ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕುಮ್ಮಕ್ಕು:ಮಂಡ್ಯ ನಗರಸಭೆ ಅಧಿಕಾರಿಗಳ ವಿರುದ್ದ ‘ಲೋಕಾ’ದೂರು ದಾಖಲು
ಮಂಡ್ಯ ನಗರಸಭೆಯ ವ್ಯಾಪ್ತಿಯಲ್ಲಿ ಅನುಮೋದಿತ ನಕ್ಷೇ ಉಲ್ಲಂಘಿಸಿ ಹಾಗೂ ನಿಯಮಾನುಸಾರ ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸಲು ಕುಮ್ಮಕ್ಕು ನೀಡಿದ್ದಾರೆಂದು ಮಂಡ್ಯ ನಗರಸಭೆಯ ಅಧಿಕಾರಿಗಳ ವಿರುದ್ದ ಮಂಡ್ಯ ಲೋಕಾಯುಕ್ತ ಕಚೇರಿಯಲ್ಲಿ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಅವರು
ಮಂಡ್ಯ ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ವಾಣಿಜ್ಯ ಹಾಗೂ ವಸತಿ ಬಳಕೆಗೆ ನೂರಾರು ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.ಈ ಕಟ್ಟಡಗಳ ನಿರ್ಮಾಣಕ್ಕು ಮುನ್ನಾ ಸಕ್ಷಮ ಪ್ರಾಧಿಕಾರವಾದ ನಗರಸಭೆಯಿಂದ ಅಗತ್ಯ ಅನುಮತಿ ಹಾಗೂ ಉದ್ದೇಶಿತ ಕಟ್ಟಡದ ನಕ್ಷೇಯ ಅನುಮೋದನೆ ಪಡೆದಿರುತ್ತಾರೆ.
ಈ ಕಟ್ಟಡಗಳ ನಿರ್ಮಾಣ ಆರಂಭವಾಗುತ್ತಿದ್ದಂತೆ ನಗರಸಭೆಯ ರೆವಿನ್ಯೂ ಅಧಿಕಾರಿಗಳು ಇಂಜನೀಯರುಗಳು ಕಾಲಕಾಲಕ್ಕೆ ಸ್ಥಳ ಪರಿಶೀಲನೆ ನಡೆಸಿ ಕಟ್ಟಡವು ಅನುಮೋದಿತ ನಕ್ಷೇ ಉಲ್ಲಂಘನೆಯಾಗದಂತೆ ಹಾಗೂ ಸೆಟ್ ಬ್ಯಾಕ್ ಬಿಟ್ಟಿರುವುದನ್ನು ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯದ ಭಾಗವಾಗಿರುತ್ತದೆ. ನಕ್ಷೇ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಲ್ಲಿ ಅಗತ್ಯ ಕ್ರಮ ಜರುಗಿಸಿ ನಕ್ಷೇ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕಿರುತ್ತದೆ.
ಆದರೆ ಮಂಡ್ಯ ನಗರಸಭೆಯ ಇಂಜಿನಿಯರುಗಳು ರೆವಿನ್ಯೂ ಅಧಿಕಾರಿಗಳು ಅಕ್ರಮ ಕಟ್ಟಡ ನಿರ್ಮಾಣಕಾರರ ಜತೆ ಶಾಮೀಲಾಗಿ ನಕ್ಷೇ ಉಲ್ಲಂಘನೆ ಹಾಗೂ ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಾಣವಾಗಲು ಕುಮ್ಮಕ್ಕು ನೀಡಿ ಅಕ್ರಮ ನಿರ್ಮಾಣಕ್ಕೆ ಕಾರಣವಾಗಿರುತ್ತಾರೆ ಎಂದು ದೂರಿದ್ದಾರೆ.
ಮಂಡ್ಯ ನಗರದಲ್ಲಿ ನಿರ್ಮಾಣವಾಗುತ್ತಿರುವ ಶೇ99 ಕಟ್ಟಡಗಳು ನಕ್ಷೇ ಉಲ್ಲಂಘನೆ ಹಾಗೂ ಸೆಟ್ ಬ್ಯಾಕ್ ಬಿಡದೆ ನಿರ್ಮಾಣವಾಗುತ್ತಿವೆ.
ಇದರಿಂದ ರಸ್ತೆಗಳು ಚರಂಡಿಗಳು ರಾಜಕಾಲುವೆಗಳು ಅತಿಕ್ರಮಣವಾಗಿ ಸಾರ್ವಜನಿಕರು ಮುಕ್ತವಾಗಿ ಸಂಚರಿಸುವುದು ಕಷ್ಟವಾಗಿರುತ್ತದೆ.
