Sunday, July 14, 2024
spot_img

ವಾಕಿಂಗ್ ಎಷ್ಟು ಮುಖ್ಯ ಗೊತ್ತಾ ಫ್ರೆಂಡ್ಸ್’

ನಮ್ಮ ಶರೀರ ಸುಮ್ಮನೇ ಕುಳಿತಿರುವಂತೆ ನಿರ್ಮಾಣಗೊಂಡಿಲ್ಲ. ಅಂತೆಯೇ ಓಡುತ್ತಾ ಇರಲೂ ಅಲ್ಲ, ಬದಲಿಗೆ ದಿನವಿಡೀ ನಡೆದಾಡುತ್ತಾ ಇರುವಂತೆ ನಿರ್ಮಿಸಲ್ಪಟ್ಟಿದೆ. ಇಂದಿನ ಸವಲತ್ತುಗಳಿಂದ ನಡಿಗೆ ಕಡಿಮೆಯಾಗಿದೆ. ನಡಿಗೆಯಿಂದ ವಂಚಿತರಾದಷ್ಟೂ ದೇಹ ಸವಕಲುಗೊಳ್ಳುತ್ತದೆ. ನಡಿಗೆಗಾಗಿ ಪ್ರತ್ಯೇಕ ಸಮಯ ಮತ್ತು ದೂರವನ್ನು ಪಡೆಯಲು ಸಾಧ್ಯವಿಲ್ಲದೇ ಇದ್ದರೂ ಮನೆಯೊಳಗೇ ಆದಷ್ಟೂ ಮಟ್ಟಿಗೆ ನಡೆಯುವ ಮೂಲಕ ಈ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು.

ತಜ್ಞರ ಪ್ರಕಾರ ದಿನಕ್ಕೆ ನಾವು ಹತ್ತು ಸಾವಿರ ಹೆಜ್ಜೆಗಳನ್ನಾದರೂ ನಡೆಯಲೇಬೇಕು. ಈ ಮಾನದಂಡವನ್ನೇ ಇಂದಿನ ಸ್ಪೋರ್ಟ್ ವಾಚುಗಳಲ್ಲಿ ಅಥವಾ ಮೊಬೈಲ್ ಆರೋಗ್ಯ ಆಪ್ ಗಳಲ್ಲಿಯೂ ಬಳಸಲಾಗುತ್ತಿದೆ. ನಡಿಗೆ ಅತ್ಯುತ್ತಮ ಮತ್ತು ಅತ್ಯಂತ ಸರಳವಾದ ವ್ಯಾಯಾಮವಾಗಿದೆ ಹಾಗೂ ನಡೆಯಲು ಸಾಧ್ಯವಾಗುವ ಪ್ರತಿ ವ್ಯಕ್ತಿಯೂ ವಯಸ್ಸು ಲಿಂಗದ ಬೇಧವಿಲ್ಲದೇ ನಡೆಯಲೇಬೇಕು.

ನಮ್ಮ ಸ್ನಾಯುಗಳು, ಮೂಳೆಸಂಧುಗಳು ಮತ್ತು ಮೂಳೆಗಳನ್ನು ಬಲಪಡಿಸುವುದರಿಂದ ತೊಡಗಿ ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತೇಜಿಸುವವರೆಗೂ ನಡಿಗೆ ಹಲವು ಬಗೆಯಲ್ಲಿ ಆರೋಗ್ಯಕರ ಕೊಡುಗೆ ನೀಡುತ್ತದೆ. ಪ್ರತಿದಿನವೂ 30 ನಿಮಿಷಗಳ ಕಾಲ ನಡೆಯುವ ಮೂಲಕ ಪಡೆಯಬಹುದಾದ ಪ್ರಯೋಜನಗಳು ಹಲವಾರು.

ನಡಿಗೆಗೆ ಸರಳ ಪಾದರಕ್ಷೆಯೊಂದೇ ಸಾಕು. ಉಳಿದಂತೆ ಸಡಿಲವಾಗಿರುವ ಗಾಳಿಯಾಡುವ ಬಟ್ಟೆಗಳನ್ನು ತೊಟ್ಟು ನಡಿಗೆಯ ವ್ಯಾಯಾಮವನ್ನು ದಿನದ ಒಂದು ನಿಗದಿತ ಸಮಯದಲ್ಲಿ ನಿರ್ವಹಿಸಿದರೆ ಇನ್ನೂ ಒಳ್ಳೆಯದು. ನಿತ್ಯದ ನಡಿಗೆಯಿಂದ ಪಡೆಯಬಹುದಾದ ಏಳು ಪ್ರಮುಖ ಪ್ರಯೋಜನಗಳು

