ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ ಮಂಡ್ಯ ಜಿಲ್ಲೆಯ ಆಲೆಮನೆ ಭ್ರೂಣ ಪತ್ತೆ ಪ್ರಕರಣ ಮತ್ತು ಪಾಂಡವಪುರ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿನ ಭ್ರೂಣ ಹತ್ಯೆ ಪ್ರಕರಣವು ದೊಡ್ಡ ಪ್ರಮಾಣದಲ್ಲಿ ಮಾಧ್ಯಮಗಳಿಂದ ಮತ್ತು ಜನರಿಂದ ಆಕ್ರೋಶಕ್ಕೆ ಒಳಗಾಗಿದೆ.
ಇದರಲ್ಲಿ ಹಾಡ್ಯ ಹಾಗೂ ಹುಳ್ಳೇನಹಳ್ಳಿ ನಡುವೆ ಇದ್ದ ಆಲೆಮನೆಯಲ್ಲಿ ಭ್ರೂಣ ಪತ್ತೆಗಾಗಿ ಇಟ್ಟಿದ್ದ ಸ್ಕ್ಯಾನಿಂಗ್ ಯಂತ್ರವು ವೈದ್ಯಲೋಕವನ್ನೇ ದಂಗು ಬಡಿಸಿತ್ತು. ಯಾಕೆಂದರೆ , ಸುಸಜ್ಜಿತವಾದ ಹವಾ ನಿಯಂತ್ರಿತ ಕಟ್ಟಡದಲ್ಲಿ ರೇಡಿಯೋಜಿಸ್ಟ್ ಸುಪರ್ದಿನಲ್ಲಿ ಇರಬೇಕಾದ ಈ ಯಂತ್ರ ಆಲೆಮನೆಯಲ್ಲಿ ಅಕ್ರಮವಾಗಿ ಸ್ಥಾಪನೆಯಾಗಿ ಭ್ರೂಣ ಪತ್ತೆ ಕೆಲಸ ನಡೆಯುತ್ತಿದ್ದ ವ್ಯವಸ್ಥೆಯನ್ನು ನಾವು ನೋಡಿದ್ದೇವೆ .
ಈ ಪ್ರಕರಣದಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೋಲೀಸರು ದಾಳಿ ಮಾಡಿದರು . ಇದರ ಬಗ್ಗೆ ಜನರ ಮತ್ತು ಜನ ಪ್ರತಿನಿಧಿಗಳ ಒತ್ತಡ ಹೆಚ್ಚಾದಾಗ ಸರ್ಕಾರ ಈ ಪ್ರಕರಣವನ್ನು CID ಪೋಲೀಸರಿಗೆ ಒಪ್ಪಿಸಿತು. ಈ ಪ್ರಕರಣದಲ್ಲಿ ಸ್ಕ್ಯಾನಿಂಗ್ ಯಂತ್ರವನ್ನು ಮಾರಾಟ ಮಾಡಿದ ಅಂಗಡಿಯವನು ,ಇಬ್ಬರು ಆಯುರ್ವೇದ ವೈದ್ಯ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಯಿತು . ಇದರಲ್ಲಿ ಒಬ್ಬ ವೈದ್ಯ ಆತ್ಮಹತ್ಯೆ ಮಾಡಿಕೊಂಡ . ಇನ್ನೊಬ್ಬ ವೈದ್ಯರು ಹೃದಯಾಘಾತದಿಂದ ಸಾವನಪ್ಪಿದರು . ಪ್ರಸ್ತುತ CID ಪೋಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ .
ಈ ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಈಗಾಗಲೇ ಜಿಲ್ಲೆಯ ಭ್ರೂಣ ಪತ್ತೆ ಪ್ರಕರಣ ಪತ್ತೆಯಾಗಿದ್ದ ಪಾಂಡವಪುರ ತಾಲೂಕಿನ ಸರ್ಕಾರಿ ಆಸ್ಪತ್ರೆ ವಸತಿ ಗೃಹದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ D-ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಒಬ್ಬ ಗರ್ಭಿಣಿಗೆ ಗರ್ಭಪಾತ ಮಾಡುವಾಗ ತನಿಖಾಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗಿದ್ದಾರೆ .
