ಸಂಪಾದಕೀಯ
ಭ್ರೂಣಹತ್ಯೆ ಪ್ರಕರಣ ತನಿಖೆ.ಅಸಲಿ ಮುಖಗಳು ಆಚೆಗೆ ಬರಲಿ
ಮಂಡ್ಯ ಜಿಲ್ಲೆಯ ಪಾಂಡವಪುರ ಸರಕಾರಿ ಆಸ್ಪತ್ರೆಯ ವಸತಿ ಬಡಾವಣೆಯಲ್ಲಿ ದಂಪತಿಗಳಿಬ್ಬರು ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ನಡೆಸುತ್ತಿದ್ದ ಪ್ರಕರಣ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಕೆಲದಿನಗಳ ಹಿಂದಷ್ಟೆ ಪಾಂಡವಪುರ ತಾಲೋಕಿನ ಅಲೆಮನೆಯೊಂದರಲ್ಲಿ ಭ್ರೂಣಪತ್ತೆ ಪರೀಕ್ಷೆ ನಡೆಸುತ್ತಿದ್ದುದ್ದು ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು.
ರಾಜ್ಯದಲ್ಲಿ ಹೆಣ್ಣು ಭ್ರೂಣ ಪರೀಕ್ಷೆ ಹಾಗೂ ಭ್ರೂಣ ಹತ್ಯೆ ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನದ ಕುಖ್ಯಾತಿ ಪಡೆದಿತ್ತು.ನಂತರದ ದಿನಗಳಲ್ಲಿ ಅಷ್ಟಾಗಿ ವರದಿಯಾಗದ ಕಾರಣ ಭ್ರೂಣಹತ್ಯೆ ಸುದ್ದಿಗಳು ಹಿನ್ನೆಲೆಗೆ ಸರಿದಿದ್ದವು.
ಈಗ ಪಾಂಡವಪುರ ತಾಲೋಕೊಂದರಲ್ಲೆ ಎರಡು ಪ್ರಮುಖ ಘಟನೆಗಳು ವರದಿಯಾಗಿವೆ.ಈ ಪ್ರಕರಣದಲ್ಲಿ ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.ಬಂಧಿತರ ಪೈಕಿ ಬಹುತೇಕರು ಕೆಳ ಮಟ್ಟದಲ್ಲಿ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಚಾಲಕರು ಸಹಾಯಕರು ಮಾಹಿತಿದಾರರೆ ವಿನಾ ಇನ್ನುಳಿದ ಅಸಲಿ ಮುಖಗಳನ್ನು ಗುರಿ ಮಾಡುವಲ್ಲಿ ಪೋಲಿಸ್ ತನಿಖೆ ಹಿನ್ನೆಡೆಯಲ್ಲಿದೆ.
ಸಾಮಾನ್ಯವಾಗಿ ಯಾವುದೆ ಅಪರಾಧ ಪ್ರಕರಣ ವರದಿಯಾದಾಗ ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಟರಾದರವರು ಕಾನೂನಿನ ಕೈಗಳಿಂದ ನುಣುಚಿಕೊಳ್ಳುವ ಅವಕಾಶವನ್ನು ವ್ಯವಸ್ಥೆಯೆ ಸೃಷ್ಟಿಸುವಂತೆ ಮಾಡಲಾಗುತ್ತದೆ.
ಭ್ರೂಣಹತ್ಯೆ ಪ್ರಕರಣದಲ್ಲಿ ಕೇವಲ ಕಾಲಾಳುಗಳು ಮಾತ್ರ ಭಾಗೀಯಾಗಿರಲು ಸಾಧ್ಯವಿಲ್ಲ.ಇದರಲ್ಲಿ ವೈದ್ಯರು ಹಾಗೂ ಖಾಸಗಿ ಪ್ರಯೋಗಾಲಯಗಳ ಕೈವಾಡ ಇರುವುದನ್ನು ತಳ್ಳಿ ಹಾಕುವಂತಿಲ್ಲ.ಹೈಟೆಕ್ ಲ್ಯಾಬುಗಳು ಡಯಾಗ್ನೋಸ್ಟಿಕ್ ಕೇಂದ್ರಗಳು ಈಗ ನಾಯಿಕೊಡೆಗಳಂತೆ ತಲೆ ಎತ್ತಿವೆ.ಇವುಗಳಲ್ಲಿ ರಾಜಕಾರಿಣಿಗಳು ವೈದ್ಯರು ಬಂಡವಾಳ ಹೂಡಿರುವುದು ಸುಳ್ಳೇನಲ್ಲ.ಇವುಗಳ ದೈನಂದಿನ ನಿರ್ವಹಣೆಗಾಗಿ ನಿಯಮಬಾಹಿರ ಮಾರ್ಗಗಳನ್ನು ಇವು ತುಳಿದಿವೆ ಎಂಬ ಮಾತಿದೆ.