​ಹೃದಯದ ಮತ್ತು ಶ್ವಾಸಕೋಶಗಳ ಆರೋಗ್ಯ ವೃದ್ದಿಸುತ್ತದೆ

ನಡಿಗೆ ಎಂಬುದು ಹೃದಯ ಮತ್ತು ಶ್ವಾಸಕೋಶಗಳ ಕ್ಷಮತೆಯನ್ನು ಅತಿಯಾಗಿ ಹೆಚ್ಚಿಸದ, ಆದರೆ ಅಗತ್ಯ ಪ್ರಮಾಣದಲ್ಲಿ ಮಾತ್ರವೇ ಬಳಸಿಕೊಳ್ಳುವ ಸರಳ ವ್ಯಾಯಾಮವಾಗಿದೆ. ಈ ಮೂಲಕ ಹೃದಯ ಮತ್ತು ಶ್ವಾಸಕೋಶಗಳು ಉತ್ತಮ ಆರೋಗ್ಯ ಪಡೆಯುತ್ತವೆ ಹಾಗೂ ಇವುಗಳಿಗೆ ಸಂಬಂಧಿತ ರೋಗಗಳು ಆವರಿಸುವ ಸಾಧ್ಯತೆಯೂ ಅಪಾರವಾಗಿ ಕಡಿಮೆಯಾಗುತ್ತದೆ. ಏನಿಲ್ಲವೆಂದರೂ ನಿತ್ಯವೂ ಅರ್ಧ ಘಂಟೆ, ವಾರದಲ್ಲಿ ಐದು ದಿನವಾದರೂ ನಡೆದರೆ ಈ ಅಗತ್ಯತೆ ಪೂರೈಸುತ್ತದೆ. ಆದರೆ, ವಾರದಲ್ಲಿ ಎಂದೂ ರಜೆ ತೆಗೆದುಕೊಳ್ಳದೇ ನಡಿಗೆಯನ್ನು ನಿತ್ಯದ ಅಭ್ಯಾಸವಾಗಿಸಲು ತಜ್ಞರು ಸಲಹೆ ಮಾಡುತ್ತಾರೆ.

​ಕ್ಯಾಲೋರಿಗಳು ದಹಿಸಲ್ಪಡುತ್ತವೆ

ನಮ್ಮ ಆಹಾರದ ಮೂಲಕ ಲಭಿಸುವ ಕ್ಯಾಲೋರಿಗಳು ದಹಿಸಲ್ಪಟ್ಟು ಶಕ್ತಿಯಾಗಿ ಪರಿವರ್ತನೆಯಾಗಲು ಭಾರೀ ವ್ಯಾಯಾಮ ಬೇಕಾಗಿಲ್ಲ, ಬದಲಿಗೆ ನಿತ್ಯದ ಅರ್ಧ ಘಂಟೆಯ ನಡಿಗೆಯೇ ಸಾಕು. ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೂ ಈ ವ್ಯಾಯಾಮ ಬೇಕಾದಷ್ಟಾಯಿತು. ಆದರೆ, ನೀವು ಎಷ್ಟು ಕ್ಯಾಲೋರಿಗಳನ್ನು ದಹಿಸುತ್ತಿದ್ದೀರಿ ಎಂಬುದು ನಿಮ್ಮ ನಡಿಗೆಯ ವೇಗ, ಕ್ರಮಿಸಿದ ಹಾದಿ, ಏರು ತಗ್ಗು, ನಿಮ್ಮ ತೂಕ ಎಲ್ಲವನ್ನೂ ಅವಲಂಬಿಸಿರುತ್ತದೆ.

