Sunday, May 26, 2024
spot_img

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಹರಾಜಿಗೆ ನಿರ್ಧಾರ!

ನೀಲೇಗೌಡರ ಕನಸಿನ ಕೂಸು ಹರಾಜು…..!

ಈಗಿನ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ತನ್ನ ಪಕ್ಷದ ಅಭ್ಯರ್ಥಿಗೆ ಓಟು ಕೊಡಿ ಎನ್ನುತ್ತಾ ಮನೆ ಅಲೆಯುತ್ತಿರುವ , ಅದರಲ್ಲೂ ಇಡೀ ದೇಶದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆಯುವ ಮಂಡ್ಯ ಕ್ಷೇತ್ರದ ಪ್ರತಿಷ್ಠಿತ ಸಹಕಾರಿ ವಲಯದ ಮಾಲೀಕತ್ವದಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಕೇವಲ 20 ದಿನದಲ್ಲಿ ಹರಾಜು ಆಗಲಿದೆ ……!
ಒಂದು ಕಾಲದಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ,ನಾಗಮಂಗಲ ತಾಲ್ಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ಅರ್ಧ ಭಾಗದ ಕಬ್ಬು ಬೆಳೆಯುವ ರೈತನ ಆಸರೆಯಾಗಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಇಂದು ಖಾಸಗಿಯವರಿಗೆ ಧೀರ್ಘಕಾಲದ ಗುತ್ತಿಗೆ ಆಧಾರದ ಪಾಲಾಗಿ ಮುಂದಿನ ತಿಂಗಳ ಮೊದಲ ದಿನ ಹರಾಜು ಆಗುವ ಹಂತಕ್ಕೆ ಬಂದಿರುವುದು ದೊಡ್ಡ ವಿಪರ್ಯಾಸ….!
ಒಂದು ಕಾಲದಲ್ಲಿ ಇಲ್ಲಿನ ರೈತರಿಗೆ ಬದುಕು ಕಟ್ಟಿಕೊಡ ಬೇಕೆಂದು ‌‌ನೀಲೇಗೌಡರು , ತನ್ನ ಸಮಾನ ಮನಸ್ಕರ ಜತೆಗೂಡಿ ಹಳ್ಳಿ-ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ 100-200 ರೂಪಾಯಿಗಳಿಗೆ ಷೇರು ಹಣ ಸಂಗ್ರಹಿಸಿ ಸಹಕಾರಿ ತತ್ವದಡಿ ಈ ಕಾರ್ಖಾನೆ ತರಲು ಸಫಲರಾದರು . ಆದರೆ , ದಿನ ಕಳೆದಂತೆ ನಿಧಾನವಾಗಿ ಈ ಕಾರ್ಖಾನೆ ಸಹಕಾರಿ ಕಾರ್ಖಾನೆ ಹೊಳಪು ಕಳೆದುಕೊಂಡು , ಇಲ್ಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆದ್ದು ಬಂದ ಸಹಕಾರಿ ಧುರೀಣರು ರಾಜಕಾರಣಿಗಳಾಗಿ ಬದಲಾದರು . ಅದಕ್ಕೆ ತಕ್ಕಂತೆ ತನ್ನ ರಾಜಕೀಯ ಭವಿಷ್ಯಕ್ಕೆ ಈ ಕಾರ್ಖಾನೆ ಯನ್ನು ಹೇಗೆ ಬಳಸಿಕೊಳ್ಳಬೇಕೊ ಹಾಗೆ ಬಳಸಿಕೊಂಡರು. ಅದರಂತೆ ರಾಜಕಾರಣಿಗಳಾಗಿ ಬದಲಾದ ಇವರು ತಮ್ಮ ರಾಜಕೀಯ ಭವಿಷ್ಯಕ್ಕೆ ಒಂದಷ್ಟು ದುಡ್ಡು ಮಾಡಲು ಶುರು ಮಾಡಿದರು . ಕಾರ್ಖಾನೆಗೆ ಖರೀದಿ ಮಾಡುವ ಯಂತ್ರಗಳಲ್ಲಿ , ಸಕ್ಕರೆ ತುಂಬುವ ಚೀಲಗಳಲ್ಲಿ ಕಮೀಷನ್ ತಿನ್ನುವುದಕ್ಕೆ ಶುರು ಮಾಡಿದರು . ಅಲ್ಲಿಗೆ ಕಾರ್ಖಾನೆಯ ಸಹಕಾರ ತತ್ವದ ಕಾರ್ಖಾನೆಯ ಶವ ಪೆಟ್ಟಿಗೆಗೆ ಮೊದಲ ಮೊಳೆ ಬಿತ್ತು . ಆನಂತರ ಇವರ ವಿರುದ್ಧ ಚುನಾವಣೆಯಲ್ಲಿ ಸೋತ ಇನ್ನೊಬ್ಬ ರಾಜಕಾರಣಿ ತನ್ನ ಈ ಕಾರ್ಖಾನೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಣ್ಣ-ಪುಟ್ಟ ವಿಚಾರಗಳಿಗೂ ಧರಣಿ ,ಪ್ರತಿಭಟನೆ ಮಾಡುವುದಕ್ಕೆ ಶುರುವಾದರು . ಅದರ ಜತೆಗೆ ರೈತ-ರೈತರ ಮತ್ತು ಕಾರ್ಮಿಕ ವರ್ಗದವರ ನಡುವೆ ವಿಷ ಬೀಜ ಬಿತ್ತಿ ಅವರನ್ನು ಆಡಳಿತ ಮಂಡಳಿಯ ಜತೆ ರಾಜಕೀಯ ಪರ-ವಿರುದ್ಧ ವೈಷಮ್ಯ ಮನಸ್ಥಿತಿ ಕೂರಿಸಲು ಸಫಲರಾದರು . ಇಲ್ಲಿನ ರೈತರು ತಮ್ಮ ತಂದೆತಾಯಿಗಳು, ತಾತಾ-ಅಜ್ಜಂದಿರು ತಮ್ಮ ಹೊಟ್ಟೆ-ಬಟ್ಟೆ ಕಟ್ಟಿ , ತಮ್ಮ ಮಕ್ಕಳ-ಮೊಮ್ಮಕ್ಕಳ ಭವಿಷ್ಯಕ್ಕೆ ದಾರಿಯಾಗಲಿ ಎಂದು ಕಟ್ಟಿದ ಕಾರ್ಖಾನೆಯನ್ನು ಉಳಿಸಿಕೊಳ್ಳದೆ ತಾವೇ ಪರೋಕ್ಷವಾಗಿ ಮುಳುಗಿಸುತ್ತಿದ್ದೇವೆ ಎಂಬುದನ್ನು ಮರೆತರು…! ಅದರ ಜತೆಗೆ , ಹೊಸದಾಗಿ ಬಂದ ಸರ್ಕಾರಗಳು ಪ್ರತಿ ಬಾರಿಯೂ ತಮ್ಮ ಪ್ರತಿನಿಧಿ ಗಳನ್ನು ಅಧ್ಯಕ್ಷರಾಗಿ ಮಾಡಿ ಒಂದಷ್ಟು ಹಣವನ್ನು ಸಾಲವಾಗಿ ಬಿಡುಗಡೆ ಮಾಡಿ ಅವರಿಂದಲೇ ಆ ಹಣವನ್ನು ನುಂಗಲು ಶುರು ಮಾಡಿದವು…! ಇದರ ಮೊದಲ ಭಾಗವಾಗಿ ಕಾರ್ಖಾನೆ ಆಡಳಿತ ಮಂಡಳಿ 1995 ರಲ್ಲಿ ಕಾರ್ಖಾನೆ ವಿಸ್ತರಣೆ ಮತ್ತು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲು National cooperative development corporation ನಿಂದ 11.40 ಕೋಟಿ ಸಾಲ ಪಡೆದುಕೊಂಡಿತು . ಈ ಹಣವು 1997 ರಲ್ಲಿ 5.70 ಕೋಟಿ ಮತ್ತು 1998 ರಲ್ಲಿ 5.70 ಕೋಟಿ ಬಿಡುಗಡೆ ಆಯಿತು . ಈ ಸಾಲ ಮಾಡಿದ ನಂತರ ಇದನ್ನು ತೀರಿಸುವ ಬಗ್ಗೆ ಮುಂದೆ ಆಡಳಿತ ಮಂಡಳಿಗಳು ತಲೆ ಕೆಡಿಸಿಕೊಳ್ಳಲಿಲ್ಲ . ಇದರ ನಡುವೆ National