ನಗರಸಭೆ ಕಾರ್ಯ ವಿಧಾನದಲ್ಲಿ ಲೋಪ: ತರಾಟೆ
ನಗರಸಭೆ, ಸರ್ಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಉಪಲೋಕಾಯುಕ್ತ
27/09/2025
ಚಿಕ್ಕಮಗಳೂರು: ಹಾಜರಾತಿ ಪುಸ್ತಕ, ಹಣಕಾಸಿನ ಪುಸ್ತಕ, ಕರ್ತವ್ಯ ನಿಮಿತ್ತ ಹೊರ ಹೋಗಿರುವ ರಿಜಿಸ್ಟರ್ ಪುಸ್ತಕ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳನ್ನು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತರಾಟೆಗೆ ತೆಗೆದುಕೊಂಡರು.
ನಗರಸಭೆ ಕಚೇರಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ಮೊದಲಿಗೆ ಎಲ್ಲಾ ಹಾಜರಾತಿ ಪುಸ್ತಕಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುವ ಎಲ್ಲಾ ಸಿಬ್ಬಂದಿಯೂ ತಮ್ಮ ಬಳಿ ವೈಯಕ್ತಿಕ ನಗದು ಎಷ್ಟಿದೆ ಎಂಬುದನ್ನು ಕ್ಯಾಷ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಕಾರ್ಯ ನಿಮಿತ್ತ ಕಚೇರಿಯಿಂದ ಹೊರಗೆ ಹೋಗಿದ್ದರೆ ಮೂಮೆಂಟ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಆದರೆ, ಹಲವರು ಹಣ ಎಷ್ಟಿದೆ ಎಂಬುದನ್ನು ಬೆಳಿಗ್ಗೆ ಮಾತ್ರ ನಮೂದಿಸಿದ್ದು, ಸಂಜೆ ಹೋಗುವಾಗ ಎಷ್ಟಿದೆ ಎಂಬುದನ್ನು ನಮೂದಿಸಿರಲಿಲ್ಲ.
ಅದರಲ್ಲೂ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಲೋಕೇಶ್ ಅವರು ಹಲವು ದಿನಗಳಿಂದ ಹಣಕಾ ಸಿನ ಮಾಹಿತಿಯನ್ನು ಸಂಜೆ ವೇಳೆ ನಮೂ ದಿಸಿಲ್ಲ ಎಂದು ತರಾಟೆಗೆ ತೆಗೆದು ಕೊಂಡರು. ‘ಕ್ಯಾಷ್ ರಿಜಿಸ್ಟರ್ ಪುಸ್ತಕ ಇರುವುದು ಏಕೆ, ಇಲ್ಲಿ ನಮೂದಿಸದ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳ ಲಾಗಿದೆ. ಎಷ್ಟು ಜನರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಬಂದಿರುವ ಉತ್ತರ ಏನು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರನ್ನು ಪ್ರಶ್ನಿಸಿದರು.
ಈ ಪುಸ್ತಕಗಳನ್ನು ನಿರ್ವಹಣೆ ಮಾಡಬೇಕಾದ ಕಚೇರಿ ವ್ಯವಸ್ಥಾಪಕ ರವಿ ಅವರನ್ನೂ ತರಾಟೆಗೆ ತೆಗೆದುಕೊಂಡರು. ಕ್ಯಾಷ್ ರಿಜಿಸ್ಟರ್ ನಲ್ಲಿ ನಮೂದಿಸದ ಅಷ್ಟೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟೂ ಹಾಜರಾತಿ ಪುಸ್ತಕಗಳನ್ನು ವಶಕ್ಕೆ ಪಡೆದು ಜೆರಾಕ್ಸ್ ದೃಢೀಕೃತ ಪ್ರತಿ ಪಡೆದುಕೊಳ್ಳಲು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಜಿನಿಯರಿಂಗ್ ಶಾಖೆ, ಕಂದಾಯ ಶಾಖೆ, ಆರೋಗ್ಯ ಶಾಖೆ ಮತ್ತು ಲೆಕ್ಕಪತ್ರ ಶಾಖೆಗೆ ಭೇಟಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು. ‘ಕಚೇರಿ ನಿರ್ವಹಣೆಯ ಜವಾಬ್ದಾರಿ ವ್ಯವಸ್ಥಾಪಕರ ಮೇಲಿದೆ. ಯಾವ ಯಾವ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿ ಸಬೇಕಾದ ಜವಾಬ್ದಾರಿ ಅವರದೇ ಆಗಿದೆ. ಯಾವುದನ್ನೂ ಸಮರ್ಪಕವಾಗಿ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಂತಹ ಬೇಜವಾಬ್ದಾರಿ ವ್ಯವಸ್ಥಾಪಕ ಮತ್ತು ಕ್ಯಾಷ್ ರಿಜಿಸ್ಟರ್‌ನಲ್ಲಿ ನಮೂದಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ವರದಿ ನೀಡಬೇಕು. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆ ನಡೆಸಲಾಗು ವುದು. ಎಲ್ಲಾ ರಿಜಿಸ್ಟರ್ ಪುಸ್ತಕಗಳ ಪ್ರತಿ ಪಡೆಯಲಾಗಿದೆ. ಸುಳ್ಳು ಮಾಹಿತಿ ನೀಡಿದರೆ ಮತ್ತೆ ಕಷ್ಟಕ್ಕೆ ಸಿಲುಕಲಿದ್ದೀರಿ’ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ‘ಆಸ್ಪತ್ರೆಯ ಬಯೋತ್ಯಾಜ್ಯವನ್ನು ಪ್ರತಿನಿತ್ಯ ತೆರವು ಮಾಡಲಾಗುತ್ತಿದೆಯೇ, ಪ್ರತಿದಿನವೂ ಸಂಗ್ರಹಿಸಿ ತೆರವು ಮಾಡಬೇಕು’ ಎಂದು ಸೂಚನೆ ನೀಡಿದರು.
