Sunday, December 22, 2024
spot_img

ಕುವೆಂಪು ಪ್ರತಿಪಾದಿಸಿದ ಮೌಲ್ಯ ನಮ್ಮದಾಗಬೇಕಿದೆ:ವಿಮರ್ಶಕ ನರಹಳ್ಳಿ ಅಭಿಮತ

ಕುವೆಂಪು ಪ್ರತಿಪಾದಿಸಿದ ಮೌಲ್ಯಗಳ ಬೆಳಕಿನ ಹಾದಿ ನಮ್ಮ ಅಗತ್ಯವಾಗಿದೆ
ವಿಮರ್ಶಕ ಡಾ.ನರಹಳ್ಳಿಬಾಲಸುಬ್ರಹ್ಮಣ್ಯ ಪ್ರತಿಪಾದನೆ
ವಿಶ್ವಮಾನವ ಸಂದೇಶ, ವಿಚಾರ ಕ್ರಾಂತಿಗೆ ಆಹ್ವಾನ ಕೈಪಿಡಿ ಬಿಡುಗಡೆ

ಮಂಡ್ಯ, ಮಾ.೧೭: ಕುವೆಂಪು ಪ್ರತಿಪಾದಿಸಿದ ಮೌಲ್ಯಗಳನ್ನು ಇವತ್ತು ನಮ್ಮ ಬೆಳಕನ್ನಾಗಿ ಹಾಗೂ ಹಾದಿಯನ್ನಾಗಿ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.
ಪ್ರಗತಿಪರ ಸಂಘಟನೆಗಳು ನಗರದ ಕರ್ನಾಟಕ ಸಂಘದಲ್ಲಿ ರವಿವಾರ ಆಯೋಜಿಸಿದ್ದ ವಿಶ್ವಮಾನವ ಸಂದೇಶ ಮತ್ತು ವಿಚಾರ ಕ್ರಾಂತಿಗೆ ಆಹ್ವಾನ ಕೈಪಿಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಪ್ರತಿಪಾದಿಸಿದ ಸಹಬಾಳ್ವೆಯ ವಿವೇಕ, ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಬೇಕಾಗಿದೆ ಎಂದರು.
ಸ್ವಾರ್ಥ ಕೇಂದ್ರಿತ ಕೇಂದ್ರಿತ, ವ್ಯಕ್ತಿ ಕೇಂದ್ರಿತ, ಪರಸ್ಪರ ದ್ವೇಷವನ್ನು ಹುಟ್ಟುಹಾಕುತ್ತಿರುವ ಸಮಾಜದಲ್ಲಿ ನಾವು ಪ್ರತಿಪಾದಿಸಬೇಕಾದ ಮೌಲ್ಯ ಯಾವುದೆಂದರೆ ನಾವೆಲ್ಲರೂ ಒಟ್ಟಿಗೆ ಬದುಕುವುದು ಸಾಧ್ಯ ಅನ್ನುವ ಈ ಸಹಬಾಳ್ವೆಯ ವಿವೇಕ ನಮ್ಮ ಮಂತ್ರವಾಗಬೇಕಾಗಿದೆ ಎಂದು ಅವರು ಹೇಳಿದರು.
ರಾಜಕೀಯ ಮತ್ತು ಧರ್ಮ ಸಾಮಾಜಿಕ ರಚನೆಯ ವ್ಯವಸ್ಥೆಯನ್ನು ರೂಪಿಸಿರುವ ಎರಡು ಪ್ರಬಲ ಶಕ್ತಿಗಳಾಗಿವೆ. ಅಧೀನ ಪ್ರವೃತ್ತಿ ಬೆಳೆಸುವ, ಗುಲಾಮಗಿರಿಯನ್ನು ಪೋಷಿಸುವ ಈ ಶಕ್ತಿಗಳು ಇಂದು ಸಮಾಜದ ಮೇಲೆ ಹಿಡಿತ ಸಾಧಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಂತಹ ಅಧೀನ ಪ್ರವೃತ್ತಿಯ ಶಕ್ತಿಗಳನ್ನು ಎದುರಿಸುವ ಶಕ್ತಿ ಕುವೆಂಪು ಸಾಹಿತ್ಯದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮಂಡ್ಯದ ಪ್ರಗತಿಪರ ಸಂಘಟನೆಗಳು ಹೊರತಂದಿರುವ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ವಿಚಾರ ಕ್ರಾಂತಿಗೆ ಆಹ್ವಾನ ಕೈಪಿಡಿ ಮಹತ್ವವುಳ್ಳದ್ದು, ಇದನ್ನು ವಿದ್ಯಾರ್ಥಿ ಯುವಜನರಿಗೆ ವಿತರಿಸಿ ಅರಿವು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.
ಸಾಂಸ್ಕೃತಿಕ ಪ್ರಭುತ್ವ ಮೇಲ್ವರ್ಗದ ಹಿಡಿತದಲ್ಲಿದ್ದ ಕಾಲಘಟ್ಟದಲ್ಲಿ ಕುವೆಂಪು ತಮ್ಮ ಬರವಣಿಗೆ ಮೂಲಕ ಶ್ರೇಣೀಕರಣ ಸಮಾಜ ವ್ಯವಸ್ಥೆಯ ಕೆಳತುದಿಯ ಜನಾಂಗಕ್ಕೆ ಆತ್ಮವಿಶ್ವಾಸ, ಆತ್ಮಗೌರವವನ್ನು ದೊರಕಿಸಿಕೊಟ್ಟಿದ್ದು ಬಹುಶಃ ಇಪ್ಪತ್ತನೇ ಶತಮಾನದ ಬೇರೆ ಯಾವ ಲೇಖಕರಿಗೂ ಸಾಧ್ಯವಾಗಿಲ್ಲ ಎನ್ನುವುದನ್ನು ಇತಿಹಾಸ ಅಥವಾ ಸಾಹಿತ್ಯ ಓದಿದವರು ಗುರುತಿಸಬೇಕಾದ ಬಹಳ ಮುಖ್ಯವಾದ ಮಾತು ಎಂದು ಅವರು ವಿಶ್ಲೇಷಿಸಿದರು.
ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ಹಿಂದೆ ಬ್ರಿಟೀಷರು ಅನುಸರಿಸಿದ ಸಿದ್ದಾಂತವನ್ನೇ ಇಂದು ಸಂಘಪರಿವಾರಿಗಳು ಮಾಡುತ್ತಿದ್ದಾರೆ. ತಮ್ಮ ಅಜೆಂಡಾ ಈಡೇರಿಕೆಗೆ ನಮ್ಮ ಜನರನ್ನೇ ಅಸ್ತçವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ರೈತರು ಭೂಮಿ ಕಳೆದುಕೊಂಡು ಸರ್ವನಾಶವಾಗುವ ಪರಿಸ್ಥಿತಿ ಬಂದಿದೆ. ಇಂತಹ ಸವಾಲುಗಳನ್ನು ಎದುರಿಸಲು ಕುವೆಂಪು ಅವರ ವಿಚಾರ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ವನ್ಯಜೀವಿ ತಜ್ಞರು ಹಾಗೂ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. ಲೇಖಕ ಡಾ.ಜಗದೀಶ್ ಕೊಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾಸ್ ಕೆರಗೋಡು, ಪ್ರಗತಿಪರ ಹೋರಾಟಗಾರ ಟಿ.ಎಲ್.ಕೃಷ್ಣೇಗೌಡ, ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