ಇದರ ಜತೆಗೆ ಇವರಿಗೆ ಸಹಕರಿಸಿದ ಹಲವರನ್ನು ಪೋಲೀಸರು ಬಂಧಿಸಿದ್ದಾರೆ .
ಈ ಎರಡು ಪ್ರಕರಣಗಳು ನಮ್ಮನ್ನು ಒಂದಷ್ಟು ಚಿಂತನೆಗೆ ಒಡ್ಡುತ್ತವೆ . ಇದರಲ್ಲಿ
೧) ಭ್ರೂಣ ಪತ್ತೆ ಯಂತ್ರವನ್ನು ಜನ ಸಾಮಾನ್ಯರು ಖರೀದಿಸಬಹುದೇ ?
೨)medical termination of pregnancy ಮಾಡಲು ಉಪಯೋಗಿಸುವ ಔಷಧಗಳನ್ನು ಮೆಡಿಕಲ್ ಸ್ಟೋರ್ ನವರು ತಜ್ಞ ವೈದ್ಯರ ಚೀಟಿ ಇಲ್ಲದೇ ರೋಗಿಗಳಿಗೆ/ಗ್ರಾಹಕರಿಗೆ ಕೊಡಬಹುದೇ ?
೩) ಸ್ಕ್ಯಾನಿಂಗ್ ಯಂತ್ರದಿಂದ ಎಷ್ಟು ತಿಂಗಳ/ವಾರ ಪ್ರಾಯದ ಭ್ರೂಣವನ್ನು ಲಿಂಗ ಪತ್ತೆ ಮಾಡಬಹುದು
ಇವೆಲ್ಲವನ್ನೂ ತಿಳಿಯುವ ಮೊದಲು medical termination of pregnancy
ತಿಳಿದುಕೊಳ್ಳೋಣ.
ಭಾರತದಲ್ಲಿ ಜನರ ಮೂಢನಂಬಿಕೆ, ಅನಕ್ಷರಸ್ಥತೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ಬಡತನ ಜತೆಗೆ ಒಂದಷ್ಟು ಗಂಡು ಮಕ್ಕಳ ಆಸೆಯ ಮೇಲೆ ಅಸುರಕ್ಷಿತ ಗರ್ಭಪಾತ ನಡೆಯುತ್ತಿದ್ದವು . ಇದನ್ನು ಮನಗಂಡ ಭಾರತ ಸರ್ಕಾರ , 1971 ಆಗಸ್ಟ್ 10 ರಂದು ವೈದ್ಯಕೀಯ ಗರ್ಭಸಮಾಪನ ಅಧಿನಿಯಮ,1971 ಕಾಯ್ದೆಯನ್ನು ಜಾರಿಗೆ ತಂದಿತು . ಇದರಿಂದಾಗಿ ಸರ್ಕಾರದ ಸುಪರ್ದಿನ ಅಡಿಯಲ್ಲಿ ಆರು ಕಾರಣಗಳಿಗೆ ಗರ್ಭಿಣಿಯರು ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.
೧)ಅತ್ಯಾಚಾರಕ್ಕೆ ಒಳಗಾದವರು
೨)ಮಾನಸಿಕ ಅಸ್ವಸ್ಥರು
೩)ಗರ್ಭಾವಸ್ಥೆಯಿಂದ ತಾಯಿಯ ಜೀವಕ್ಕೆ ಅಪಾಯ ಉಂಟಾದವರು
೪) ಗರ್ಭಾವಸ್ಥೆಯಲ್ಲಿರುವ ವಿಕಲಚೇತನ ಮಗು
೫)ಪ್ಯಾಮಿಲಿ ಪ್ಲಾನಿಂಗ್ ಚಿಕಿತ್ಸೆ ವಿಫಲರಾದವರು
೬) ಅವಿವಾಹಿತ 18 ವರ್ಷ ತುಂಬಿದ ಗರ್ಭಿಣಿಯರು .
