ಮದ್ದೂರು :- ಕಾಡಿನಿಂದ ನಾಡಿನ ಮುಖ ಮಾಡಿರುವ ಆನೆಗಳ ಹಿಂಡು ಪಟ್ಟಣದಲ್ಲಿ ಕಾಣಿಸಿಕೊಂಡಿದೆ.
ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿಯಲ್ಲಿ ಕಾಡಾನೆಗಳ ಹಿಂಡು ಬೆಳ್ಳಂ ಬೆಳಗ್ಗೆ ಪ್ರತ್ಯಕ್ಷವಾಗಿವೆ.
ಆರು ಆನೆಗಳು ಗುಂಪಾಗಿ ನೀರಿನಲ್ಲಿ ಆಟವಾಡುತ್ತ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡುತ್ತಿವೆ.
ಆನೆಗಳು ಕದಲದಂತೆ ಮುನ್ನೆಚ್ಚರಿಕೆ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರು ಮತ್ತು ರೈತರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದು, ಆನೆಗಳ ಹಿಂಡಿನತ್ತ ತೆರಳಬಾರದು ಹಾಗೂ ಅವುಗಳಿಗೆ ಕಿರಿಕಿರಿ ಮಾಡಬಾರದೆಂದು ಸೂಚಿಸಿದ್ದಾರೆ.
ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಆನೆಗಳನ್ನು ಕಾಡಿನತ್ತ ಓಡಿಸಲು ಸಿದ್ಧತೆ ಕೈಗೊಂಡಿದ್ದು, ಕಾಡಾನೆಗಳ ಹಿಂಡು ಕಾವೇರಿ ವನ್ಯಧಾಮದಿಂದ ಇತ್ತ ಬಂದಿವೆ ಎಂದು ಹೇಳಲಾಗಿದ್ದುಸಂಜೆಯ ಬಳಿಕ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗಿದೆ.
ಕಾಡಾನೆಗಳ ಹಿಂಡು ಶಿಂಷಾ ನದಿಯಲ್ಲಿ ಕಾಣಿಸಿಕೊಂಡಿರುವುದರಿಂದ ಸಾರ್ವಜನಿಕರು ಆನೆಗಳನ್ನು ನೋಡಲು ನದಿ ದಂಡೆ ಪ್ರದೇಶದಲ್ಲಿ ನೆರೆದಿದ್ದು ಮೊಬೈಲ್ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು.