Thursday, November 5, 2026
spot_img

ನಾಳೆ ಮದ್ಯದಂಗಡಿ ಬಂದ್:ಜಿಲ್ಲಾಧಿಕಾರಿ ಆದೇಶ

ನಾಗಮಂಗಲದಲ್ಲಿ ನಾಳೆ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಆದೇಶ

ಮಂಡ್ಯ, ನ. 5.ನಾಗಮಂಗಲ ಟೌನಿನಲ್ಲಿ ನಡೆಯಲಿರುವ ಕೋಟೆ ಗಣಪತಿ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ನವೆಂಬರ್ 6ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಾಲ್ಲೂಕಿನಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಗಣೇಶ ವಿಸರ್ಜನೆಯ ಮೆರವಣಿಗೆಯು ನಾಗಮಂಗಲದ ಅಲ್ಲಾಹ್ ಮಸೀದಿಯ ಮುಂದೆ ಸಾಗಲಿದೆ. ಅದೇ ದಿನ ಶುಕ್ರವಾರವಾಗಿದ್ದು, ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಾಗಮಂಗಲ ಟೌನ್ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನವೆಂಬರ್ 2ರಂದು ಬರೆದ ಪತ್ರದಲ್ಲಿ, ನಿಗದಿತ ಅವಧಿಯಲ್ಲಿ ಮದ್ಯ ಮಾರಾಟ, ಸಾಗಾಣಿಕೆ ಮತ್ತು ಶೇಖರಣೆಯನ್ನು ನಿಷೇಧಿಸುವಂತೆ ಕೋರಿದ್ದರು. ಈ ಮನವಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅಡಿಯಲ್ಲಿ ತಮಗೆ ಇರುವ ಅಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರಕಾರ, ನಾಗಮಂಗಲ ತಾಲ್ಲೂಕಿನಾದ್ಯಂತ ಎಲ್ಲಾ ಮಾದರಿಯ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಬೇಕು. ಜೊತೆಗೆ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಶೇಖರಣೆಯನ್ನೂ ನಿಷೇಧಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಬಕಾರಿ ಉಪ ಆಯುಕ್ತರು, ಪಾಂಡವಪುರ ಉಪವಿಭಾಗಾಧಿಕಾರಿ, ನಾಗಮಂಗಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಪುರಸಭೆ/ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮಾಹಿತಿ ಮತ್ತು ಅಗತ್ಯ ಕ್ರಮಕ್ಕಾಗಿ ರವಾನಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!