ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ:ಪೋಲಿಸ್ ನಾಯಿದಳ ಪರೀಶೀಲನೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೀಕನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿಗೊಳಿಸಿದ ಪ್ರಕರಣವನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ .
ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ , ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ನೇತೃತ್ವದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ತನಿಖೆ ಕೈಗೊಂಡಿದೆ . ಈ ಸಂಧರ್ಭದಲ್ಲಿ ಮಂಡ್ಯದಿಂದ ಬಂದ ಬೆರಳಚ್ಚು ತಜ್ಞರು ಮತ್ತು ಪೋಲಿಸ್ ನಾಯಿ ದಳದ ತರಬೇತುದಾರ ನಾಗರಾಜ್ ರವರಿಂದ ತರಬೇತಿ ಪಡೆದಿರುವ ಭೈರವ ಎಂಬ ಪೋಲಿಸ್ ನಾಯಿ ರಾಯಣ್ಣ ಪ್ರತಿಮೆಯ ಬಳಿ ಸಾಗಿ ನಂತರ ಬೀಕನಹಳ್ಳಿ ಗ್ರಾಮದಲ್ಲಿ ಅಡ್ಡಾಡಿ.ಗ್ರಾಮದ ವಾಸಿಯೊಬ್ಬರ ಮನೆಯ ಬಳಿ ಸಾಗಿ ನಿಂತಿತು.
ಶಂಕಿತರ ಸುಳಿವಿನ ಬೆನ್ನತ್ತಿದ ಪೋಲಿಸ್ ನಾಯಿ ದಳ ಶಂಕಿತ ದುಷ್ಕರ್ಮಿ ಬೀಕನಹಳ್ಳಿ ಗ್ರಾಮದಲ್ಲಿ ಅಡ್ಡಾಡಿರುವ ಚಹರೆಯನ್ನು ಹುಡುಕುತ್ತಾ ಸಾಗಿ ಒಂದಷ್ಟು ಸಾಕ್ಷ್ಯವನ್ನು ಪೋಲಿಸರಿಗೆ ಒದಗಿಸಿತ್ತು .
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಈರೇಗೌಡ ಇಂತಹ ಕುಕೃತ್ಯ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರು .
ಇದೇ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಐಪನಹಳ್ಳಿ ನಾಗೇಂದ್ರ , ಈ ಕೃತ್ಯ ನಡೆಸಿದ ದುಷ್ಕರ್ಮಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು . ಈ ದುರ್ಘಟನೆ ಸಂಬಂಧಿಸಿದಂತೆ ಕುರುಬ ಸಮಾಜದ ಮುಖಂಡರು ನಾಳೆ ಈ ಗ್ರಾಮದಲ್ಲಿ ಸಭೆ ಸೇರಿ ಅಪರಾಧಿಯನ್ನು ಬಂಧಿಸುವಂತೆ ಒತ್ತಾಯ ಮಾಡಲಿದ್ದೇವೆ ಮತ್ತು ಇದೇ ಜಾಗದಲ್ಲಿ ಹೊಸದಾದ ಪ್ರತಿಮೆಯನ್ನು ಸ್ಥಾಪಿಸಲು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಸಹಾಯ ಹಸ್ತ ಚಾಚಬೇಕೆಂದು ವಿನಂತಿಸಿಕೊಂಡರು .
ನಂತರ ಮಾತನಾಡಿದ ಸಮಾಜದ ಯುವ ಮುಖಂಡ ಶ್ರೀನಿವಾಸ್ ಮುತ್ತಣ್ಣ, ನಾಳೆ ಈ ಘಟನೆ ಸಂಭಂಧಿಸಿದಂತೆ ಇದೇ ಜಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ . ಆದ್ದರಿಂದ ಎಲ್ಲಾ ನಾಗರೀಕರು ಪ್ರತಿಭಟನೆ ಆಗಮಿಸುವಂತೆ ಮನವಿ ಮಾಡಿದರು .
ಈ ಸಂಧರ್ಭದಲ್ಲಿ ಬೀರವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಮಾರ್ ಸೇರಿದಂತೆ ಗ್ರಾಮದ ನಾಗರೀಕರು ತನಿಖೆ ಸಹಕರಿಸಿದರು .