ಮಂಡ್ಯ: ೨೦೨೪ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯ ಅಸ್ಮಿತೆಯಾಗಿ ಮೈಷುಗರ್ ವತಿಯಿಂದ ಮಾಧ್ಯಮಗಳಿಗೆ ಜಾಹೀರಾತು ನೀಡಿದ ವಿಷಯದಲ್ಲಿ ಯಾವುದೇ ಲೋಪವಾಗಿಲ್ಲ. ಆದರೂ ಈ ಬಗ್ಗೆ ಭಿನ್ನಾಭಿಪ್ರಾಯಗಳು ಮನಸ್ಸಿಗೆ ನೋವುಂಟುಮಾಡಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಪನಿಯ ಜಾಹಿರಾತಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಮೂಲಕ ತನಿಖೆ ಎಂಬ ವಿಷಯ ಹರಿದಾಡುತ್ತಿದ್ದು ಎಲ್ಲಿಯೂ ಲೋಪವಾಗಿಲ್ಲ. ಚೆಕ್ ಮೂಲಕವೇ ಹಣ ಪಾವತಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ಮೈಷುಗರ್ ನಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ನಾಗರಾಜಪ್ಪನವರ ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಕರಣ ಸುಪ್ರೀಂಕೋರ್ಟಿಗೆ ಹೋದರೂ ಸಹ ವ್ಯವಸ್ಥಿತವಾಗಿ ಉತ್ತಮ ವಕೀಲರ ಮೂಲಕ ಕಾನೂನು ಕ್ರಮಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ರವರು ಮೈಷುಗರ್ ಅಭಿವೃದ್ಧಿಗೆ ಅನುದಾನವನ್ನು ರಾಜ್ಯ ಸರ್ಕಾರದಿಂದಲೇ ಪಡೆಯಬೇಕೆಂಬ ಸ್ಪಷ್ಟ ಅಭಿಪ್ರಾಯ ಹೊಂದಿರುವುದರಿಂದ ನಮ್ಮ ಸರ್ಕಾರದ ವತಿಯಿಂದಲೇ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಮತ್ತು ಇನ್ನಿತರ ಕಾರ್ಯಕ್ಕೆ ಅನುದಾನ ಪಡೆಯಲಾಗುವುದು. ಮೈಷುಗರ್ ಅಭಿವೃದ್ಧಿಯೇ ತಮ್ಮ ಚಿಂತನೆಯಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ಇತ್ತೀಚಿಗೆ ನಡೆದ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದು ಇದಕ್ಕೆ ಕಾರಣಕರ್ತರಾದ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಸಿ.ದೇವಣ್ಣ, ಕೆ.ಎಸ್.ರಾಮಕೃಷ್ಣ, ವೀಣಾ ಶಂಕರ್, ಶ್ರೀಧರ್, ಪುಟ್ಟರಾಮು, ನಾಗರಾಜು ಇದ್ದರು


