ಮಂಡ್ಯ : ಜಿಲ್ಲೆಯಲ್ಲಿ 3.571 ವಿದ್ಯಾರ್ಥಿಗಳು ಮಾತೃ ಭಾಷೆ ಕನ್ನಡದಲ್ಲಿ ಅನುತ್ತೀರ್ಣವಾಗಿದ್ದಾರೆ. ಇದಕ್ಕೆ ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ-ಪೋಷಕರು ಕಾರಣ ಎಂದು ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆರೋಪಿಸಿದರು.
ಕಾವೇರಿ ನದಿ ನಮಗೆ ಹೇಗೆ ಜೀವದ್ರವ್ಯವೋ ಅದೇ ರೀತಿ ಕನ್ನಡ ಭಾಷೆ ನಮ್ಮ ಉಸಿರಾಗಿದೆ. ಮಕ್ಕಳಿಗೆ ಸರಿಯಾಗಿ ಕನ್ನಡ ಭಾಷೆ ಕಲಿಸದಿರುವ ಶಿಕ್ಷಕರು, ಶಿಕ್ಷಣ ಇಲಾಖೆ, ಪೋಷಕರು ಕಾವೇರಿ ನೀರು ಇಲ್ಲದೇ ಬದುಕಲು ಹೇಗೆ ಆಗುವುದಿಲ್ಲವೋ ಹಾಗೆಯೇ ಮಾತೃ ಭಾಷೆ ಕನ್ನಡ ಇಲ್ಲದೆ ಬದುಕಲು ಸಾಧ್ಯವಾಗುವುದಿಲ್ಲ ಎಂಬ ವಾತಾವರಣ ನಿರ್ಮಾಣ ಮಾಡಲೇಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾವೇರಿ ನೀರು ತಮಿಳುನಾಡಿಗೆ ನಿರಂತರವಾಗಿ ಹರಿಸುವ ಕೆಲಸ ಮಾಡಿದಂತೆ ಕನ್ನಡ ಭಾಷೆಯನ್ನು ನಾವುಗಳು ಹತ್ತಿಕ್ಕುತ್ತಿದ್ದೇವೆ ಎಂದರು.
ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸಿದರೆ ಮಾತ್ರ ಕನ್ನಡ ತಾಯಿ ಭಾಷೆ ಉಳಿದೀತು. ಕೊನೆ ಪಕ್ಷ 7ನೇ ತರಗತಿವರಿಗೆ ಕನ್ನಡದಲ್ಲೇ ಶಿಕ್ಷಣ ನೀಡುವಂತಾಗಬೇಕು. ಶಿಕ್ಷಕರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಸೇರಿಸಿ ಮಕ್ಕಳಿಗೆ ಪಾಠ ಮಾಡಲು ಅವರಿಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು
ಶಿಕ್ಷಕರು ಹಾಗೂ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದಿದ್ದರೆ ಅವರ ಸಂಬಳದಲ್ಲಿ ಕಡಿತ ಮಾಡಬೇಕಾದುದು ಸರ್ಕಾರದ ಕರ್ತವ್ಯ. ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಸರ್ವ ಶ್ರೇಷ್ಠ. ಗುರುದೇವೋಭವ ಎನ್ನುತ್ತಾರೆ. ಇದಕ್ಕೆ ಕಳಂಕ ತರುವ ಪ್ರಯತ್ನ ಶಿಕ್ಷಕರಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಕನ್ನಡದಲ್ಲೇ ಕೇವಲ (ಜಸ್ಟ್ ಪಾಸ್) ಉತ್ತೀರ್ಣ ಆಗುತ್ತಿರುವುದಕ್ಕೆ ಮೊದಲು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚುವಂತಹ ಹುನ್ನಾರ ನಡೆಯುತ್ತಿದೆ. ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಕನ್ನಡ ಶಾಲೆಗಳಿಗೆ
ಈ ಸ್ಥಿತಿ ಬಂದೊದಗಿದೆ. ಐದು ಗ್ಯಾರಂಟಿಗಳ ಬಗ್ಗೆ ಹೆಚ್ಚು ಉತ್ತೇಜನ ನೀಡುತ್ತಿರುವ ಸರ್ಕಾರ, ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವೈಪಲ್ಯ ಖಾಸಗಿ ಶಾಲೆಗಳಿಗೆ ಸಂಪೂರ್ಣ ಲಾಭವಾಗುತ್ತಿದೆ. ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಹೈಟೆಕ್ ಶಾಲೆಗಳನ್ನಾಗಿ ಏಕೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ನಿಜವಾಗಿಯೂ ದೃಢ ಸಂಕಲ್ಪ ಮಾಡಿದರೆ ಕೇವಲ ಒಂದೇ ವರ್ಷದಲ್ಲಿಯೇ ಕನ್ನಡವನ್ನು ಅನ್ನದ ಭಾಷೆಯುಗಿ ಮಾಡಬಹುದು. ಬ್ಯಾಂಕ್, ಅಂಚೆ ಕಛೇರಿ, ರೈಲ್ವೆ ನಿಲ್ದಾಣ, ವ್ಯಾಪಾರಸ್ಥರು ಕನ್ನಡದಲ್ಲೇ ವ್ಯವಹಾರ ಮಾಡುತ್ತಿಲ್ಲ. ಜತೆಗೆ ಕನ್ನಡದಲ್ಲಿ ಮಾತನಾಡುತ್ತಿಲ್ಲ. ಪರಭಾಷೆಯನ್ನೇ ಕಲಿಸುತ್ತಿದ್ದಾರೆ. ಕನ್ನಡಿಗರು ತಮಿಳು, ಮಲೆಯಾಳಿಗಳ ರೀತಿ ಸ್ವಾಭಿಮಾನಿಗಳಲ್ಲ. ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿದರೆ ಉನ್ನತೀಕರಣಗೊಂಡು ನಮಗೆ “ಮತ” ಬರುವುದಿಲ್ಲ ಎಂಬುದು ಸರ್ಕಾರದ ನಿಲುವು. ಏನಿದ್ದರೂ ಗ್ಯಾರಂಟ ಯೋಜನೆಯಿಂದ ಮಾತ್ರ ಮತ ಬರಲಿದೆ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ ಎಂದು ಆಪಾದಿಸಿದರು.
