ಹೆಲ್ತ್ ಇನ್ಸ್ಪೆಕ್ಟರ್ ಕಿರುಕುಳ:ಉಡುಪಿ ನಗರಸಭೆಯ ಏಕೈಕ ಚಾಲಕಿ ಆತ್ಮಹತ್ಯೆಗೆ ಯತ್ನ
ಉಡುಪಿ:ಡಿ.೪. ನಗರಸಭೆಯ ಆರೋಗ್ಯ ನಿರೀಕ್ಷಕನ ಕಿರುಕುಳ ತಾಳಲಾರದೆ ಉಡುಪಿ ನಗರಸಭೆಯ ಏಕೈಕ ಮಹಿಳಾ ಚಾಲಕಿ ಸ್ಮಿತಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ ನಗರದಲ್ಲಿ ಇಂದು ನಡೆದಿದೆ.
ನಗರದ ಸ್ವಚ್ಚತೆ ಮನೆ ಮನೆ ಕಸ ಸಂಗ್ರಹಿಸುವ ಆಟೋ ಚಾಲಕಿಯಾಗಿದ್ದ ಸ್ಮಿತಾ ಹೆಲ್ಸ್ ಇನ್ಸ್ ಪೆಕ್ಟರ್ ಸುರೇಂದ್ರ ಕಿರುಕುಳ ತಾಳಲಾರದೆ ಇಂದು ಆಟೋದಲ್ಲೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ನಗರಸಭೆಯ ಮಹಿಳಾ ಚಾಲಕಿಯನ್ನು ಸಾರ್ವಜನಿಕರು ಅಜ್ಜರಕಾಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸದ್ಯ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು.ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಅನಧಿಕೃತ ಆರೋಗ್ಯ ನಿರೀಕ್ಷಕ:ಉಡುಪಿ ನಗರಸಭೆಯ ಏಕೈಕ ಮಹಿಳಾ ಚಾಲಕಿಯಾಗಿದ್ದ ಸ್ಮಿತಾಗೆ ಕಿರುಕುಳ ನೀಡಿರುವ ಹೆಲ್ತ್ ಇನ್ಸ್ ಪೆಕ್ಟರ್ ಸುರೇಂದ್ರ ಮೂಲತಃ ಚಾಲಕನಾಗಿದ್ದು ಅನಧಿಕೃತವಾಗಿ ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.ಈಗಾಗಲೇ ಉಡುಪಿ ನಗರಸಭೆಯಲ್ಲಿ ಮೂವರು ಕಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳಿದ್ದು ಈ ಹುದ್ದೆಗಳು ಭರ್ತಿಯಾಗಿವೆ.ಆದಾಗಿಯೂ ಪ್ರಭಾವ ಬಳಸಿ ಅನಧಿಕೃತವಾಗಿ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಂದ್ರ ನಗರಸಭೆಯ ಏಕೈಕ ಮಹಿಳಾ ಚಾಲಕಿಗೆ ಪ್ರತಿನಿತ್ಯ ಅನಗತ್ಯ ಕಿರುಕುಳ ನೀಡುವುದು.ಅವಧಿ ಮೀರಿ ದುಡಿಯಲು ಒತ್ತಾಯಿಸುವುದು ನಡೆದಿತ್ತು ಎನ್ನಲಾಗಿದೆ.ಈ ಸಂಬಂದ ಕ್ರಮ ಕೈಗೊಳ್ಳುವಲ್ಲಿ ಆಯುಕ್ತ ಮಹೇಶ್ ಅಂಬರಗಿ ಅಸಹಾಯಕರಾದ ಹಿನ್ನೆಲೆಯಲ್ಲಿ ಸ್ಮಿತಾ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಖಂಡನೆ:ಮಹಿಳಾ ಚಾಲಕಿಗೆ ಕಿರುಕುಳ ನೀಡಿದ ಪ್ರಕರಣವನ್ನು ಖಂಡಿಸಿರುವ ಉಡುಪಿ ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ತಪ್ಪಿತಸ್ಥರ ವಿರುದ್ದ ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಹಿಳಾ ಆಯೋಗಕ್ಕೆ ದೂರು:ಏಕೈಕ ಮಹಿಳಾ ಚಾಲಕಿಗೆ ಕಿರುಕುಳ ನೀಡಿದ ಆರೋಗ್ಯ ನಿರೀಕ್ಷಕನನ್ನು ಅಮಾನತ್ತುಗೊಳಿಸಿ ಅಗತ್ಯ ತನಿಖೆ ಎರ್ಪಡಿಸಿ ಸಂತ್ರಸ್ತೆಗೆ ವಿಶ್ವಾಸ ಮೂಡಿಸುವಂತೆ ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದ್ದಾರೆ.ಪ್ರಕರಣದ ಕುರಿತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.


