Saturday, November 7, 2026
spot_img

ಜಿಪಂ ತಾಪಂ ಚುನಾವಣೆ:ಚುನಾವಣಾಧಿಕಾರಿಗಳ ನೇಮಕಕ್ಕೆ ಆಯೋಗ ಸೂಚನೆ

**ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ: ಚುನಾವಣಾಧಿಕಾರಿಗಳ ನೇಮಕಕ್ಕೆ ರಾಜ್ಯ ಚುನಾವಣಾ ಆಯೋಗ ಸೂಚನೆ; ನ.16ರೊಳಗೆ ಪ್ರಸ್ತಾವನೆ ಸಲ್ಲಿಸಲು ಗಡುವು**

ಬೆಂಗಳೂರು: ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡುವಂತೆ ರಾಜ್ಯ ಚುನಾವಣಾ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ನ.7ರಂದು ಆಯೋಗದ ಅಧೀನ ಕಾರ್ಯದರ್ಶಿ ಪಿ.ಎಸ್. ಮರಬಳ್ಳಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 6ರ ಪ್ರಕಾರ ಜಿಲ್ಲಾಧಿಕಾರಿಗಳು ಈ ನೇಮಕಾತಿ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

**ಜಿಲ್ಲಾ ಪಂಚಾಯತ್:** ಒಂದು ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಉಪವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು. ತಾಲೂಕಿನಲ್ಲಿ 10ಕ್ಕಿಂತ ಹೆಚ್ಚು ಕ್ಷೇತ್ರಗಳಿದ್ದರೆ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಬಹುದು. ಪ್ರತಿ ಚುನಾವಣಾಧಿಕಾರಿಗೆ ಸಹಾಯಕರಾಗಿ, ತಾಲೂಕು ತಹಸೀಲ್ದಾರರನ್ನು ಹೊರತುಪಡಿಸಿ ತಹಸೀಲ್ದಾರ್ ಹುದ್ದೆಗೆ ತತ್ಸಮಾನ ಅಧಿಕಾರಿಯೊಬ್ಬರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬೇಕು.

**ತಾಲೂಕು ಪಂಚಾಯತ್:** ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲೂಕು ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು. ಪ್ರತಿ ಚುನಾವಣಾಧಿಕಾರಿಗೆ ಸಹಾಯಕರಾಗಿ ಒಬ್ಬ ಉಪ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬೇಕು.

ನೇಮಕಗೊಂಡ ಪ್ರತಿಯೊಬ್ಬ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನು ಯಾವ ಚುನಾವಣಾ ಕ್ಷೇತ್ರ ಅಥವಾ ಕ್ಷೇತ್ರಗಳಿಗೆ ನೇಮಿಸಲಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಬೇಕು ಎಂದು ಆಯೋಗ ಸೂಚಿಸಿದೆ.

**ವಿಶೇಷ ಸೂಚನೆಗಳು:**

– ನೇಮಕಾತಿ ಆದೇಶವನ್ನು ಅಧಿಕಾರಿಗಳ ಪದನಾಮದ ಮೇಲೆ ಹೊರಡಿಸಬೇಕು.
– ಉಪ ವಿಭಾಗಾಧಿಕಾರಿಗಳನ್ನು ಆಯಾ ಉಪ ವಿಭಾಗದ ಕೇಂದ್ರಸ್ಥಾನದ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ, ತಹಸೀಲ್ದಾರರನ್ನು ಆಯಾ ತಾಲೂಕು ಕೇಂದ್ರಸ್ಥಾನದ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಕಡ್ಡಾಯವಾಗಿ ನೇಮಿಸಬೇಕು.
– ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರರ ಜೊತೆಗೆ ಇತರ ಅಧಿಕಾರಿಗಳನ್ನು ನೇಮಿಸುವ ಸಂದರ್ಭದಲ್ಲಿ ಚುನಾವಣಾ ಕಾರ್ಯದಲ್ಲಿ ಅನುಭವವಿರುವವರನ್ನು ಗುರುತಿಸಬೇಕು.
– ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಏಕಕಾಲದಲ್ಲಿ ನಡೆಯುವುದರಿಂದ, ಚುನಾವಣಾ ಪ್ರಕ್ರಿಯೆಯ ಆರಂಭದಿಂದ ಮುಕ್ತಾಯದವರೆಗಿನ ಎಲ್ಲ ಪ್ರಕ್ರಿಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಂಪೂರ್ಣ ತರಬೇತಿ ನೀಡಬೇಕು.

ಆದಷ್ಟು ಬೇಗ ಚುನಾವಣೆ ನಡೆಸಬೇಕಿರುವುದರಿಂದ ವಿಳಂಬ ಮಾಡದೆ, ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಪಟ್ಟಿಯ ಪ್ರಸ್ತಾವನೆಯನ್ನು ಆಯೋಗದ ಅನುಮೋದನೆಗಾಗಿ ನ.16ರೊಳಗೆ ಲಗತ್ತು ನಮೂನೆಗಳಲ್ಲಿ ತಪ್ಪದೇ ಸಲ್ಲಿಸಬೇಕು. ಆಯೋಗದಿಂದ ಅನುಮೋದಿಸಲ್ಪಟ್ಟ ಅಧಿಕಾರಿಗಳನ್ನು ಆಯೋಗದ ಪೂರ್ವಾನುಮತಿ ಇಲ್ಲದೆ ಬದಲಾಯಿಸಬಾರದು. ಆಯೋಗದ ಅನುಮೋದನೆಯ ನಂತರ ನೇಮಕಾತಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ, ಅದರ ಪ್ರತಿಯನ್ನು ಆಯೋಗಕ್ಕೆ ಕಳುಹಿಸಿಕೊಡಬೇಕು ಎಂದು ಸೂಚಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!