Sunday, July 14, 2024
spot_img

ನಿಲ್ಲದ ರೈಲುಗಳು:ನನಸಾಗದ ಪಾಂಡವಪುರದ ನಿಲ್ದಾಣಾದ ಪ್ರಯಾಣಿಕರ ಕನಸು

*ಎನ್.ಕೃಷ್ಣೇಗೌಡ ಪಾಂಡವಪುರ.
ಮಂಡ್ಯ, ಜುಲೈ ೪: ಮಂಡ್ಯ ಜಿಲ್ಲೆ ಪಾಂಡವಪುರ ಉಪವಿಭಾಗದ ವ್ಯಾಪ್ತಿಯಲ್ಲಿಯ ಪಾಂಡವಪುರ ರೈಲ್ವೆ ನಿಲ್ದಾಣವು ಪಾಂಡವಪುರ ತಾಲೂಕು, ಶ್ರೀರಂಗಪಟ್ಟಣ, ತಾಲೂಕು, ಕೆ.ಆರ್.ಪೇಟೆ ತಾಲೂಕು ಹಾಗೂ ನಾಗಮಂಗಲ ತಾಲೂಕುಗಳ ಉಪವಿಭಾಗವಾಗಿದೆ. ಹೀಗಾಗಿ ಈ ಮಾರ್ಗವಾಗಿ ಸಂಚಾರ ಮಾಡುವ ರಾಜ್ಯರಾಣಿ, ಒಡೆಯರ್ ಎಕ್ಸ್ ಪ್ರೆಸ್, ಮೈಲಾಡ ತುರೈ ಹಾಗೂ ಕೊಚ್ಚಿವೇಲಿ ರೈಲುಗಾಡಿಗಳನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕೆಂಬ ಒತ್ತಾಯ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿಯೇ ಉಳಿದಿದೆ.

ಹೌದು, ಈ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ವಿಶ್ವ ವಿಖ್ಯಾತವಾದ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ, ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯಗಳಿವೆ. ಇವು ಪ್ರಖ್ಯಾತ ಯಾತ್ರಾ ಸ್ಥಳಗಳಾಗಿರುತ್ತವೆ. ಸ್ಥಳೀಯವಾಗಿ ಪಾಂಡವಪುರ ಸಮೀಪದ ಆರತಿ ಉಕ್ಕಡದ ಮಾರಮ್ಮನ ದೇವಾಲಯ, ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯ ಮತ್ತು ಕೆ.ಆರ್.ಪೇಟೆ ತಾಲೂಕು ಭೂ ವರಹನಾಥಸ್ವಾಮಿ ದೇವಾಲಯಗಳು ಪ್ರಸಿದ್ಧವಾದ ಯಾತ್ರಾಸ್ಥಳಗಳಾಗಿರುತ್ತವೆ. ಈ ಯಾತ್ರಾ ಸ್ಥಳ ಹಾಗೂ ವಿಶ್ವ ವಿಖ್ಯಾತ
ಕೆ.ಆರ್.ಎಸ್ ಪ್ರವಾಸಿ ಕೇಂದ್ರಗಳಿಗೆ ಪ್ರತಿನುತ್ಯವೂ ಹೊರ ರಾಜ್ಯದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಿಗೆ ರೈಲು ಪ್ರಯಾಣ ಮಾಡಲು ಪ್ರಮುಖ ರೈಲುಗಾಡಿಗಳ ನಿಲುಗಡೆ ಇಲ್ಲದ ಕಾರಣ ಬಹಳ ತೊಂದರೆ ಉಂಟಾಗಿದೆ. ಈ ಮಾರ್ಗವಾಗಿ ಸಂಚರಿಸುವ ರಾಜ್ಯರಾಣಿ, ಒಡೆಯರ್ ಎಕ್ಸ್ ಪ್ರೆಸ್, ಮೈಲಾಡುತುರೈ, ಕೊಚ್ಚಿವೇಲಿ ರೈಲುಗಾಡಿಗಳು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾದರೆ ಜನರ ತೊಂದರೆಗೆ ಪೂರ್ಣ ವಿರಾಮ ಬೀಳಲಿದೆ.