cooperative development corporation ರವರ ಸಾಲ ತೀರಿಸುವಂತೆ ಒತ್ತಡ ಹೆಚ್ಚಾದಾಗ 2004 -2009 ವರೆಗೆ ಕ್ರಮವಾಗಿ ನಾಲ್ಕು ಹಂತದಲ್ಲಿ 2 ಕೋಟಿ ,12 ಲಕ್ಷ ,7 ಲಕ್ಷ ,14 ಲಕ್ಷ ಒಟ್ಟು 2.75 ಕೋಟಿ ಸಾಲ ಮರು ಪಾವತಿ ಮಾಡಿತ್ತು . ಇಷ್ಟಾದರೂ 2017 ರ ಸಾಲಿನ ವರೆಗೆ ಬಡ್ಡಿ , ಅಸಲು ಸೇರಿ ಒಟ್ಟು 41 ಕೋಟಿಗೆ ಬೆಳೆದು ನಿಂತಿತು . ಇದನ್ನು ಆಗಾಗ ತೀರಿಸುವಂತೆ ಸದರಿ ಸಾಲ ಕೊಟ್ಟ ಸಂಸ್ಥೆ ಹೇಳಿದರೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಸಾಲ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ . ಇದರ ಪರಿಣಾಮ,ಸಾಲ ವಸೂಲಾತಿಗೆ National cooperative development corporation ರವರು ರಿಕವರಿ ಆಫೀಸರ್ ಕಛೇರಿ , ಸಾಲ ವಸೂಲಾತಿ ನ್ಯಾಯಾಧೀಕರಣ -11 ದೆಹಲಿ ಇವರಲ್ಲಿ ಸಾಲ ವಸೂಲಾತಿಗೆ ಪ್ರಕರಣ ದಾಖಲಿಸಿದ್ದರು . ಇದರಂತೆ ನ್ಯಾಯಾಧೀಕರಣವು ಕಾರ್ಖಾನೆಯ ಒಟ್ಟು ಆಸ್ತಿಯನ್ನು ಮೌಲ್ಯಮಾಪನ ಮಾಡಿಸಿ ದಿನಾಂಕ 05-01-24 ರಂದು 89,12,00,000 (89 ಕೋಟಿ 12 ಲಕ್ಷಕ್ಕೆ ಹರಾಜಿಗೆ ಇಟ್ಟಿದೆ . ಈ ನಡುವೆ ಕಾರ್ಖಾನೆ ವಿಸ್ತರಣೆ ಮತ್ತು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲು ಸುಮೇಖ್ ಎಂಬ ಕಂಪನಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಇತ್ತೀಚೆಗೆ 1.5 ಕೋಟಿ ಪಾವತಿಸಿದೆ ಎಂಬ ಮಾಹಿತಿ ಇದೆ .


ಹಾಗಾದರೆ ಈ ಇಕ್ಕಟ್ಟಿನಿಂದ ಬಚಾವು ಆಗಲು ಅಗಿನ ಆಡಳಿತ ಮಂಡಳಿಗಳಿಗೆ ಬೇರೆ ದಾರಿ ಇರಲಿಲ್ಲವೇ ಎಂಬ ಜಿಜ್ಞಾಸೆ ಕಾಡಬಹುದು . ಇದಕ್ಕೆ ಉತ್ತರ ಕಂಡು ಕೊಳ್ಳಲು ಸ್ವಲ್ಪ ವರ್ಷಗಳ ಹಿಂದೆ ಹೋಗೋಣ .
National cooperative development corporation ಸಾಲವಲ್ಲದೇ ,ಸರ್ಕಾರದ ಕಡೆಯಿಂದ ಸದರಿ ಕಾರ್ಖಾನೆ ನೂರಾರು ಕೋಟಿ ಹಣವನ್ನು ಸಾಲವಾಗಿ ಪಡೆದುಕೊಂಡಿದೆ . ಈ ಹಣವನ್ನು ಕೂಡಾ ಮರು ಪಾವತಿ ಮಾಡದೆ ಅಥವಾ ಷೇರು ಹಣವನ್ನಾಗಿ ಪರಿವರ್ತಿಸಿಕೊಳ್ಳದೆ ಸಾಲ ಸುಳಿಯಲ್ಲಿ ಸಿಲುಕಿದೆ .
