Monday, December 29, 2025
spot_img

೧೦ ವರ್ಷ ಸೇವೆ ಸಲ್ಲಿಸಿದವರಿಗೆ ಖಾಯಂಭಾಗ್ಯ:ಹೈಕೋರ್ಟ್

ಬೆಂಗಳೂರು: ‘ನಿವೃತ್ತಿ ಹೊಂದಿದಾಕ್ಷಣ ಸೇವಾ ಕಾಯಮಾತಿ ಹಕ್ಕನ್ನು ಕಸಿದು ಕೊಳ್ಳಲಾಗದು’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಗ್ರಾಮ ಪಂಚಾಯ್ತಿಯಲ್ಲಿ 21 ವರ್ಷ ಗುತ್ತಿಗೆ ಆಧಾರದಡಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ರಮೇಶ ವೆಂಕಟರಮಣ ಹೆಗಡೆಯವರಿಗೆ ‘ಸೇವಾ ಕಾಯಮಾತಿ’ ಭಾಗ್ಯ ಕರುಣಿಸಿದೆ.

ಈ ಸಂಬಂಧ ಶಿರಸಿ ತಾಲ್ಲೂಕಿನ ಕುಳವೆ ಗ್ರಾಮದ ರಮೇಶ್‌ ವೆಂಕಟ ರಮಣ ಹೆಗಡೆ (68) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ‘ದಶಕಗಳ ಕಾಲ ವೃತ್ತಿ ಪ್ರಗತಿ ಅಥವಾ ಸಮಾನ ಸಂಭಾವನೆ ಇಲ್ಲದೆ ದುಡಿದ ನೌಕರರ ದುಃಸ್ಥಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ವೈಭವಿ ಇನಾಂದಾರ್‌ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ತಾತ್ಕಾಲಿಕ, ಒಪ್ಪಂದದ ಮೇರೆಗೆ ಅಥವಾ ದಿನಗೂಲಿ ಇಲ್ಲವೇ ಕ್ರೋಡೀಕೃತ ವೇತನ ಪಡೆಯುವ ನೌಕರರು ಯಾವುದೇ ರೀತಿಯ ನೇಮಕಾತಿಗೆ ಒಳಪಟ್ಟಿದ್ದರೂ, ಅವರು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಹುದ್ದೆಯನ್ನು ಅಲಂಕರಿಸಲು ಅರ್ಹತೆ ಪಡೆದ ನಂತರ, ಸೇವಾ ಕ್ರಮಬದ್ಧತೆಗೆ ಒಳಪಡಲು ಅರ್ಹರಾಗಿರುತ್ತಾರೆ’ ಎಂದಿದೆ.

ಒಂದು ವೇಳೆ ಈ ಸೇವಾ ಕ್ರಮಬದ್ಧತೆ ಯನ್ನು ಪರಿಗಣಿಸಲು ನಿರಾಕರಿಸಿದ್ದೇ ಆದರೆ ಅದು ನೇಮಕಾತಿಯ ಶೋಷಣೆಗೆ ಹಿಡಿದ ಕೈಗನ್ನಡಿಯಾಗುತ್ತದೆ’ ಎಂದು ಹೇಳಿದೆ.

‘ಅರ್ಜಿದಾರರು 1994ರಿಂದ 21 ವರ್ಷಗಳ ಕಾಲ ಅಟೆಂಡರ್ ಕಮ್ ಬಿಲ್ ಕಲೆಕ್ಟರ್‌ ಆಗಿ ಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಕಾಯಮಾತಿ ವ್ಯಾಪ್ತಿಯಲ್ಲಿ ಪರಿಗಣಿಸಲೇಬೇಕಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೇವಾ ಕಾಯಮಾತಿಗೆ ಸಂಬಂಧಿಸಿ ದಂತೆ 2006ರ ಕರ್ನಾಟಕ ಸರ್ಕಾರ ಮತ್ತು ಉಮಾದೇವಿ ಮತ್ತಿತರರ ನಡುವಿನ ಪ್ರಕರಣ, 2015ರ ಧರ್ಮಸಿಂಗ್ ಮತ್ತು ಉತ್ತರ ಪ್ರದೇಶ ನಡುವಿನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಈ ಮಹತ್ವದ ತೀರ್ಪುಗಳನ್ನು ಕಡೆಗಣಿಸಿ ರಾಜ್ಯ ಸರ್ಕಾರ ಅರ್ಜಿದಾರರನ್ನು ಮತ್ತೊಂದು ಮೊಕದ್ದಮೆಯ ಚಕ್ರಕ್ಕೆ ತಳ್ಳಬಾರದು’ ಎಂದು ಹೇಳಿದೆ.

ಸೇವೆಯನ್ನು ಕಾಯಂಗೊಳಿಸುವಂತೆ 2014ರಲ್ಲೇ ಹೈಕೋರ್ಟ್‌ ಆದೇಶಿಸಿತ್ತು. ಇದರನ್ವಯ ಗ್ರಾಮ ಪಂಚಾಯಿತಿ ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಅರ್ಜಿದಾರರ ಸೇವೆಯನ್ನು ಕಾಯಂಗೊಳಿಸಿರಲಿಲ್ಲ. ಹೀಗಾಗಿ, ರಮೇಶ್ ವೆಂಕಟರಮಣ ಹೆಗಡೆ ‍ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದರು.

‘ಎಲ್ಲ ಭತ್ಯೆಗಳಿಗೂ ಅರ್ಹ’

‘ರಮೇಶ್‌ ವೆಂಕಟರಾಮ ಹೆಗಡೆಯವರ 10 ವರ್ಷಗಳ ಅವಧಿ ಸೇವೆ ಸಲ್ಲಿಸಿದ ನಂತರದ ಅವಧಿಯ ಸೇವೆಯನ್ನು ಕಾಯಂಗೊಳಿಸಲು, ಅಂದರೆ 2004ರ ಜನವರಿ 9ರಿಂದ ಅನ್ವಯವಾಗುವಂತೆ ಅವರ ಸೇವೆ ಕಾಯಂಗೊಳಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಬಾಕಿ ವೇತನ ಹೊರತುಪಡಿಸಿ 1994ರಿಂದ 2015ರವರೆಗೆ ಎಲ್ಲಾ ಭತ್ಯೆ ಮತ್ತು ಪಿಂಚಣಿಗೂ ಅರ್ಹರಾಗಿದ್ದು, ಅವರಿಗೆ ಎಲ್ಲಾ ಭತ್ಯೆಗಳನ್ನು ನೀಡಬೇಕು’ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!