ಹುಣಸೂರು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಎನ್‌ಡಿಎ ಅಭ್ಯರ್ಥಿ ಬೆಂಬಲಿಸಿ ಗೆಲುವಿಗೆ ಕಾರಣರಾದ ನಗರಸಭೆ ಸದಸ್ಯರಾದ ಗೀತಾ ನಿಂಗರಾಜು ಮತ್ತು ಶ್ವೇತಾ ಮಂಜುನಾಥ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ, ವಾರ್ಡ್ ನಂ 24ರ ಸದಸ್ಯೆ ಗೀತಾ ನಿಂಗರಾಜ್ ಮತ್ತು ವಾರ್ಡ್ ನಂ 28ರ ಸದಸ್ಯೆ ಶ್ವೇತಾ ಮಂಜುನಾಥ್ ಅನರ್ಹರಾದವರು. ಮೇ 3ರಂದು ನಡೆದ ಹುಣಸೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಈ ಇಬ್ಬರು ಪಕ್ಷದ ವಿಪ್ ಉಲ್ಲಂಘಿಸಿ ಎನ್‌ಡಿಎ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ, ವಾರ್ಡ್ ನಂ 4ರ ಸದಸ್ಯೆ ಭವ್ಯ ಅವರು, ವಿಪ್ ಉಲ್ಲಂಘಿಸಿ ಮತಚಲಾಯಿಸಿದ ಈ ಇಬ್ಬರು ಸದಸ್ಯತ್ವ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ. ಅವರು ಸೆ. 16 ರಂದು ಗೀತಾ ಮತ್ತು ಶ್ವೇತಾ ಅವರ ಸದಸ್ಯತ್ವ ಅನರ್ಹಗೊಳಿಸಿ ಆದೇಶಿಸಿದೆ.
ಮಂಡ್ಯ ವಿಪ್ ಉಲ್ಲಂಘನೆ ಆದೇಶ ಯಾವಾಗ: ಮಂಡ್ಯ ನಗರಸಭೆಯಲ್ಲು ಕಳೆದ ಆಕ್ಟೋಬರ್ ನಲ್ಲಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.ಈ ಸಂಧರ್ಭದಲ್ಲಿ ಕಾಂಗ್ರೆಸ್ ಹಾಗೂ ಜನತಾದಳದಿಂದ ಕೆಲ ನಗರಸಭಾ ಸದಸ್ಯರು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರು.ಇವರುಗಳನ್ನು ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದಿದೆ.ನವೆಂಬರ್ ೨ ಕ್ಕೆ ಮಂಡ್ಯ ನಗರಸಭೆಯ ಕೌನ್ಸಿಲ್ ಅವಧಿ ಮುಕ್ತಾಯಗೊಳ್ಳಲಿದ್ದು ಈ ಅವಧಿಯೊಳಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಅನರ್ಹತೆಯ ಪ್ರಕರಣವನ್ನು ನಿರ್ಧರಿಸುವುದೋ ಕಾದು ನೋಡಬೇಕಿದೆ.ಪಕ್ಷಾಂತರ ನಿಷೇಧ ಕಾಯ್ದೆಯಡಿ ನಗರಸಭೆ ಸದಸ್ಯರು ಅನರ್ಹಗೊಂಡಲ್ಲಿ ಮುಂದಿನ ಆರು ವರ್ಷ ಯಾವುದೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.