ಈ ಪ್ರಕರಣದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿಗಳಿಬ್ಬರು ಗುತ್ತಿಗೆ ನೌಕರರಾಗಿದ್ದು ಇವರಿಗೆ ೨೦೧೯ರಿಂದಲೆ ಸರಕಾರಿ ವಸತಿ ಗೃಹವನ್ನು ಮಂಜೂರು ಮಾಡಲಾಗಿದೆ.ನಿಯಮಾನುಸಾರ ಗುತ್ತಿಗೆ ನೌಕರರಿಗೆ ವಸತಿ ಮಂಜೂರು ಮಾಡಲು ಅವಕಾಶವಿಲ್ಲದಿದ್ದರು ನಿಯಮಬಾಹಿರವಾಗಿ ವಸತಿ ಮಂಜೂರು ಮಾಡಲಾಗಿದೆ.ಇದು ಸಂಶಯಾಸ್ಪದ ನಡೆಯಾಗಿದ್ದು.ಈ ದಿಕ್ಕಿನಲ್ಲು ತನಿಖೆ ಸಾಗಬೇಕಿದೆ.ಈಗಾಗಲೇ ನಿಯಮಬಾಹಿರವಾಗಿ ಸರಕಾರಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿರುವವರನ್ನು ಹೊರಹಾಕಲು ಅಗತ್ಯ ಕ್ರಮ ಜರುಗಬೇಕಿದೆ.ಪ್ರಕರಣ ಪಾಂಡವಪುರದಲ್ಲಿ ವರದಿಯಾದ ಮಾತ್ರಕ್ಕೆ ಈ ಜಾಲ ಈ ತಾಲೋಕಿಗೆ ಮಾತ್ರ ಸಿಮೀತವಾಗಿದೆಯೆಂದು ನಿರ್ಧರಿಸಬೇಕಿಲ್ಲ.ಇದು ಸಹಜವಾಗಿಯೆ ಜಿಲ್ಲೆಯ ಉಳಿದ ತಾಲೋಕುಗಳೊಂದಿಗೆ ನಂಟು ಹೊಂದಿರಲು ಸಾಧ್ಯವಿದೆ. ಪೋಲಿಸ್ ತನಿಖೆ ಈ ಪ್ರಕರಣಕ್ಕೆ ಸಿಮೀತವಾಗದೆ ಸಮಗ್ರ ತನಿಖೆಗೆ ಚಾಲನೆ ನೀಡಬೇಕಿದೆ.
ಇನ್ನು ನಾಯಿಕೊಡೆಗಳಂತೆ ತಲೆ ಎತ್ತಿರುವ ಲ್ಯಾಬುಗಳು ಡಯಾಗ್ನೋಷ್ಟಿಕ್ ಕೇಂದ್ರಗಳು ಸರಕಾರದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ನಡೆಯುತ್ತಿದ್ದು.ಇವುಗಳಿಗೆ ಕಾಲಕಾಲಕ್ಕೆ ಅಗತ್ಯ ತಪಾಸಣೆ ನಡೆಸಿ ಕ್ರಮಬದ್ದಗೊಳಿಸುವ ಜವಾಬ್ದಾರಿ ಜಿಲ್ಲೆಯ ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿದ್ದಾಗಿದೆ.ಆದರೆ ಇಲ್ಲು ಸಹ ಇವುಗಳು ಆಟಾಟೋಪಕ್ಕೆ ಯಾವುದೆ ಅಡೆತಡೆ ಇಲ್ಲವಾಗಿರುವುದು ಕಾಣಬರುತ್ತಿದೆ.
ಇಂತಹ ಪ್ರಕರಣಗಳನ್ನು ಕಾನೂನಿನ ಬಲದಿಂದ ಮಾತ್ರವೆ ಹತ್ತಿಕ್ಕಲು ಸಾಧ್ಯವಿಲ್ಲ.ಗಂಡು ಮಗ ಮಾತ್ರ ವಾರಸುದಾರ ಎಂಬ ಮನೋಭಾವನೆಯು ಒಂದು ಕಾರಣವಾಗಿದೆ.ಹೆಣ್ಣುಮಕ್ಕಳು ಕುಟುಂಬಕ್ಕೆ ಹೊರೆ ಹಾಗೂ ಅಭದ್ರ ಎಂಬುದರ ಬದಲು ಹೆಣ್ಣುಮಕ್ಕಳಿಗೆ ಎಲ್ಲ ರಂಗದಲ್ಲು ಪ್ರೋತ್ಸಾಹ ನೀಡುವ ಮೂಲಕ ಗಂಡು ಮಕ್ಕಳಿಗೆ ಸರಿಸಮಾನವಾದ ಅವಕಾಶ ಕಲ್ಪಿಸುವ ಮೂಲಕ ಇಂತಹ ಪ್ರಕರಣಗಳಿಗೆ ತಿಲಾಂಜಲಿ ಹಾಡಬಹುದು