉಪಸ್ಥಿತರಿದ್ದರು.


