Wednesday, September 18, 2024
spot_img

ಕಳಪೆ ಕಾಮಗಾರಿ ನಿಲ್ಲಿಸಿ.ನಾಲೆಗೆ ನೀರು ಹರಿಸಿ.ರೈತ ಮುಖಂಡರ ಆಗ್ರಹ

ಪಾಂಡವಪುರ : ಕುಂಟುತ್ತಾ ತೆವಳುತ್ತಾ ಆಮೆಗತಿಯಲ್ಲಿ
ಸಾಗಿರುವ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ನಾಲೆಗೆ ನೀರು ಹರಿಸದಿದ್ದರೆ ರೈತರೊಡಗೂಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಕ್ಯಾತನಹಳ್ಳಿ ಎಸ್.ದಯಾನಂದ್ ಎಚ್ಚರಿಸಿದರು.

ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೇ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜೂನ್‌ನಿಂದ ನಾಲೆಗೆ ನೀರು ಹರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕಾಮಗಾರಿಯ ವೇಗ ನೋಡಿದರೆ ಜುಲೈ ಅಂತ್ಯಕ್ಕೂ ಮುಗಿಯುವುದಿಲ್ಲ ಎನ್ನಿಸುತ್ತಿದೆ. ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಿಸುತ್ತಿರುವ ರೈತರು ಈಗಾಗಲೇ ಒಂದು ಹಂಗಾಮಿನ ಬೆಳೆ ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಜೂನ್ ತಿಂಗಳಿನಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ ಮೇ ಅಂತ್ಯದೊಳಗೆ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿ ಜೂನ್ ಎರಡನೇ ವಾರದಲ್ಲಿ ನೀರು ಹರಿಸಲು ಕ್ರಮ ವಹಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸರ್ಕಾರದ ಗಮನ ಸೆಳೆದು ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಒತ್ತಡ ಹೇರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನೀರಿಲ್ಲದೆ ನಾಲಾ ಅಚ್ಚಕಟ್ಟು ವ್ಯಾಪ್ತಿಯಲ್ಲಿ ಬರುವ ಲಕ್ಷಾಂತರ ತೆಂಗಿನ ಮರಗಳು ಸಂಪೂರ್ಣ ಒಣಗಿ ಸುಳಿಗಳು ಸತ್ತು ಹೋಗಿವೆ. ಅಡಿಕೆ ಮರಗಳದ್ದು ಇದೇ ಪರಿಸ್ಥಿತಿ ಆಗಿದೆ. ಅಡಿಕೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಬೇಕು. ಜಿಲ್ಲಾಡಳಿತ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಎಂಟತ್ತು ವರ್ಷ ಕಷ್ಟ ಪಟ್ಟು ಬೆಳೆದ ಅಡಿಕೆ ಮರಗಳು ಒಣಗುತ್ತಿರುವುದನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಸರ್ಕಾರ ಈಗ ಕೊಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಾತಗಿದೆ. ಸರ್ಕಾರ ಎಕರೆಗೆ ಕನಿಷ್ಠ ೩೦ ಸಾವಿರ ಪರಿಹಾರ ಘೋಷಿಸಬೇಕು. ಬರಗಾಲದಿಂದ ಜಿಲ್ಲೆಯ ಎಲ್ಲಾ ಕೆರೆಗಳು ಬತ್ತಿಹೋಗಿದ್ದು, ಕೆರೆಗಳ ಹೂಳು ಎತ್ತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಂದರ ಹಿಂದೆ ಒಂದು ಚುನಾವಣೆಗಳು ಬರುತ್ತಿದ್ದು, ಸರ್ಕಾರ ಚುನಾವಣೆಗಳ ಬಗ್ಗೆ ಗಮನ ಹರಿಸಿದರೆ ರೈತರ ಕಷ್ಟ ಕೇಳುವರ‍್ಯಾರು? ಸರ್ಕಾರ ನೀರು ಹರಿಸಲು ಕ್ರಮ ವಹಿಸದಿದ್ದರೆ ಜಿಲ್ಲೆಯ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಗೋಷ್ಠಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ಯೋಗೇಶ್, ಮುಖಂಡರಾದ ಬಿ.ಸಿ.ನಾಗೇಂದ್ರ, ಶ್ರೀನಿವಾಸ್, ದಯಾನಂದ, ಶ್ರೀಕಂಠೇಗೌಡ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!