ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಾಗಿರುವ ಮೂಡಲ ಬಾಗಿಲು ಆಂಜನೇಯ ದೇವಸ್ಥಾನದ ವಿಚಾರವಾಗಿ ಬಜರಂಗ ಸೇನೆ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದು,ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದೆ ಎಂದು ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಸರ್ವೆ ಹಾಗೂ ಆರ್ಕಿಲಾಜಿಕಲ್ ಸರ್ವೆ ಆಫ್ ಇಂಡಿಯಾ ವ್ಯಾಪ್ತಿಗೆ ಒಳಪಡುವ ಮಸೀದಿ ಒಳಗೆ ಮದರಸ ನಡೆಸುತ್ತಾ ಅಲ್ಲೇ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ .ಇವರನ್ನು ತೆರೆವುಗೊಳಿಸುವಂತೆ ಉಚ್ಚ ನ್ಯಾಯಾಲಯದಲ್ಲಿ ಬಜರಂಗ ಸೇನೆ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ,ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದರು .
ಈ ಅರ್ಜಿಯ ವಿಚಾರಣೆ ಜುಲೈ 11ರಂದು ನಿಗದಿಯಾಗಿದೆ. ಈ ವಿಚಾರದಲ್ಲಿ ಐತಿಹಾಸಿಕ ಪ್ರಮಾಧಕ್ಕೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ನುಡಿದರು. ಯಾವುದೇ ಪಾರಂಪರಿಕ ಕಟ್ಟಡಗಳಲ್ಲಿ ಹೊರಗಿನವರು ಉಳಿದುಕೊಳ್ಳಲು ಕಾನೂನಿನಡಿ ಅವಕಾಶವಿಲ್ಲ .ಆದರೂ ಸಹ ಅಕ್ರಮವಾಗಿ ಮದರಸ ನಡೆಸಲು ಅನುವು ಮಾಡಿಕೊಡಲಾಗಿದೆ .ಇಲ್ಲಿ ಪಾರಂಪರಿಕ ಕಟ್ಟಡ ಹಾಗೂ ದೇವಸ್ಥಾನದ ಕಂಬಗಳನ್ನು ವಿರೂಪ ಗೊಳಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು .
ಸರ್ಕಾರ ಪ್ರತಿ ತಿಂಗಳು ಜಾಮಿಯಾ ಮಸೀದಿ ನಿರ್ವಹಣೆ ಖರ್ಚಿಗಾಗಿ ಲಕ್ಷಾಂತರ ರೂಪಾಯಿ ನೀಡುತ್ತಿದೆ. ಇದರ ಲಾಭವನ್ನು ಮದರಸ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಇದರತ್ತ ಗಮನಹರಿಸಬೇಕೆಂದು ಆಗ್ರಹ ಪಡಿಸಿದರು .
ಸುದ್ದಿಗೋಷ್ಠಿಯಲ್ಲಿ ಬಜರಂಗ ಸೇನೆ ಜಿಲ್ಲಾಧ್ಯಕ್ಷ ವೈಎಚ್ ಹರ್ಷ ,ನಗರ ಘಟಕದ ಅಧ್ಯಕ್ಷ ಆರ್ ಚೇತನ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್, ದೀಪಕ್ ಸೇರಿದಂತೆ ಇತರರಿದ್ದರು.