ಪಾಂಡವಪುರ ರೈಲ್ವೆ ನಿಲ್ದಾಣದಿಂದಲೇ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರತಿ ನಿತ್ಯ ಕೂಡಾ ಕನಿಷ್ಟ 10 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಂತೆ ಪಾಂಡವಪುರದಿಂದ ಮೈಸೂರು ನಗರಕ್ಕೆ ಕನಿಷ್ಟ 15 ಸಾವಿರ ಜನರು ಪ್ರತಿದಿನ ಪ್ರಯಾಣಿಸುತ್ತಾರೆ. ಅಲ್ಲದೇ ಕೆ.ಆರ್.ಪೇಟೆ, ನಾಗಮಂಗಲ, ಚನ್ನರಾಯಪಟ್ಟಣ, ಹಾಸನ, ಶಿವಮೊಗ್ಗದಂತಹ ದೂರದ ನಗರಗಳಿಂದಲೂ ಪಾಂಡವಪುರಕ್ಕೆ ಬಂದು ಇಲ್ಲಿಂದಲೇ ಸಾವಿರಾರು ಮಂದಿ ಬೆಂಗಳೂರು ಸೇರಿದಂತೆ ಇತರೆಡೆಗೆ ರೈಲುಗಾಡಿ ಮೂಲಕವೇ ಪ್ರಯಾಣ ಬೆಳೆಸುವುದು ಮಾಮೂಲಿಯಾಗಿದೆ. ಆದರೆ, ಬೆಂಗಳೂರಿಗೆ ಪಾಂಡವಪುರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 9-30 ಕ್ಕೆ ಹೊರಡುವ ಪ್ಯಾಸೆಂಜರ್ (ಪುಷ್ಪಲ್) ರೈಲು ಗಾಡಿ ಬಿಟ್ಟರೆ ಮದ್ಯಾಹ್ನ 1-50ರ ವರೆಗೆ ಯಾವುದೇ ರೈಲುಗಾಡಿ ನಿಲುಗಡೆ ಇರುವುದಿಲ್ಲ. ಜತೆಗೆ ಪಾಂಡವಪುರದಿಂದ ಮೈಸೂರಿಗೆ ಬೆಳಗ್ಗೆ 11-35 ಕ್ಕೆ ಹೊರಡುವ ಪ್ಯಾಸೆಂಜರ್ ಪುಶ್ ಪುಲ್ ರೈಲುಗಾಡಿ ಬಿಟ್ಟರೆ 3-45 ರವರೆಗೆ ಯಾವುದೇ ರೈಲುಗಾಡಿ ನಿಲುಗಡೆ ಇರುವುದಿಲ್ಲ. ಅಂದರೆ ಪ್ರತಿದಿನ ಸುಮಾರು 4 ತಾಸುಗಳವರೆಗೆ ಪ್ರಯಾಣಿಕರು ರೈಲಿಗಾಗಿ ಜಾತಕ ಪಕ್ಷಿ ಮಾದರಿಯಲ್ಲಿ ಕಾದು ಸಂಚಾರ ಮಾಡುವ‌ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಜಿಲ್ಲೆಯ ಸ್ಥಳೀಯ ಶಾಸಕರು, ಸಂಸದರು, ಕೇಂದ್ರ ರೈಲ್ವೆ ಸಚಿವರು ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅವರಿಗೆ ಈ ಭಾಗದ ಜನರ ಮತಗಳು ಬೇಕಷ್ಟೆ‌ ವಿನಹಃ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಇಲ್ಲವೇ ಇಲ್ಲ.

ನಿಲುಗಡೆ ಮಾಡಬೇಕಿರುವ ರೈಲುಗಾಡಿಗಳು : 1.ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲು ಗಾಡಿ, ಈ ರೈಲುಗಾಡಿಯು ಮದ್ದೂರು ಸೇರಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಿಲುಗಡೆ ಇರುತ್ತದೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುವ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಇರುವುದಿಲ್ಲ. ಈ ರೈಲು ಗಾಡಿಯನ್ನು ಪಾಂಡವಪುರದಲ್ಲಿ ನಿಲುಗಡೆಗೊಳಿಸಬೇಕು ಎಂಬುದು ಸಾವಿರಾರು ಜನರ ಒಕ್ಕೊರಲಿನ ಆಗ್ರಹವಾಗಿದೆ.

2.ಒಡೆಯರ್ ಎಕ್ಸಪ್ರೆಸ್ ರೈಲುಗಾಡಿ, ಮೈಸೂರಿನಿಂದ ಹೊರಡುವ ಈ ರೈಲುಗಾಡಿಯು ಪಾಂಡವಪುರದಲ್ಲಿ ನಿಲುಗಡೆ ಇರುವುದಿಲ್ಲ. ಬೆಳಗ್ಗೆ 11-30ಕ್ಕೆ ಮೈಸೂರಿನಿಂದ ಹೊರಡುವ ಒಡೆಯರ್ ಎಕ್ಸ್ ಪ್ರೆಸ್ ರೈಲು ಗಾಡಿ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಯಾದರೆ ಮಂಡ್ಯ ಮತ್ತು ಬೆಂಗಳೂರಿಗೆ
ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಇದರ ನಿಲುಗಡೆ ತುಂಬಾ ಮುಖ್ಯವಾಗಿದೆ.

3.ಕೊಚ್ಚುವೇಲಿ ಎಕ್ಸ್ ಪ್ರೆಸ್ ರೈಲು ಗಾಡಿ, ಇನ್ನೂ ಈ ಅಂತರ ರಾಜ್ಯ ರೈಲುಗಾಡಿಯು ಮದ್ದೂರಿನಲ್ಲಿ ನಿಲುಗಡೆ ನೀಡುತ್ತದೆ. ಪಾಂಡವಪುರದಲ್ಲಿ ನಮಗೆ ನಿಲುಗಡೆ ಮಾಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.

4.ಮೈಲಾಡು ತುರೈ ಎಕ್ಸ್ ಪ್ರೆಸ್ ರೈಲುಗಾಡಿ, ಬೆಂಗಳೂರಿನಿಂದ ಮೈಸೂರು ಕಡೆ ಬೆಳಗ್ಗೆ ಸಂಚರಿಸುವ ಈ ರೈಲುಗಾಡಿಯು ಮದ್ದೂರಿನಲ್ಲಿ ನಿಲುಗಡೆ ಇದೆ. ಇದನ್ನು ಪಾಂಡವಪುರದಲ್ಲಿ ನಿಲುಗಡೆಗೊಳಿಸಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.

‘ನಮ್ಮ ನೆಲದಲ್ಲಿಯೇ ಪ್ರತಿದಿನ ಹತ್ತಾರು ರೈಲುಗಳು ಪಾಂಡವಪುರ ರೈಲ್ವೆ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುತ್ತವೆ. ಓ ದೇವರೇ, ನಮ್ಮ ಜನರು ಪಾಂಡವಪುರ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸಲು ಬಂದು ನಿಲುಗಡೆ ಸಾಧ್ಯವಿಲ್ಲವೆ?’ ಎನ್ನುತ್ತಾರೆ ಜೆಡಿಎಸ್ ಕಾರ್ಯಕರ್ತ ಲಕ್ಷ್ಮೀಸಾಗರದ ಎಲ್.ಡಿ.ಕೃಷ್ಣಪ್ಪ.

