ಯಮ ಪಾಶವಾಗುತ್ತಿರುವ ವಿದ್ಯುತ್ ತಂತಿಗಳು.
ಈ ಬಾರಿಯ ಬರಗಾಲದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ .ಇದರಿಂದಾಗಿ ಜನರು ರೈತರು ಕೂಡಾ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದಾರೆ . ರೈತರು ಮತ್ತು ವಿದ್ಯುತ್ ಇಲಾಖೆ ನಡುವೆ ಸಂಪರ್ಕ ಕೊಂಡಿಯಾಗಿರುವ ವಿದ್ಯುತ್ ಲೈನ್ ಗಳು, ಇತ್ತೀಚೆಗೆ ಯಮ ಪಾಶವಾಗಿ ರೈತರು ಮತ್ತು ಯಮನ ಸಂಪರ್ಕ ಸೇತುಗಳಾಗಿ ಬದಲಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ .
ಕೆ.ಆರ್.ಪೇಟೆ ತಾಲ್ಲೂಕಿನ ಲಕ್ಷ್ಮೀಪುರ ಇತ್ತೀಚೆಗೆ ಮಹಿಳೆಯೊಬ್ಬರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತಗುಲಿ ಸಾವನಪ್ಪಿದ್ದರು . ಇದರ ಬೆನ್ನ ಹಿಂದೆಯೆ ನಿನ್ನೆ ಇದೇ ತಾಲ್ಲೂಕಿನ ಬಿಡದಹಳ್ಳಿ ಗ್ರಾಮದ ಶಿವೇಗೌಡ (60) ರವರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಸಾವನಪ್ಪಿದ್ದಾರೆ .
ಇಂತಹ ಸಂಧರ್ಭದಲ್ಲಿ ವಿದ್ಯುತ್ ಇಲಾಖೆ ಸಾವನಪ್ಪಿದ್ದ ಕುಟುಂಬಕ್ಕೆ ಒಂದಷ್ಟು ಪರಿಹಾರ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ . ಪ್ರತಿ ಬಾರಿ ಇದೇ ರೀತಿ ಆದಾಗ ಹಣದ ಪರಿಹಾರ ಒಂದೇ ಆಗುತ್ತಿರುವುದು ನಮ್ಮ ವ್ಯವಸ್ಥೆಯ ಕ್ರೂರ ಕೈಗನ್ನಡಿ ಆಗುತ್ತಿದೆ .
ವಿದ್ಯುತ್ ಪ್ರಸರಣ ಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಅನ್ನು ವಿದ್ಯುತ್ ಪರಿವರ್ತಕಗಳ (TC ) ಮೂಲಕ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲಾಗುತ್ತದೆ . ಇಲ್ಲಿ ವಿದ್ಯುತ್ ಪರಿವರ್ತಕಕ್ಕೆ ಬರುವ ವಿದ್ಯುತ್ ಸರಬರಾಜು ಮಾಡುವ ವೈರ್ ಗಳಲ್ಲಿ ಏನಾದರೂ ವಿದ್ಯುತ್ ಅವಘಡವಾದರೆ ತಾನೇತಾನಾಗಿ ವಿದ್ಯುತ್ ಸರಬರಾಜು ನಿಂತು ಹೋಗುತ್ತದೆ . ಆದರೆ , ವಿದ್ಯುತ್ ಪರಿವರ್ತಕ ದಿಂದ ಪಂಪ್ ಸೆಟ್ ಗೆ ಹೋಗುವ ವಿದ್ಯುತ್ ತಂತಿ ಏನಾದರೂ ತುಂಡಾಗಿ ಬಿದ್ದರೆ ವಿದ್ಯುತ್ ಪರಿವರ್ತಕದಲ್ಲಿರುವ ಅರ್ಥಿಂಗ್ ಮೂಲಕ ಭೂಮಿಗೆ ವಿದ್ಯುತ್ ಹರಿದು ಟಿಸಿಯ ಪ್ಯೂಸ್ ತುಂಡಾಗಬೇಕಾಗುತ್ತದೆ . ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಪ್ರಕ್ರಿಯೆ ಸರಿಯಾಗಿ ನಡೆಯದೆ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದರೂ ವಿದ್ಯುತ್ ಹರಿಯುತ್ತಿರುತ್ತದೆ . ಇದರಿಂದಾಗಿ ಜಮೀನಿನಲ್ಲಿ ಓಡಾಡುವ ರೈತರು ಇವುಗಳನ್ನು ತುಳಿದು ಸಾವನಪ್ಪುವ ಸಂಗತಿಗಳು ಹೆಚ್ಚಾಗುತ್ತಿವೆ . ಇದರ ಜತೆಗೆ ಇಲಾಖೆ ವಿದ್ಯುತ್ ತಂತಿಗಳನ್ನು ಬದಲಾಯಿಸದೇ ಇರುವುದರಿಂದ ತಮ್ಮ ಸಾಮರ್ಥ್ಯ ಕಳೆದುಕೊಂಡು ತುಂಡಾಗುವ ಸಾಧ್ಯತೆ ಹೆಚ್ಚಾಗುತ್ತಿವೆ . ಇದರ ಬಗ್ಗೆ ವಿದ್ಯುತ್ ಇಲಾಖೆ ಸೂಕ್ತ ಕ್ರಮ ವಹಿಸದೇ ಇದ್ದರೆ ಇಂತಹ ಅಪ್ರತ್ಯಕ್ಷ ಕೊಲೆಗಳು ನಿರಂತರವಾಗಿ ಸಾಗುತ್ತಿರುತ್ತವೆ.
ಇದರ ಜತೆಯಲ್ಲಿ ವಿದ್ಯುತ್ ಸಂಪರ್ಕಗಳು ಇರುವ ತೋಟ ತುಡಿಕೆಗಳಲ್ಲಿ ಮಳೆ ಬಂದ ಸಂಧರ್ಭದಲ್ಲಿ ರೈತರು ಎಚ್ಚರಿಕೆಯಿಂದ ಸಂಚರಿಸಬೇಕಿದೆ.ಇಲ್ಲದಿದ್ದಲ್ಲಿ ತುಂಡಾದ ವಿದ್ಯುತ್ ತಂತಿಗಳೇ ಗ್ರಾಮೀಣಾ ಬದುಕಿನ ಜೀವಕ್ಕೆ ಎರವಾಗಲಿವೆ