“ಜನಸಾಮಾನ್ಯರ ಬದುಕಿಗೆ ಪೂರಕವಾಗಿ ಕೆಲಸ ಮಾಡಬೇಕಾದ ರಾಜಕಾರಣ, ಧರ್ಮ ಅತ್ಯಂತ ಭ್ರಷ್ಟವಾಗಿವೆ. ಖಾದಿ ಮತ್ತು ಖಾವಿ ನಡುವಿನ ವ್ಯತ್ಯಾಸ ಗೊತ್ತಾಗುತ್ತಿಲ್ಲ. ರಾಜಕಾರಣಿಗಳು ಧರ್ಮವನ್ನು ಅಸ್ತçವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ವ್ಯಕ್ತಿಗಳು ರಾಜಕಾರಣಿಗಳ ಹಿಂಬಾಲಕರಾಗಿ ಹೋಗುತ್ತಿದ್ದಾರೆ. ದೇವರು, ಧರ್ಮದ ಹೆಸರಿನಲ್ಲಿ ಜನರ ಬ್ರೆನ್ ವಾಷ್ ಮಾಡಿ ತಮ್ಮ ಹಿಡಿತದಲ್ಲಿ ಹಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಶ್ನಿಸುವವರು, ವಿಚಾರವಂತರು ಇವರಿಗೆ ಶತೃಗಳು. ಇದು ನಮ್ಮ ಕಾಲದ ದುರಂತವಾಗಿದೆ.”
-ಡಾ.ನರಹಳ್ಳಿಬಾಲಸುಬ್ರಹ್ಮಣ್ಯ, ಖ್ಯಾತ ವಿಮರ್ಶಕ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!