5 ವರ್ಷಗಳಿಂದ ತೆರೆಯದ ದೂರು ಪೆಟ್ಟಿಗೆ
ನಗರಸಭೆ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ಗೋಡೆಗೆ ದೂರು ಪೆಟ್ಟಿಗೆಯೊಂದನ್ನು ಇಡಲಾಗಿದ್ದು, ಅದನ್ನು ಉಪಲೋಕಾಯುಕ್ತರು ಪರಿಶೀಲಿಸಿದರು.
ಅದಕ್ಕೆ ಹಾಕಿರುವ ಬೀಗ ತೆರೆಯುವಂತೆ ಕಚೇರಿ ವ್ಯವಸ್ಥಾಪಕ ರವಿ ಅವರಿಗೆ ಸೂಚನೆ ನೀಡಿದರು. ದೂರು ಪೆಟ್ಟಗೆ ಕೀಲಿ ಕಳೆದುಹೋಗಿದೆ ಎಂದು ಅವರು ಉತ್ತರ ನೀಡಿದರು. ರಿಪೇರಿ ಮಾಡುವ ಕೆಲಸಗಾರನ್ನು ಕರೆಸಿ ಲಾಕರ್ ಒಡೆದು ಪರಿಶೀಲಿಸಲಾಯಿತು. 2020ರಿಂದ ಈವರೆಗೆ ಸಾರ್ವಜನಿಕರು ಹಾಕಿರುವ ದೂರುಗಳು ಅದರಲ್ಲೇ ಇರುವುದನ್ನು ಕಂಡು ಉಪಲೋಕಾಯುಕ್ತರು ಸಿಡಿಮಿಡಿಗೊಂಡರು.
‘ಉದ್ಘಾಟನೆಯಾದ ದಿನದಿಂದ ಈ ಪೆಟ್ಟಿಗೆಯನ್ನು ತೆಗೆದಂತೆ ಕಾಣಿಸುತ್ತಿಲ್ಲ. ಅದರಲ್ಲಿರುವ ಪತ್ರಗಳು ದೂಳು ಹಿಡಿದಿವೆ. ಈ ರೀತಿಯ ಬೇಜವಾಬ್ದಾರಿ ಅಧಿಕಾರಿಗಳನ್ನು ನಾನೆಲ್ಲೂ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಬೀಗವನ್ನೇ ತೆರೆಯದ ದೂರು ಪೆಟ್ಟಿಗೆಯನ್ನು ಇರಿಸಿರುವುದಾದರೂ ಏಕೆ, ಈಗಲೇ ಈ ಪೆಟ್ಟಿಗೆ ತೆಗೆದು ಹೊಸ ಪೆಟ್ಟಿಗೆ ಇರಿಸಿ. ಇಲ್ಲಿರುವ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ತಿಳಿಸಿದರು.
‘ನಗರಸಭೆ ಕಚೇರಿಯಲ್ಲಿ ಕಾರ್ಯವಿಧಾನದ ಹಲವು ಲೋಪಗಳಿವೆ. ಪ್ರಾಥಮಿಕವಾಗಿ ಕಂಡಿರುವ ಲೋಪಗಳನ್ನು ಆಧರಿಸಿ ಸಮಗ್ರವಾಗಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಿ’ ಎಂದು ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರಿಗೆ ಸೂಚನೆ ನೀಡಿದರು.