​ಶಕ್ತಿಯನ್ನು ವೃದ್ದಿಸುತ್ತದೆ

ದಿನವಿಡೀ ಉಲ್ಲಸಿತರಾಗಿರಲು ದೈಹಿಕವಾಗಿ ಚಟುವಟಿಕೆಯಿಂದಿರುವುದು ಅಗತ್ಯ. ಜಡತೆ ಉಲ್ಲಾಸವನ್ನೂ ಕುಗ್ಗಿಸುತ್ತದೆ. ಇದಕ್ಕಾಗಿ ಭಾರೀ ಚಟುವಟಿಕೆಯನ್ನು ಅವಲಂಬಿಸುವ ಅಗತ್ಯವಿಲ್ಲ. ನಿತ್ಯದ ಸರಳ ನಡಿಗೆಯೇ ಸಾಕಾಗುತ್ತದೆ. ಜಡ ಹಿಡಿದಿದೆ ಎಂದು ಅನ್ನಿಸಿದಾಕ್ಷಣ ಎದ್ದು ಕೆಲವು ನಿಮಿಷಗಳ ಕಾಲ ನಡೆದರೆ ಸಾಕು, ನಮ್ಮ ದೇಹ ಶಕ್ತಿಯನ್ನು ವೃದ್ದಿಸಿ ಮಾಡಬೇಕಾದ ಕೆಲಸವನ್ನು ಉಲ್ಲಸಿತರಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ನಡಿಗೆಯಿಂದ ಆಮ್ಲಜನಕದ ಪೂರೈಕೆ ಹೆಚ್ಚುತ್ತದೆ ಹಾಗೂ ಮನಸ್ಸಿಗೆ ಮುದ ನೀಡುವ ನಿಯೋನೆಫ್ರೀನ್ ಮತ್ತು ಎಪಿನೆಫ್ರೀನ್ ನಂತಹ ರಸದೂತಗಳ ಮಟ್ಟಗಳನ್ನು ಹೆಚ್ಚಿಸಲು ನೆರವಾಗುತ್ತದೆ.

​ಸ್ನಾಯುಗಳು ಮತ್ತು ಮೂಳೆಸಂಧುಗಳನ್ನು ಬಲಪಡಿಸುತ್ತದೆ
ನಡಿಗೆಯಿಂದ ವಿಶೇಷವಾಗಿ ನಮ್ಮ ಕೆಳದೇಹದ ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೇ ಕೊಬ್ಬು ಅತಿಯಾಗಿ ತುಂಬಿಕೊಳ್ಳುವ ತೊಡೆ, ನಿತಂಬ ಸೊಂಟಗಳ ಭಾಗದ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ಸಿಗುತ್ತದೆ. ಅಲ್ಲದೇ ನಮ್ಮ ದೇಹದ ಹೆಚ್ಚಿನ ಭಾಗವನ್ನು ಹೊರುವ ಮೂಳೆಸಂಧುಗಳಿಗೆ ಅಗತ್ಯ ಚಲನೆ ನೀಡುವ ಮೂಲಕ ಈ ಭಾಗಗಳ ಆರೋಗ್ಯವನ್ನು ವೃದ್ದಿಸುತ್ತವೆ. ಸ್ನಾಯು ಮತ್ತು ಮೂಳೆಸಂದುಗಳನ್ನು ಬಲಪಡಿಸಲು ಸಮತಟ್ಟಾದ ನೆಲದ ಮೇಲೆ ನಡೆಯುವುದಕ್ಕಿಂತಲೂ ಏರು ತಗ್ಗು ಹೊಂದಿರುವ ನೆಲದ ಮೇಲೆ ನಡೆಯುವುದು ಉತ್ತಮ. ಆಗಾಗ ಸಾಕಷ್ಟು ಮೆಟ್ಟಿಲುಗಳನ್ನು ಏರುವುದು ಇನ್ನೂ ಒಳ್ಳೆಯದು.

​ರಕ್ತದಲ್ಲಿ ಸಕ್ಕರೆಯ ಮಟ್ಟ ತಗ್ಗಿಸಲು ನೆರವಾಗುತ್ತದೆ

ಆಫ್ಟರ್ ದ ಡಿನ್ನರ್ ವಾಕ್ ಅ ಮೈಲ್ ಎಂಬ ಆಂಗ್ಲ ಗಾದೆಯ ಪ್ರಕಾರ, ವಿಶೇಷವಾಗಿ ರಾತ್ರಿಯ ಊಟದ ಬಳಿಕ ಕೊಂಚ ದೂರ ನಡೆದಾಡಿ ಬರುವುದು ಆರೋಗ್ಯಕರ ಅಭ್ಯಾಸವಾಗಿದೆ. ಏಕೆಂದರೆ, ಊಟದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಸ್ವಾಭಾವಿಕವಾಗಿಯೇ ಏರುತ್ತದೆ. ಹೀಗೆ ಏರಿದ ಸಕ್ಕರೆಯನ್ನು ತಕ್ಷಣ ಬಳಸಿಕೊಂಡರೆ, ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿ ಇರುತ್ತದೆ. ಇದು ನಡಿಗೆಯ ಅತ್ಯುತ್ತಮ ಪ್ರಯೋಜನವಾಗಿದೆ.

