ಕೆ ಆರ್ ಪೇಟೆ :- ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿಯಾಗಿದ್ದಾರೆಂದು ಪ್ರಕರಣ ದಾಖಲಾಗಿರುವ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಂದ್ರ- ಮಂಜುಳಾ ದಂಪತಿಯ ಪುತ್ರಿ ಪ್ರೇಮಕುಮಾರಿ ಎಲ್. ಆರ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಮೂವರು ಹೆಣ್ಣು ಮಕ್ಕಳು ಹೊಂದಿದ್ದ ದಂಪತಿ ಎರಡನೇ ಮಗಳು ಪ್ರೇಮಕುಮಾರಿ ಎಲ್. ಆರ್ ರನ್ನ 2022 ಮಾರ್ಚ್ ತಿಂಗಳಲ್ಲಿ ಮೈಸೂರಿನ ಎನ್ ಆರ್ ಮೊಹಲ್ಲಾದ ಕುಮಾರಸ್ವಾಮಿ ಪುತ್ರ ರಾಘವೇಂದ್ರರಿಗೆ ಕೃಷ್ಣರಾಜಪೇಟೆಯ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಈ ವೇಳೆ ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ ನಗದನ್ನು ನೀಡಲಾಗಿತ್ತು ಮದುವೆಯಾದ 6 ತಿಂಗಳ ಕಾಲ ದಂಪತಿ ಅನೂನ್ಯವಾಗಿದ್ದರು ಅನಂತರದ ದಿನಗಳಲ್ಲಿ ಪತಿ ರಾಘವೇಂದ್ರ, ಅತ್ತೆ ಅರುಣಾ, ಮಾವ ಕುಮಾರಸ್ವಾಮಿ, ನಾದಿನಿ ರಂಜಿತಾ, ಯತೀಶ, ಮತ್ತು ಸಂಬಂಧಿಕರಾದ ಉಮೇಶ ಮತ್ತು ಕೊಟ್ರೇಶ ರವರು ಹಲವಾರು ಬಾರಿ ಹೆಚ್ಚಿನ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಯನ್ನು ಪೀಡಿಸುತ್ತಿದ್ದರು.ಅಲ್ಲದೆ ವರದಕ್ಷಿಣೆ ತರದಿದ್ದರೆ ಕೊಲೆ ಮಾಡಿ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಈ ಬಗ್ಗೆ ಪೋಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದರು ಎನ್ನಲಾಗಿದೆ.
ಈ ಬಗ್ಗೆ ನ್ಯಾಯ ಪಂಚಾಯಿತಿಗಳು ಸಹ ಆಗಿದ್ದವು, ಪಂಚಾಯಿತಿದಾರರು ಹಾಗೂ ಪೋಲೀಸ್ ಅಧಿಕಾರಿಗಳುರಾಘವೇಂದ್ರ ಮತ್ತು ಕುಟುಂಬದವರಿಗೆ ಪ್ರೇಮಕುಮಾರಿಯನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದರು ಆದರೆ ಪತಿ ರಾಘವೇಂದ್ರ ಮತ್ತು ಮನೆಯವರು ಹೆಚ್ಚಿನ ವರದಕ್ಷಿಣೆ ತರುವವರೆಗೂ ನಿಮ್ಮ ಮಗಳನ್ನು ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿ ಹೋಗಿದ್ದರು.ಎನ್ನಲಾಗಿದೆ.
ಆನಂತರ ಪೋಷಕರು ಸಮಾಧಾನ ಹೇಳಿ ತವರಿನಲ್ಲಿ ಇರಿಸಿಕೊಂಡಿದ್ದರು, ಕಿರುಕುಳದಿಂದ ಬೇಸತ್ತಿದ್ದ ಪ್ರೇಮಕುಮಾರಿ ವಿಧ್ಯಾಭ್ಯಾಸ ಮಾಡಲು ಇಚ್ಚಿಸಿ ಹಾಸನದ ಕೃಷ್ಣ ಕಾಲೇಜಿನಲ್ಲಿ ಪ್ರಥಮ ವರ್ಷದ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದಳು ಅಲ್ಲಿಗೂ ಸಹ ರಾಘವೇಂದ್ರ ಮತ್ತು ಕುಟುಂಬದವರು ಹೋಗಿ ಪದೇ ಪದೇ ವರದಕ್ಷಿಣೆಗಾಗಿ ಬೇಡಿಕೆ ಇಟ್ಟು ಕೊಲೆ ಮಾಡಲು ಸಹ ಪ್ರಯತ್ನಪಟ್ಟಿದ್ದರು ಎಂದು ಹೇಳಲಾಗಿದೆ,
ಕಳೆದ ಒಂದು ವಾರದ ಹಿಂದೆ ರಾಘವೇಂದ್ರ ಮತ್ತು ಕುಟುಂಬದವರು ಒಂದೆಡೆ ಸೇರಿ ಮಾತಾಡಿಕೊಂಡು ವರದಕ್ಷಿಣೆ ತರದಿದ್ದರೆ ಸುಫಾರಿ ಕೊಟ್ಟು ಕೊಲೆ ಮಾಡಿಸುತ್ತೇವೆ ಎಂದು ಹಲವು ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪ್ರೇಮಕುಮಾರಿ ಕಳೆದ ಮಾ.20 ರಂದು ಸಂಜೆ ವೇಳೆ ಲಿಂಗಾಪುರದ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಮುನ್ನ 5 ಪುಟ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಮೃತಳ ತಾಯಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವರದಕ್ಷಿಣೆ ಕಿರುಕುಳ ನೀಡಿದ ಪತಿ ಹಾಗೂ ಅವರ ಮನೆಯವರ ಬಂಧನಕ್ಕೆ ಬಲೆ ಬೀಸಿದ್ದಾರೆ.