ಸರಕಾರಿ ಶಾಲೆಗಳನ್ನು ಮ್ಯಾಗ್ನಟ್ ಮತ್ತು ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಎಸ್ಡಿಎಂಸಿ ಸಂಘಟನೆ ವತಿಯಿಂದ ಡಿ.೧೩ರಿಂದ ಮೂರು ದಿನ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳ ವಿಲೀನದಿಂದ ೨೫ ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಹಾಗೂ ಖಾಸಗೀ ಶಾಲೆಗಳಿಗೆ ಅನುಕೂಲ ಮಾಡಿಕೊಡಲು ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.
ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕುಟುಂಬದವರ ಹಿಡಿತದಲ್ಲಿದೆ. ರಾಜಕಾರಣಿಗಳು ಹಾಗೂ ಸರಕಾರಿ ನೌಕರರಿಗೆ ಸಿಗುವ ಗುಣಮಟ್ಟದ ಶಿಕ್ಷಣ ಬಡವರ ಮಕ್ಕಳಿಗೂ ಒದಗಿಸುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ರೈತ ಸಂಘದ ಯುವ ಘಟಕ ಅಧ್ಯಕ್ಷ ಸಂತೋಷ್ ಮಂಡ್ಯಗೌಡ ಮಾತನಾಡಿ, ಸರಕಾರ ಎಚ್ಚತ್ತು ರಾಜ್ಯದ ೪೧,೯೦೫ ಪ್ರಾಥಮಿಕ ಶಾಲೆಗಳಲ್ಲೂ ೫ನೇ ತರಗತಿ ವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್ಸಿ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು. ರಾಜ್ಯದ ಪ್ರತಿ ಗ್ರಾ.ಪಂನಲ್ಲೂ ೬ರಿಂದ ೧೨ನೇತರಗತಿವರೆಗೆ ನವೋದಯ ಮಾದರಿ ಸಿಬಿಎಸ್ಸಿ ವಸತಿ ಶಾಲೆ ಶಿಕ್ಷಣ ನೀಡಬೇಕು. ಸರಕಾರಿ ಶಾಲೆಗಳನ್ನು ನಡೆಸಲು ಯೋಗ್ಯತೆ ಇಲ್ಲವಾದಲ್ಲಿ ಶಿಕ್ಷಣ ಇಲಾಖೆಯ ಅನುದಾನವನ್ನು ಎಸ್ಡಿಎಂಸಿ ಖಾತೆಗೆ ವರ್ಗಾಯಿಸಿದರೆ, ಎಸ್ಡಿಎಂಸಿ ಸಂಘವೇ ಶಾಲೆಗಳನ್ನು ನಿರ್ವಹಿಸುತ್ತವೆ. ಮತ್ತು ಸರಕಾರಿ ಶಾಲೆಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಕೋಲಾರ ಜಿಲ್ಲೆಯ ಕಡದನಹಳ್ಳಿ ಗ್ರಾಮದ ಶಿಕ್ಷಕನ ಎಡವಟ್ಟಿನಿಂದ ಸಾವಿಗೀಡಾದ ವಿದ್ಯಾರ್ಥಿಯ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಬೇಕು. ಘಟನೆಗೆ ಕಾರಣನಾದ ಶಿಕ್ಷಕನನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಮುಖಂಡ ಹಲ್ಲೇಗೆರೆ ಹರೀಶ್, ತಗ್ಗಳ್ಳಿ ಎಸ್ಡಿಎಂಸಿ ಅಧ್ಯಕ್ಷ ಅನಿಲ್ಗೌಡ, ಕೂರ್ಗಳ್ಳಿ ರೇವಣ್ಣ ಇದ್ದರು.