‘ನಾವು ನಿತ್ಯವು ಪಾಂಡವಪುರದಿಂದ ಮಂಡ್ಯ ಹಾಗೂ ಮಂಡ್ಯದಿಂದ ಪಾಂಡವಪುರ ಪ್ರಯಾಣ ಮಾಡುತ್ತೇವೆ. ಪಾಂಡವಪುರ ರೈಲ್ವೆ ನಿಲ್ದಾಣದಿಂದ ಸಮರ್ಪಕವಾಗಿ ರೈಲುಗಾಡಿ ಸೌಲಭ್ಯವಿಲ್ಲದಿರುವುದು ಹಾಗೂ ಪ್ರಮುಖ ರೈಲುಗಾಡಿಗಳ ನಿಲುಗಡೆ ಇಲ್ಲದಿರುವುದು ಪ್ರತಿನಿತ್ಯ ಉದ್ಯೋಗಕ್ಕೆ ತಡವಾಗಿ ಹೋಗಬೇಕಾಗಿದೆ’.-ವೇಣುಗೋಪಾಲ್ ಹಾಗೂ ಜಗದೀಶ್ ಡಾಮಡಹಳ್ಳಿ. ಉಪನ್ಯಾಸಕರು.

‘ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತೇನೆ. ಪ್ರಮುಖ ರೈಲುಗಾಡಿಗಳ ನಿಲುಗಡೆಯಿಲ್ಲದೇ, ಜತೆಗೆ ಬೆಳಗ್ಗೆ 9.45ರಿಂದ
ಮಧ್ಯಾಹ್ನದವರೆಗೆ ಪಾಂಡವಪುರ ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳಿಂದ ರೈಲುಗಾಡಿಗಳ ಹೆಚ್ಚಿನ ಸೌಲಭ್ಯವಿಲ್ಲದ ಕಾರಣ ಕೆಲಸಕ್ಕೆ ಪ್ರತಿದಿನ ತಡವಾಗುವುದರಿಂದ ಮೇಲಾಧಿಕಾರಿಗಳಿಂದ ಬೈಗುಳ ತಪ್ಪಿದಲ್ಲ. ಪ್ರಮುಖ ರೈಲುಗಾಡಿ ನಿಲುಗಡೆಗೆ ಅವಕಾಶ ಕಲ್ಪಿಸಿ ಈ ಅನಾನುಕೂಲ ತಪ್ಪಿಸಬೇಕಿದೆ.-ಎಚ್.ಪ್ರಕಾಶ್ ಹಿರೇಮರಳಿ ಮತ್ತು ಗುರುಮೂರ್ತಿ ಹಾರೋಹಳ್ಳಿ.

ಪಾಂಡವಪುರ ರೈಲ್ವೆ ನಿಲ್ದಾಣದ ಮಾರ್ಗದಲ್ಲಿ ಪ್ರತಿನಿತ್ಯ ಈ ಪ್ರಮುಖ 4 ರೈಲು ಗಾಡಿಗಳು ಸಂಚರಿಸುತ್ತಿದ್ದು ನಿಲುಗಡೆ ಇಲ್ಲದೆ ಇತರೆ ರೈಲುಗಳಿಗೆ ಜನದಟ್ಟಣೆ ಜಾಸ್ತಿಯಾಗಿ ನೂಕಾಟ-ತಳ್ಳಾಟ ಉಂಟಾಗಿದೆ. ಆದ್ದರಿಂದ ಈ 4 ರೈಲುಗಳ ನಿಲುಗಡೆಯನ್ನು ಪಾಂಡವಪುರದಲ್ಲಿ ನಿಲುಗಡೆ ಗೊಳಿಸಲು ನೂತನ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಯಧುವೀರ್ ದತ್ತ ಒಡೆಯರ್ ಅವರುಗಳು ಸಂಬಂಧಪಟ್ಟ ರೈಲ್ವೆ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಪತ್ರ ಬರೆದು ಈ ಭಾಗದ ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಭಾಗದ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹೀಗಾಗಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಅನುಭವಿಸುವ ಬವಣೆಯನ್ನು ತಪ್ಪಿಸಲು ಜನಪ್ರತಿನಿಧಿಗಳು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!