ಮಂಡ್ಯ: ಸೆ.22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಗಣತಿಯ ವೇಳೆ ಕಾಲಂ ಸಂಖ್ಯೆ 9, 10 ಮತ್ತು 11ರಲ್ಲಿ ಜಾತಿಯನ್ನು ಕುರುಬ ಎಂದು ನೊಂದಾಯಿಸಿಕೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಜಾತಿಗೆ ಯಾವುದೇ ಉಪಜಾತಿಗಳು ಇಲ್ಲ. ತಮ್ಮನ್ನು ತಾವು ಹಾಲುಮತ, ಜೇನು, ಹೆಗ್ಗಡೆ ಹೆಸರಿನಲ್ಲಿ ಕರೆದುಕೊಳ್ಳುವರೆ ಹೊರತು ಅವು ಜಾತಿಗಳಲ್ಲ ಎಂದರು.
ಕಾಂತ ರಾಜು ವರದಿ ಅವೈಜ್ಞಾನಿಕ ಎಂಬ ಕೂಗು ಬಂದಿದೆ. ಅದಲ್ಲದೇ 10 ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆಯ ವರದಿ ಈಗ ಅಪ್ರಸ್ತುತ ಎಂದ ಕಾರಣಕ್ಕೆ ಸರಕಾರ ಮತ್ತೆ ಸಮೀಕ್ಷೆಗೆ ಮುಂದಾಗಿದೆ. ಕುರುಬ ಸಮುದಾಯವು ಜಾತಿ, ಉಪಜಾತಿ, ಜಾತಿಗೆ ಇರುವ ಇನ್ನಿತರ ಸಮಾನಾರ್ಥದ (ಪರ್ಯಾಯ) ಹೆಸರುಗಳು ಈ 3 ಕಾಲಂನಲ್ಲಿಯೂ ಕುರುಬ ಎಂದೇ ನಮೂದಿಸಿಕೊಳ್ಳಬೇಕು ಎಂದು ಹೇಳಿದರು.
ಕುರುಬ ಸಮುದಾಯದ ಕೆಲವು ಪ್ರದೇಶಗಳಲ್ಲಿ ಎಸ್‌ಟಿ ಮೀಸಲು ಪಡೆಯುವ ಸಲುವಾಗಿ ಅಂದರೆ ಬೀದರ್‌ನಲ್ಲಿ ಗೊಂಡ ಎಂದು ನಮೂದಿಸುತ್ತಾರೆ. ಕೊಡಗಿನಲ್ಲಿಯೂ ಸಮುದಾಯಕ್ಕೆ ಎಸ್‌ಟಿ ಮೀಸಲಿದೆ. ಅದನ್ನು ಹೊರತು ಪಡಿಸಿ ಸಮುದಾಯಕ್ಕೆ ಸಮಾನಾರ್ಥದ ಯಾವುದೇ ಪದವಿಲ್ಲ ಎಂದು ಮನವರಿಕೆ ಮಾಡಿದರು.
ಕುರುಬ ಸಮುದಾಯದ ಕುಲಶಾಸ್ರೀಯ ಅಧ್ಯಯನದ ಮೂಲಕ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆಯೆ ಹೊರತು ಮತ್ತೇನು ಕಾರಣವಿಲ್ಲ ಎಂದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು
ಕುರುಬ ಸಮುದಾಯದ ಪರವಾಗಿ ಕೆಲಸವೇ ಮಾಡದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ವಿರುದ್ದ ಅವಾಚ್ಯಶಬ್ದಗಳನ್ನು ಬಳಿಸಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆತಂದದ್ದು ನಾನೇ ಎಂದು ಹೇಳಿಕೊಳ್ಳುತ್ತಾರೆ.ಸಿದ್ದರಾಮಯ್ಯನವರು ಎಬಿಪಿಜೆಡಿ ಸ್ಥಾಪಿಸಿದ್ದರಿಂದ ಜಾತ್ಯಾತೀತ ಮತಗಳ ವಿಭಜನೆ ತಪ್ಪಿಸುವ ಸಲುವಾಗಿ ಸೋನಿಯಾ ಗಾಂಧಿಯವರ ಮನವಿ ಮೇರೆಗೆ ಅವರು ಕಾಂಗ್ರೆಸ್ ಸೇರಿದರೆ ವಿನಾ ವಿಶ್ವನಾಥ್ ರಿಂದಲ್ಲ ಎಂದರು.
ಕಾಗಿನೆಲೆ ಮಠ ಸ್ಥಾಪಿಸಲು ಶ್ರಮಿಸಿದ್ದಾಗಿ ಹೇಳಿಕೊಳ್ಳುವ ವಿಶ್ವನಾಥ್ ಅವರು, ಮೊದಲ ಪೀಠಾಧ್ಯಕ್ಷರ ಪೀಠಧಾರಣೆಯ ವೇಳೆ ವಿಶ್ವನಾಥ್ ಹಾಗೂ ಈಶ್ವರಪ್ಪ ಹಾಜರಿದ್ದದ್ದು ಬಿಟ್ಟರೆ ಬೇರೇನು ಮಾಡಿಲ್ಲ. ವಿಶ್ವನಾಥ್ ಸುಳ್ಳು ಹೇಳುವ ಡೋಂಗಿ ನಾಯಕ. ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸ್ವಾಭಿಮಾನ ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಎಸ್.ಎನ್.ರಾಜು, ಆಂತರಿಕ ಲೆಕ್ಕ ಪರಿಶೋಧಕ ಎಂ.ಮಹೇಶ್, ಸಂಘಟನಾ ಕಾರ್ಯದರ್ಶಿ ಮಹೇಶ್ ಪೂಜಾರಿ, ನಿರ್ದೇಶಕ ಸಿದ್ದರಾಮು ಇದ್ದರು.