ಮಂಡ್ಯ: ‘ಇಲ್ಲಿನ ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಚರ–ಸ್ಥಿರಾಸ್ತಿ ಜಪ್ತಿಗೆ ಲೋಕಾಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಇವರ ಆಸ್ತಿ ಜಪ್ತಿಗೆ ಸರ್ಕಾರ ಕ್ರಮ ವಹಿಸಬೇಕೆಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮನವಿ ಮಾಡಿದರು.
ಅವ್ಯವಹಾರದ ಆರೋಪ ಸಾಬೀತಾಗಿದೆ. ನಾಗರಾಜಪ್ಪ ಅವರಿಂದ ಕಾರ್ಖಾನೆಗೆ ಉಂಟಾಗಿರುವ ನಷ್ಟವನ್ನು ಮರುಪಾವತಿಸಿಕೊಳ್ಳಬೇಕೆಂದು ಕೋರ್ಟ್ ಸೂಚಿಸಿದೆ. ಅದರಂತೆ ₹127 ಕೋಟಿ ವಸೂಲಿಗೆ ಉಪ ಲೋಕಾಯುಕ್ತರಾಗಿದ್ದ ಬಿ.ಎಸ್.ಪಾಟೀಲ್ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಆಸ್ತಿ ಜಪ್ತಿ ಸಂಬಂಧ ತುರ್ತು ಕ್ರಮ ವಹಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದರು.
ಪ್ರಕರಣದ ವಜಾ ಕೋರಿ ನಾಗರಾಜಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಚರ–ಸ್ಥಿರಾಸ್ತಿ ಜಪ್ತಿಯ ಹಾದಿ ಸುಗಮವಾಗಿದೆ. ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಕೂಡಲೇ ಕ್ರಮ ವಹಿಸಬೇಕಿದೆ. ನಾಗರಾಜಪ್ಪ ಆಸ್ತಿಯನ್ನು ವಶಕ್ಕೆ ಪಡೆಯುವ ಅಧಿಕಾರ ಮೈಷುಗರ್ ಕಾರ್ಖಾನೆ ಆಡಳಿತ ಮಂಡಳಿಗೆ ಇಲ್ಲ. ಅದು ಸರ್ಕಾರದಿಂದಲೇ ನಡೆಸಬೇಕಿರುವ ಪ್ರಕ್ರಿಯೆ ಆಗಿರುವುದರಿಂದ ತ್ವರಿತ ಕ್ರಮ ವಹಿಸುವ ಮೂಲಕ ಕಾರ್ಖಾನೆಗೆ ಆಗಿರುವ ನಷ್ಟ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
‘ನಾಗರಾಜಪ್ಪ ಅವರು ಹೊಸ ಮಿಲ್ ಖರೀದಿ, ಡಿಸ್ಟಿಲರಿ ಮಾರಾಟ–ಸೋರಿಕೆ, ಮೈ ರಮ್, ಮೈ ವಿಸ್ಕಿ, ಸಕ್ಕರೆ ಮಾರಾಟದಲ್ಲಿ ಭಾರಿ ಅಕ್ರಮ, ಭ್ರಷ್ಟಾಚಾರ ಎಸಗಿದ್ದಾರೆ. ನಾಗರಾಜಪ್ಪ ಮೈಷುಗರ್ ಅಧ್ಯಕ್ಷರಾಗಿದ್ದ ವೇಳೆ ಕಾರ್ಖಾನೆಗೆ ₹127 ಕೋಟಿ ನಷ್ಟವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖಂಡರಾದ ಸಿ.ಎಂ.ದ್ಯಾವಪ್ಪ, ವೀಣಾ, ಶಂಕರ್, ಲಕ್ಷ್ಮಣ್, ರಾಮಕೃಷ್ಣ ಇದ್ದರು.