ಮಳೆ ಬಂದಾಗ ರಾಜ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ಮಳೆ ನೀರಿನ ಜತೆಗೆ ಚರಂಡಿ ನೀರು ನುಗ್ಗುವುದು ಸರ್ವೆಸಾಮಾನ್ಯವಾಗಿದೆ.
ಈ ಸಂಬಂದ ಸಾರ್ವಜನಿಕರು ದೂರು ಕೊಟ್ಟ ನಿರ್ದಿಷ್ಟ ಪ್ರಕರಣಗಳಲ್ಲಿ ಬೆರಳೆಣಿಕೆಯ ನೋಟಿಸ್ ನೀಡಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಾನೂನುಬದ್ದ ಯಾವುದೆ ತಡೆ ಒಡ್ಡಿರುವುದಿಲ್ಲ.
ತಾವು ಕ್ರಮ ಕೈಗೊಳ್ಳದೆ ದೂರು ಕೊಟ್ಟವರನ್ನೆ ಅಕ್ರಮ ಕಟ್ಟಡ ನಿರ್ಮಾಣಕಾರರು ಬೆದರಿಸಲು ಇಲ್ಲವೆ ಅನ್ಯ ಮಾರ್ಗಗಳಿಂದ ಸುಮ್ಮನಾಗಿಸುವಂತೆ ಮಾಡಲು ಅಗತ್ಯ ಉಪಾಯಗಳನ್ನು ಹೇಳಿಕೊಡುವವರಾಗಿ ನಗರಸಭೆ ಅಧಿಕಾರಿಗಳು ಬದಲಾಗಿದ್ದಾರೆ ಎಂದು ದೂರಿದ್ದಾರೆ.
ಅಕ್ರಮ ಕಟ್ಟಡಗಳ ನಿರ್ಮಾಣದಿಂದ ರಸ್ತೆ ಒತ್ತುವರಿ.ಚರಂಡಿ ಒತ್ತುವರಿ ಪಾರ್ಕಿಂಗ್ ಸಮಸ್ಯೆ ಉದ್ಬವಿಸಿ ಮಂಡ್ಯ ನಗರ ಅವ್ಯವಸ್ಥಿತ ಕಾಂಕ್ರೀಟ್ ಕಾಡಾಗುತ್ತಿದೆ.ರಾಜ ಕಾಲುವೆ ಒತ್ತುವರಿಯಿಂದ ರಸ್ತೆಯಲ್ಲಿ ಹರಿಯುವ ಮಳೆ ನೀರು ಚರಂಡಿ ನೀರಿನೊಂದಿಗೆ ಮನೆಗಳಿಗೆ ನುಗ್ಗುತ್ತಿದೆ.
ಮಂಡ್ಯ ನಗರದ ವಾರ್ಡ್ ನಂ 1 ಲಕ್ಷೀ ಜನಾರ್ಧನಾ ದೇವಾಲಯ ರಸ್ತೆ.
ಅಶೋಕ ನಗರದ ಮಹಿಳಾ ಸಮಾಜ ಕಟ್ಟಡ.ಅದೇ ರಸ್ತೆಯ ಅಕ್ರಮ ಕಟ್ಟಡ ನಿರ್ಮಾಣ.ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಸರಕಾರಿ ನೌಕರರ ಸಂಘದ ಕಟ್ಟಡ ಸೇರಿದಂತೆ ಯಾವೊಂದು ಪ್ರಕರಣದಲ್ಲು ಕಾಮಗಾರಿ ಸ್ಥಗಿತಗೊಳಿಸುವುದು.ತಾತ್ಕಾಲಿಕ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವುದು ಸೇರಿದಂತೆ ಯಾವುದೆ ಅಗತ್ಯ ಕ್ರಮ ಜರುಗಿರುವುದಿಲ್ಲ.
ನಿರ್ದಿಷ್ಟ ದೂರು ಕೊಟ್ಟ ಪ್ರಕರಣ ಸೇರಿದಂತೆ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಅವರು ದೂರಿದ್ದಾರೆ.
ದೂರಿನಲ್ಲಿ ಈ ವೈಫಲ್ಯಕ್ಕೆ ಮಂಡ್ಯ ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್. ಸಹಾಯಕ ಇಂಜನಿಯರ್ ರಾಜೇಗೌಡ.ಕಂದಾಯಾಧಿಕಾರಿ ರಾಜಶೇಖರ ಹಾಗೂ ಕರ ವಸೂಲಿಗಾರರು ಕಾರಣರೆಂದು ಹೇಳಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಮುಂದಿನ ಕ್ರಮಕ್ಕೆ ಮುಂದಾಗಿದೆ