​ಉದ್ವೇಗ, ಆತಂಕವನ್ನು ನಿವಾರಿಸಲು ನೆರವಾಗುತ್ತದೆ

ಉದ್ವೇಗ ನಿವಾರಣೆಗೆ ಹತ್ತು ನಿಮಿಷದ ನಡಿಗೆಯ ಮೂಲಕ ಪಡೆಯಬಹುದಾದ ಶಮನವನ್ನು ಪಡೆಯಲು ನಲವತ್ತೈದು ನಿಮಿಷದ ಕಠಿಣ ವ್ಯಾಯಾಮ ಬೇಕಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಈ ಸಮಯದಲ್ಲಿ ನಿಸರ್ಗದ ಮಡಿಲಲ್ಲಿದ್ದರೆ ಇನ್ನೂ ಉತ್ತಮ. ಹಸಿರು ಬಣ್ಣ ಹಾಗೂ ನೀರು, ಆಕಾಶ ಮೊದಲಾದವು ಮನಸ್ಸನ್ನು ಇನ್ನಷ್ಟು ಶೀಘ್ರವಾಗಿ ಪ್ರಫುಲ್ಲಗೊಳಿಸುತ್ತವೆ.

​ಕಣ್ಣಿನ ಬೇನೆಯನ್ನು ಶೀಘ್ರವಾಗಿ ತಗ್ಗಿಸುತ್ತದೆ

ನಾವು ಕೆಲಸದ ನಿಮಿತ್ತ ಅತಿ ಹತ್ತಿರದ ವಸ್ತುಗಳನ್ನೇ ದಿನದ ಹೆಚ್ಚಿನ ಸಮಯ ವೀಕ್ಷಿಸಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್ ಪರದೆ ವೀಕ್ಷಿಸುವುದು ಅನಿವಾರ್ಯವಾಗಿದ್ದರಂತೂ ಈ ಪರಿ ವಿಪರೀತವಾಗುತ್ತದೆ. ಆಗಾಗ ಕಣ್ಣುಗಳನ್ನು ನಾವು ದೂರದ ವಸ್ತುಗಳನ್ನು ನೋಡುವ ಮೂಲಕವೂ ವ್ಯಾಯಾಮ ನೀಡಬೇಕಾಗುತ್ತದೆ. ಸತತ ದೃಷ್ಟಿಸುವ ಮೂಲಕ ಕಣ್ಣುಗಳಿಗೆ ಆಯಾಸವಾಗಿದ್ದರೆ ಕೊಂಚ ಹೊತ್ತು ನಡೆದಾಡಿದರೆ ಆಗ ಕಣ್ಣುಗಳು ಸ್ವಾಭಾವಿಕವಾಗಿಯೂ ದೂರದ ವಸ್ತುಗಳಿಗೆ ದೃಷ್ಟಿ ಕೇಂದ್ರೀಕರಿಸುವ ಮೂಲಕ ಅಗತ್ಯವಾಗಿರುವ ವ್ಯಾಯಾಮ ಪಡೆಯುತ್ತವೆ.

ವಾಕ್ ಮಾಡುವಾಗ ಕೆಳಗೆ ನೋಡುತ್ತಾ ಸಾಗುವುದು ಕುತ್ತಿಗೆ ನೋವು ಹಾಗೂ ಊತಕ್ಕೆ ಕಾರಣವಾಗಬಹುದು. ಹೀಗಾಗಿ ಯಾವತ್ತೂ ನಿಮ್ಮ ತಲೆಯನ್ನು ನೇರವಾಗಿ ಇಟ್ಟುಕೊಳ್ಳಿ. ಅದೂ ಅಲ್ಲದೆ ನಡೆಯುವಾಗ ಕೆಳಗೆ ನೋಡುತ್ತಾ ಹೋದರೆ ಕಣ್ಣಿಗೂ ಆಯಾಸ ತರಬಹುದು

ನಡಿಗೆಯ ವೇಳೆ ಯಾವಾಗಲೂ ತೋಳುಗಳನ್ನು ಸಮರ್ಥವಾಗಿ ಬಳಸಬೇಕಾದದ್ದು ಮುಖ್ಯ. ವಾಕಿಂಗ್ ವೇಳೆ ತೋಳುಗಳನ್ನು ಸುಮ್ಮನೆ ಇರಿಸುವ ಬದಲು, ಬೀಸಿದರೆ ಅದೂ ಉತ್ತಮ ವ್ಯಾಯಾಮ ನೀಡುತ್ತದೆ. ಇದು ಸ್ನಾಯುಗಳನ್ನು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ಪ್ರಯೋಜನ ತರುತ್ತದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!