ಕೆಲವು ವರ್ಷಗಳ ಹಿಂದೆ ಈ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಗೆ ಸರ್ಕಾರ 40 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರ ಮಾಡಿತು . ಈ ಸಮಯದಲ್ಲಿ ಇಲ್ಲಿಗೆ ಬಂದ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದವರು ಬೆಳಗಾವಿಯ ನಿಜಲಿಂಗಪ್ಪ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶಕ ರಾಗಿದ್ದ ಖಂಡಗಾವಿ ಎಂಬ ವ್ಯಕ್ತಿ . ನಾವು ಗಮನಿಸಬೇಕಾದ ಅಂಶವೆಂದರೆ ಸಹಕಾರ ಸ್ವಾಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳು ಐದಾರು ಜಿಲ್ಲೆಗಳ ಮುಖ್ಯಸ್ಥರಾದ ಸಹಕಾರ ಇಲಾಖೆಯ ಜಂಟಿ ರಿಜಿಸ್ಟಾರ್ ಸರಿಸಮಾನವಾದ ಹುದ್ದೆ . ಆದರೆ ಈ ವ್ಯಕ್ತಿ ನಿಜಲಿಂಗಪ್ಪ ರಿಸರ್ಚ್ ಇನ್ಸ್ಟಿಟ್ಯೂಟ್ ಸರ್ಕಾರಿ ಹುದ್ದೆಯಲ್ಲಿ ಇದ್ದ ಅಧಿಕಾರಿ ಅಲ್ಲ . ಇವರನ್ನು ಸರ್ಕಾರ ಅಲ್ಲಿ subject expert ಗಳು ಎಂದು ಪರಿಗಣಿಸಿದ ಖಾಸಗಿ ವ್ಯಕ್ತಿಗಳನ್ನು ಅಲ್ಲಿಗೆ ನೇಮಿಸಿಕೊಳ್ಳುತ್ತದೆ . ಇವರು ಸಹಕಾರ ಇಲಾಖೆಯ ಆಡಳಿತದಲ್ಲಿ ಯಾವುದೇ ರೀತಿಯ ಪರಿಣತಿ ಹೊಂದಿರುವುದಿಲ್ಲ . ಇಂತಹ ವ್ಯಕ್ತಿಗಳು ಕಾನೂನು ಬಾಹಿರವಾಗಿ ಈ ಸಕ್ಕರೆ ಕಾರ್ಖಾನೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಹುದ್ದೆಗೆ ನೇಮಕವಾದ ಮೇಲೆ ಸರ್ಕಾರದ ಪರವಾಗಿ ಕೆಲಸ ಮಾಡುತ್ತಾರೆಯೇ ಎಂಬ ಜಿಜ್ಞಾಸೆ ನಮ್ಮನ್ನು ಸಹಜವಾಗಿಯೇ ಕಾಡುತ್ತದೆ . ಇದಕ್ಕೆ ಪೂರಕವಾಗಿ ನಿರಾಣಿ ಶುಗರ್ಸ್ ಗೆ ಕಾರ್ಖಾನೆ ಹಸ್ತಾಂತರವಾದ ಮೇಲೆ ಟೆಂಡರ್ ಷರತ್ತಿನಂತೆ ಮೊತ್ತ 25 ಕೋಟಿ ಹಣವನ್ನು ಒಂದೆರಡು ವರ್ಷ ಕಟ್ಟಲಿಲ್ಲ . ಆದರೆ ಸದರಿ ಸಾಲದ ಸಮಸ್ಯೆ ಸಿಲುಕಿಕೊಂಡ ನಂತರ ನಿರಾಣಿ ಶುಗರ್ಸ್ 25 ಕೋಟಿ ಪಾವತಿಸಿದೆ . ಈ ಹಣದಲ್ಲಿ ಕಾರ್ಮಿಕರ ವೇತನ 4.5 ಕೋಟಿ, ಸುಮೇಖ್ ಕಂಪನಿ ಕೊಟ್ಟಿದೆ . ಉಳಿಕೆ ಹಣ 19.5 ಕೋಟಿ ಬ್ಯಾಂಕಿನಲ್ಲಿದೆ . ಈ ಹಣವನ್ನು ಸದರಿ ಸಾಲವನ್ನು ತೀರಿಸದೇ ಕಾರ್ಖಾನೆ ಹರಾಜು ಹಾಕಿಸುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ .


ಕಾರ್ಖಾನೆ ಹರಾಜಿನ ಬಗ್ಗೆ ಹಿರಿಯ ಅಧಿಕಾರಿಯನ್ನು ವಿಚಾರಿಸಿದಾಗ ಏಪ್ರಿಲ್ 23 ಕ್ಕೆ ಕೋರ್ಟ್‌ನಲ್ಲಿ ಪ್ರಕರಣ ಇದೆ . ಇಲ್ಲಿ National cooperative development corporation ರವರು ಮತ್ತು ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ . ಆದರೆ ಸದರಿ NDCC ರವರು ಒಪ್ಪಿಕೊಳ್ಳದಿದ್ದರೆ ಕಾರ್ಖಾನೆ ಮುಂದಿನ ತಿಂಗಳ ಮೊದಲ ದಿನವೇ ಹರಾಜು ನಿಶ್ಚಿತ. ಇದರಿಂದಾಗಿ ಸಹಕಾರ ಕ್ಷೇತ್ರದಲ್ಲಿ ಹರಾಜು ಆದ ಮೊದಲ ಸಕ್ಕರೆ ಕಾರ್ಖಾನೆ ಎಂಬ ಕುಖ್ಯಾತಿಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಒಳಗಾಗುವ ಎಲ್ಲಾ ಲಕ್ಷಣಗಳನ್ನು ನಮ್ಮನ್ನು ಕಾಡುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!