ಕೃಷ್ಣರಾಜ ಪೇಟೆ:ಎ.೧೭.ಗ್ಯಾರಂಟಿ ಯೋಜನೆ ನಂಬಿಕೊಂಡು ನಮ್ಮ ಮಹಿಳೆಯರು ತಮ್ಮ ಭವಿಷ್ಯದ ಹಾದಿ ತಪ್ಪುತ್ತಿದ್ದಾರೆ ಎಂದಿದ್ದೇನೆ ಹೊರತು ಬೇರೆ ಅರ್ಥದಲ್ಲಿ ನಾನು ಹೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸ್ಪಷ್ಟನೆ ನೀಡಿದರು.
ಇಂದು ಕೃಷ್ಣರಾಜ ಪೇಟೆಯ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸುತ್ತಿದೆ . ಮಹಿಳೆಯರಿಗೆ ಎರಡು ಸಾವಿರ ಕೊಡಲು ಅದೇ ಮನೆಯ ಯಜಮಾನ ಕುಡಿಯುವ ಮದ್ಯದ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿ ಅದೇ ಹಣವನ್ನು ಮಹಿಳೆಯರಿಗೆ ಕೊಟ್ಟು ಅವರನ್ನು ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದಿದ್ದೇನೆಯೇ ಹೊರತು ನಾನು ಮಹಿಳೆಯರಿಗೆ ಅಗೌರವವಾಗಿ ಮಾತನಾಡಿಲ್ಲ .ಅದರೆ ಕಾಂಗ್ರೆಸ್ ಪಕ್ಷ ನನ್ನ ಹೇಳಿಕೆಯನ್ನು ತಿರುಚಿ ನನ್ನ ವಿರುದ್ಧ ತನ್ನ ಕಾರ್ಯಕರ್ತೆಯರ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಯ ಪರಿಣಾಮವಾಗಿ ಕೇವಲ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ 1.05 ಲಕ್ಷ ಕೋಟಿ ಸಾಲ ಮಾಡಲಾಗಿದೆ.ಇದು ಪ್ರತಿ ನಾಗರೀಕನ ಮೇಲೆ ಸುಮಾರು 40-50 ಸಾವಿರ ಸಾಲ ಹೇರಿಕೆ ಆಗುತ್ತಿದೆ ಎಂದು ಆರೋಪಿಸಿದರು . ನಾನು ಅಧಿಕಾರದಲ್ಲಿ ಇದ್ದಾಗ ಈ ಮಂಡ್ಯದ ವಿಸಿ ನಾಲೆ ರಿಪೇರಿ ಮಾಡಲು ಆದೇಶ ಮಾಡಿದ್ದರೂ ಕೃಷಿ ಕೆಲಸಕ್ಕೆ ತೊಂದರೆ ಆಗದಂತೆ ಆಧುನೀಕರಣ ಮಾಡಿ ಎಂದಿದೆ . ಆದರೆ ಈಗಿನ ಸರ್ಕಾರ ಮಂಡ್ಯ ಲೋಕಸಭಾ ಅಭ್ಯರ್ಥಿಗೆ ಈ ನಾಲೆ ಗುತ್ತಿಗೆ ವಹಿಸಿ ಇಡೀ ವಿಸಿ ನಾಲೆ ಬಯಲನ್ನು ಬೆಂಗಾಡು ಮಾಡಿದೆ ಎಂದು ಗುಡುಗಿದರು . ಕಳೆದ ಚುನಾವಣೆಯಲ್ಲಿ ನಮ್ಮ ನೀರು-ನಮ್ಮ ಹಕ್ಕು ಎಂದು ಮೇಕೆದಾಟು ನಿಂದ ಹೋರಾಟ ಮಾಡಿ ನಿಮಗೆ ನೀರು ಕೊಡುತ್ತೇನೆ ನನ್ನ ಕೈಗೆ ಪೆನ್ನು ಪೇಪರು ಕೊಡಿ ಎಂದು ಹಳೇ ಮೈಸೂರು ಜನರಿಗೆ ಮಂಕುಬೂದಿ ಎರಚಿ ತನ್ನವರನ್ನು ಗೆಲ್ಲಿಸಿಕೊಂಡು ಈಗ ಅದೇ ನೀರನ್ನು ತಮಿಳುನಾಡಿನ ರೈತರಿಗೆ ನೀರು ಬಿಟ್ಟು ನಮ್ಮ ರೈತರ ಜಮೀನನ್ನು ಒಣಗಿಸುತ್ತಿರುವ ಡಿ.ಕೆ.ಶಿವಕುಮಾರ್ ರವರು ರೈತರ ನಂಬಿಕೆಗೆ ಎಷ್ಟು ಅರ್ಹರು ಎಂದು ಪ್ರಶ್ನೆ ಮಾಡಿದರು .
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು , ಯಡಿಯೂರಪ್ಪ ನವರು ತಮ್ಮ ಅಧಿಕಾರಾವಧಿಯಲ್ಲಿ ಹುಟ್ಟೂರಾದ ಕೆ.ಆರ್.ಪೇಟೆ ತಾಲ್ಲೂಕಿಗೆ 1800 ಕೋಟಿ ಅನುದಾನ ಕೊಟ್ಟಿದ್ದಾರೆ . ಆದರೆ ಕಾಂಗ್ರೆಸ್ ಸರ್ಕಾರ ಇದುವರೆಗೂ ಈ ತಾಲ್ಲೂಕಿಗೆ ಒಂದು ಬಿಡಿಗಾಸನ್ನೂ ನೀಡಿಲ್ಲ . ಇಂತಹವರಿಗೆ ಈ ತಾಲ್ಲೂಕಿನಲ್ಲಿ ಜನರ ಓಟು ಕೇಳಲು ಏನು ಅರ್ಹತೆ ಇದೆ ಎಂದು ಪ್ರಶ್ನೆ ಮಾಡಿದರು . ಹಿಂದೆ ರೈತರು 25 ಸಾವಿರ ಹಣವನ್ನು ವಿದ್ಯುತ್ ಇಲಾಖೆಗೆ ಕಟ್ಟಿದರೆ ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬ ಸೇರಿದಂತೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರು . ಆದರೆ ಈ ಸರ್ಕಾರ ಬಂದ ಮೇಲೆ ಎಲ್ಲದಕ್ಕೂ ನಾವೇ ಹಣ ಭರಿಸಬೇಕಾಗಿದೆ ಇದರಿಂದಾಗಿ ರೈತರು ಕನಿಷ್ಠ ಮೂರುವರೆ ಲಕ್ಷ ಹಣ ಕೊಟ್ಟು ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಹಂತಕ್ಕೆ ರೈತರು ಬಂದಿದ್ದಾರೆ ಎಂದರು .
ಮಾಜಿ ಸಚಿವ ಕೆಸಿ ನಾರಾಯಣ ಗೌಡ ಮಾತನಾಡಿ ನಾನು ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವನಾಗಿದ್ದಾಗ 1800 ಕೋಟಿ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿ ಮಾಡಿದ್ದೇನೆ ಎಂದರು . ಜೆಡಿಎಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಹೋಗುವಾಗ ಮಾಜಿ ಕುಮಾರಸ್ವಾಮಿ ರವರಿಗೆ ಹೇಳಿಯೆ ಹೋದೆ ಎಂದು ಅಚ್ಚರಿಯ ಹೇಳಿಕೆ ಹೇಳಿದರು . ಕಳೆದ ಚುನಾವಣೆಯಲ್ಲಿ ನನ್ನ ಎದುರಾಳಿ ಆಗಿದ್ದ ಶಾಸಕ ಹೆಚ್.ಟಿ.ಮಂಜು ರವರು ಗೆಲ್ಲಲು ನಾನು ಸಹ ಪರೋಕ್ಷವಾಗಿ ಸಹಾಯ ಮಾಡಿದೆ . ಅವರು ಗೆದ್ದ ತಕ್ಷಣ ನಾನು 50 ಕೆ.ಜಿ. ಸಿಹಿಯನ್ನು ನನ್ನ ಕಾರ್ಯಕರ್ತರಿಗೆ ಹಂಚಿ ಸಂಭ್ರಮಿಸಿದೆ ಎಂದರು .
ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಮಾತನಾಡಿ , ಈ ಸರ್ಕಾರ ಬಂದ ಮೇಲೆ ತಾಲ್ಲೂಕಿಗೆ ಬಿಡಿಗಾಸು ಅನುದಾನವನ್ನು ನೀಡುತ್ತಿಲ್ಲ . ಇದರಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿದೆ ಎಂದರು .
ಸಭೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪುಟ್ಟರಾಜು , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ , ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ , ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ , ಮನ್ ಮುಲ್ ನಿರ್ದೇಶಕ ಡಾಲು ರವಿ , ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು .