ಏಳು ತಿಂಗಳು ಕಳೆದರು ಬಾರದ ವೇತನ:ಆತ್ಮಹತ್ಯೆಗೆ ಮುಂದಾದ ನಗರಸಭೆ ಗುತ್ತಿಗೆ ನೌಕರ
ರಾಯಚೂರು:ಆ.೯.ಕಳೆದ ಏಳು ತಿಂಗಳಿನಿಂದ ಗುತ್ತಿಗೆದಾರ ವೇತನ ಪಾವತಿಸದ ಕಾರಣ ನಗರಸಭೆಯ ದಾರಿದೀಪ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅಫ್ಸ ರ್ ಆಲೀ ಎಂಬ ಕಾರ್ಮಿಕನೆ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ಆಧಾರಿತ ದಾರಿದೀಪ ಕಾರ್ಮಿಕ ಎನ್ನಲಾಗಿದೆ. ದಾರಿದೀಪ ನಿರ್ವಹಣೆ ಪಡೆದಿರುವ ಗುತ್ತಿಗೆ ಏಜೆನ್ಸಿ ಕಾರ್ಮಿಕರಿಗೆ ವೇತನವನ್ನೆ ನೀಡಿಲ್ಲ ಎನ್ನಲಾಗಿದೆ. ಸಾಕಷ್ಟು ಬಾರಿ ಗುತ್ತಿಗೆದಾರ ಹಾಗೂ ನಗರಸಭೆ ಆಯುಕ್ತರ ಬಳಿ ಕಾರ್ಮಿಕರು ಸಂಬಳಕ್ಕಾಗಿ ಅಂಗಲಾಚಿದರೂ ನಗರಸಭೆಯ ಅಧಿಕಾರಿಗಳು ಗುತ್ತಿಗೆ ಏಜೆನ್ಸಿ ಗಳು ನಿರ್ಲಕ್ಷವಹಿಸಿವೆ.ಇದರಿಂದ ಬೇಸತ್ತ ಅಫ್ಸ್ ರ್ ಆಲೀ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಅಕ್ಕಪಕ್ಕದವರು ಆಲೀಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಆಲೀ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಯಾದಗಿರಿ ಮೂಲದ ಎಚ್ ಕೆ ಎಲೆಕ್ಟ್ರಿಕ್ಸ್ ಎಂಬ ಏಜೆನ್ಸಿ ಮಾಲೀಕ ಮಹಮ್ಮದ್ ಫಾರೂಕ್ ರಾಯಚೂರು ನಗರಸಭೆಯ ದಾರಿದೀಪ ನಿರ್ವಹಣೆ ಗುತ್ತಿಗೆ ಪಡೆದಿದ್ದು.ಬೋರ್ ವೆಲ್ ನರಸಾರೆಡ್ಡಿ ಎಂಬುವರಿಗೆ ಉಪಗುತ್ತಿಗೆ ನೀಡಿದ್ದಾರೆ ಎನ್ನಲಾಗಿದೆ.
ಖಂಡನೆ:ಕಳೆದ ಏಳು ತಿಂಗಳಿನಿಂದ ದಾರಿದೀಪ ಕಾರ್ಮಿಕರಿಗೆ ವೇತನ ನೀಡದೆ ಶೋಷಿಸುತ್ತಿರುವ ಎಚ್ ಕೆ ಎಲೆಕ್ಟಿಕಲ್ಸ್ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಹಾಗೂ ಸಂಬಂದಪಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಾರಿದೀಪ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಆನಂದ್ ಎಂಡಿ ಆಗ್ರಹಿಸಿದ್ದಾರೆ.
ರಾಜ್ಯದ ಬೀದಿದೀಪಗಳ ನಿರ್ವಹಣೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಏಜೆನ್ಸಿಗಳು ಲೂಟಿ ಹೊಡೆಯುತ್ತಿವೆ.ನಿರ್ವಹಣೆಯ ಕರಾರಿನಂತೆ ದಾರಿದೀಪಗಳ ನಿರ್ವಹಣೆಯಾಗುತ್ತಿಲ್ಲ.ದಾರಿದೀಪ ನಿರ್ವಹಣೆ ಗುತ್ತಿಗೆ ಎಂಬುದೆ ಬಹುದೊಡ್ಡ ಹಗರಣವಾಗಿದ್ದು.ಏಜೆನ್ಸಿಗಳಿಗೆ ಕೋಟಿಗಟ್ಟಲೆ ಹಣ ನೀಡುವ ಬದಲು ಆ ಹಣದಲ್ಲೆ ಹಾಲೀ ಕಾರ್ಮಿಕರನ್ನು ಖಾಯಂಗೊಳಿಸಿ ಅರ್ಧದಷ್ಟು ಹಣದಲ್ಲಿ ಬೀದಿದೀಪ ನಿರ್ವಹಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಅಭಿಪ್ರಾಯಪಟ್ಟಿದ್ದಾರೆ