ಐಎಎಸ್, ಐಪಿಎಸ್,
ಕೆಪಿಎಸ್ ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಬರೆದು ಉತ್ತೀರ್ಣರಾಗಬಹುದು. ಇಂಗ್ಲೀಷ್ ವ್ಯವಹಾರ ಜ್ಞಾನಕ್ಕೆ ಮಾತ್ರ ಬೇಕು, ಆದರೆ ಸಾರ್ವಜನಿಕವಾಗಿ ಕನ್ನಡ ಮಾತನಾಡಬೇಕು. ಇದಕ್ಕಾಗಿ ಖಾಸಗಿ ಶಾಲೆಗಳು ಕನ್ನಡ ನೆಲದಲ್ಲಿ ಇದ್ದು ಕನ್ನಡಿಗರೇ ಆಡಳಿತ ನಡೆಸುತ್ತಿದ್ದಾರೆ. ಕನ್ನಡ ಭಾಷೆ ಮಾತನಾಡಿದರೆ ದಂಡ ಹಾಕುವ ಸಂಸ್ಕೃತಿ ಬೆಳೆಯುತ್ತಾ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಅವನತಿಗೆ ಖಾಸಗಿ ಶಾಲೆಗಳ ಹಾವಳಿ ಕಾರಣ. ಖಾಸಗಿ ಶಾಲೆಗಳು ಲಾಭ ಗಳಿಸುವ ಮುಖ್ಯ ಉದ್ದೇಶವಾಗಿದೆ. ಜತೆಗೆ ಪೋಷಕರನ್ನು ಕೆಳ ಮಟ್ಟದಲ್ಲಿ ನೋಡುತ್ತಾರೆ. ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ಹಣವುಳ್ಳವರಿಗೆ ವಿದ್ಯೆ ಎಂಬಂತಾಗುತ್ತದೆ. ಸರ್ಕಾರಿ ಶಾಲೆಗಳು ಬಡವರ ಶಾಲೆಗಳೆಂದು ಹಣೆಪಟ್ಟಿ ಕಟ್ಟಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಕಲಿತರೆ ಉದ್ಯೋಗ ಎಂಬ ವಾತಾವರಣ ಸೃಷ್ಟಿಯಾಗುತ್ತಿದೆ. ಆದರೆ ತಮಿಳು ಹಾಗೂ ಮಲೆಯಾಳಿಗಳು ಅವರ ಮಾತೃಭಾಷೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಜತೆಗೆ ಪ್ರಪಂಚದಲ್ಲಿ ಇವರೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.
ಸಚಿವರು ಮೊದಲು ಕನ್ನಡ ಕಲಿಯಲಿ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಸುಪುತ್ರರಾಗಿದ್ದು ಅವರಿಗೆ ಕನ್ನಡ ಓದಲು-ಬರೆಯಲು ಸರಿಯಾಗಿ ಬಾರದಿರುವುದು ನಾಚಿಕೆಗೇಡಿನ ಸಂಗತಿ. ಹೀಗಾಗಿ ಮೊದಲು ಅವರು ಖಾಸಗಿ ಮನೆ ಪಾಠಕ್ಕೆ ಸೇರಿ ಕನ್ನಡ ಕಲಿತು ಶಿಕ್ಷಣ ಸಚಿವರಾಗಲಿ. ಕನ್ನಡ ನಾಡಿನ ಇತಿಹಾಸದಲ್ಲಿ ಶಿಕ್ಷಣ ಸಚಿವರು ಈ ರೀತಿ ತಪ್ಪು ತಪ್ಪಾಗಿ ಮಾತನಾಡಿ ನಗೆ ಪಾಟಲಿಗೆ ಈಡಾಗಿರಲಿಲ್ಲ. ಶಿಕ್ಷಣ ಸಚಿವರನ್ನು ಶಾಲೆಯ ಮಕ್ಕಳು ಮತ್ತು ಪೋಷಕರು ಕನ್ನಡವನ್ನೇ ತಪ್ಪು ತಪ್ಪಾಗಿ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದರೆ ನಮಗೆ ನೀವು ಬುದ್ದಿ ಹೇಳುತ್ತೀರಾ ಎಂದು ಕೇಳುತ್ತಾರೆ. ಮೊದಲು ಅವರು ಚೆನ್ನಾಗಿ ಕಲಿಯಲಿ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಸಮಿತಿ ಹಿರಿಯ ಸದಸ್ಯ ಬೆಂಜಮಿನ್ ಥಾಮಸ್, ಉಪಾಧ್ಯಕ್ಷ
ಜೋಸೆಫ್ ರಾಮು ಕೀಲಾರ, ಕದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಟಿ.ಡಿ.ಬಸವರಾಜು, ಜಿಲ್ಲಾ ಸಂಘಟನಾ ಸಂಚಾಲಕ ಉಮ್ಮಡಹಳ್ಳಿ ಉಮೇಶ್ ಇತರರಿದ್ದರು.