ಎನ್‌ಆರ್‌ಐ ಕೋಟಾ ಕೈಬಿಡಿ’
17/11/2025
ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇ15ರಷ್ಟನ್ನು ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾ ಎಂದು ನಿಗದಿ ಮಾಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ಕೂಡಲೇ ಹಿಂಪಡೆಯಬೇಕು ಎಂಬ ಒತ್ತಾಯ ಎಐಡಿಎಸ್‌ಒ ವಿದ್ಯಾರ್ಥಿ ಸಮಾವೇಶದಲ್ಲಿ ವ್ಯಕ್ತವಾಯಿತು.
ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶ ದಲ್ಲಿ ಭಾಗಿಯಾಗಿದ್ದ ಎಲ್ಲರೂ, ಶೇ15ರಷ್ಟು ಎನ್‌ಆರ್‌ಐ ನೀತಿಯು ಬಡ ಕುಟುಂಬದ ವಿದ್ಯಾರ್ಥಿ ಗಳ ಓದುವ ಹಕ್ಕನ್ನು ಕಸಿದುಕೊಳ್ಳು ತ್ತದೆ ಎಂದು ಕಳವಳ ವ್ಯಕ್ತಪಡಿಸಿ ದರು. ಈ ನೀತಿಯ ವಿರುದ್ಧ ಹೋರಾಟ ಸಂಘಟಿಸುವ ನಿರ್ಣಯವನ್ನು ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.
ಭಾರತೀಯ ವೈದ್ಯಕೀಯ ಸಂಘಟನೆಯ ಕರ್ನಾಟಕ ವೃತ್ತಪರರ ರಕ್ಷಣಾ ಕಾರ್ಯಕ್ರಮದ ಅಧ್ಯಕ್ಷ ಡಾ.ಮಧುಸೂದನ ಕರಿಗನೂರು, ‘ಸರ್ಕಾರದ ಈ ನಡೆಯಿಂದ ವೈದ್ಯಕೀಯ ಸೀಟುಗಳ ಶುಲ್ಕ ₹25 ಲಕ್ಷದಷ್ಟಾಗುತ್ತದೆ. ಇದರಿಂದ ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣ ಆಗಲಿದೆ. ಅಷ್ಟು ದುಡ್ಡು ಕೊಟ್ಟು ವೈದ್ಯಕೀಯ ಪದವಿ ಪಡೆದವರು, ಜನರ ಸೇವೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುವುದೇ’ ಎಂದು ಪ್ರಶ್ನಿಸಿದರು.
ಎಐಡಿಎಸ್‌ಒ ಅಖಿಲ ಭಾರತ ಉಪಾಧ್ಯಕ್ಷ ಮೃದುಲ್ ಸರ್ಕಾರ್, ‘ಪಶ್ಚಿಮ ಬಂಗಾಳದಲ್ಲಿ ಇದೇ ನೀತಿ ಜಾರಿಗೆ ಯತ್ನಿಸಿದಾಗ, ವಿದ್ಯಾರ್ಥಿ ಸಂಘಟನೆಗಳ ಹೋರಾಟದ ಫಲವಾಗಿ ಅದನ್ನು ಕೈಬಿಡಲಾಗಿತ್ತು. ಪರಿಣಾಮವಾಗಿ ಅದು ಜಾರಿಯಾಗಲಿಲ್ಲ. ಆದರೆ, ಈಗ ಸರ್ಕಾರ ಮತ್ತೆ ಎನ್‌ಆರ್‌ಐ ಕೋಟಾ ನೀತಿ ಜಾರಿಗೆ ತರುತ್ತಿದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಸಬೇಕಿದೆ’ ಎಂದರು


