ನವದೆಹಲಿ: ಇತಿಹಾಸದಲ್ಲಿ ಮೊದಲ ಬಾರಿಗೆ ಐಎಎಫ್ ನ 8 ವಿಮಾನಗಳು ಸೌದರಿಯ ರಾಜಮನೆತನದ ವಾಯುನೆಲೆಯಲ್ಲಿ ಫೆ.26 ರಂದು ಲ್ಯಾಂಡ್ ಆಗಿದ್ದು, ಉಭಯ ದೇಶಗಳ ರಕ್ಷಣಾ ಸಂಬಂಧದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ.
ಇದನ್ನು ಸೌಹಾರ್ದಯುತ, ಸ್ನೇಹದ ಭೇಟಿ, ಲ್ಯಾಂಡಿಂಗ್ ಎಂದು ವಿಶ್ಲೇಷಿಸಲಾಗುತ್ತಿದ್ದು, ಲ್ಯಾಂಡಿಂಗ್ ಬಳಿಕ ಇಂಧನ ಮರು ತುಂಬಿಸುವುದು ಹಾಗೂ ಪರಿಶೀಲನೆಗಳೂ ನಡೆದಿವೆ.
145 ವೈಮಾನಿಕ ಯೋಧರನ್ನೊಳಗೊಂಡ ಭಾರತೀಯ ತುಕಡಿಗಳು 05 ಮಿರಾಜ್, 02 ಸಿ17, 01 ಐಎಲ್ 78 ಟ್ಯಾಂಕರ್ ಗಳೊಂದಿಗೆ ಸೌದಿಯಲ್ಲೇ ರಾತ್ರಿ ಕಳೆದಿದ್ದು ಬಳಿಕ ಪ್ರಯಾಣ ಮುಂದುವರೆಸಿದ್ದವು.
ಸೌದಿಗೆ ಆಗಮಿಸುತ್ತಿದ್ದಂತೆಯೇ ಭಾರತೀಯ ತುಕಡಿಗಳನ್ನು ಆರ್ ಎಸ್ಎಎಫ್ ಅಧಿಕಾರಿಗಳು ಸ್ವಾಗತಿಸಿದರು. ಭಾರತೀಯ ರಾಯಭಾರಿ ಅಧಿಕಾರಿಯಾದ ಡಾ. ಸುಹೇಲ್ ಏಜಾಜ್ ಖಾನ್, ಕರ್ನಲ್ ಜಿಎಸ್ ಗ್ರೆವಾಲ್ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಇದ್ದರು.
ಯುಕೆಯಲ್ಲಿ ಕೋಬ್ರಾ ವಾರಿಯರ್ 23 ತಾಲೀಮಿನಲ್ಲಿ ಭಾಗವಹಿಸಲು ತುಕಡಿ ಫೆಬ್ರವರಿ 27 ರಂದು ಅಲ್ಲಿಂದ ನಿರ್ಗಮಿಸಿತು.
ರಾಯಭಾರಿ ಡಾ. ಖಾನ್ ತಮ್ಮ ಭಾಷಣದಲ್ಲಿ ಭಾರತ ಹಾಗೂ ಸೌದಿ ಅರೇಬಿಯಾದ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡಿದರು.
ಸೇನಾ ರಾಜತಾಂತ್ರಿಕತೆ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖ ಪಾತ್ರ ಹೊಂದಿದೆ ಎಂದು ರಾಯಭಾರಿ ಡಾ. ಖಾನ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತ- ಸೌದಿ ನಡುವಿನ ರಕ್ಷಣಾ ಸಂಬಂಧಗಳು ಪ್ರಗತಿ ಸಾಧಿಸುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಏರೋ ಇಂಡಿಯಾ ಶೋ ನಲ್ಲಿ ಸೌದಿ ನಿಯೋಗವೂ ಭಾಗಿಯಾಗಿತ್ತು.