ಇಷ್ಟು ಕಾರಣಗಳಿಗೆ ಮೇಲಿನ ಕಾಯ್ದೆಯ ಮುಖಾಂತರ ತಜ್ಞ ವೈದ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ನಡೆಸಬೇಕು.
ಹಾಗಾದರೆ , ಈ medical termination of pregnancy(ಇನ್ನು ಮುಂದೆ ಇದನ್ನು MTP ಎನ್ನುತ್ತೇನೆ .) ಅವಧಿಯ ನಿಯಮಗಳು ಏನು ?
ಮೇಲಿನ ಆರು ಕಾರಣಗಳಿಗೆ ಗರ್ಭಪಾತ ಮಾಡಿಸಿಕೊಳ್ಳುವ ಸಂತ್ರಸ್ತೆಯರಿಗೆ ಗರ್ಭಪಾತ ಮಾಡಲು ತಜ್ಞ ವೈದ್ಯರು
೧) ಗರ್ಭಾವಸ್ಥೆಯ 12 ವಾರದೊಳಗೆ ಒಬ್ಬ ವೈದ್ಯರು ಗರ್ಭಪಾತ ಮಾಡಲು ತೀರ್ಮಾನ ತೆಗೆದುಕೊಳ್ಳಬಹುದು
೨)ಗರ್ಭಾವಸ್ಥೆ 12 ರಿಂದ 20 ವಾರದೊಳಗೆ ಇಬ್ಬರು ತಜ್ಞ ವೈದ್ಯರು ತೀರ್ಮಾನ ತೆಗೆದುಕೊಳ್ಳಬಹುದು
೩) 20 ವಾರ ಮೀರಿದ ಗರ್ಭಾವಸ್ಥೆಯನ್ನು ಕೊನೆಗಾಣಿಸಲು ಜಿಲ್ಲಾ ತಜ್ಞ ವೈದ್ಯಕೀಯ ಸಮಿತಿಯ ಅನುಮತಿ ಮೇರೆಗೆ ಮಾಡಬಹುದು .
ಹಾಗಾದರೆ 12 ವಾರದೊಳಗೆ ಗರ್ಭಾವಸ್ಥೆಯನ್ನು ಕೊನೆಗಾಣಿಸಲು ಔಷಧ ಗಳನ್ನು ಮಾರಾಟ ಮಾಡಲು ಮೆಡಿಕಲ್ ಸ್ಟೋರ್ ನವರು ಅನುಸರಿಸಬೇಕಾದ ನಿಯಮಗಳೇನು ?
Drug and cosmetic rule 1945 ಅಡಿಯಲ್ಲಿ ಈ ಔಷಧಗಳು H schedule ನಲ್ಲಿ ಬರುತ್ತವೆ .ಇಂತಹ ಔಷಧಗಳನ್ನು ಮೆಡಿಕಲ್ ಸ್ಟೋರ್ ನವರು ಮಾರುವಾಗ ಸಂಬಂಧಪಟ್ಟ ತಜ್ಞ ವೈದ್ಯರ ಹೆಸರು ಮತ್ತು ಅವರ KMP ರಿಜಿಸ್ಟರ್ ನಂಬರನ್ನು ಅವರು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಚೀಟಿಯಲ್ಲಿ ರೋಗಿಯ ಹೆಸರನ್ನು ನಮೂದಿಸಿ ಬರೆದುಕೊಟ್ಟ ಅದೇ ದಿನಾಂಕದ ಚೀಟಿಯ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಿಕೊಂಡು ಔಷಧಗಳನ್ನು ಕೊಡಬೇಕಾಗುತ್ತದೆ . ಈ ವಿವರಗಳನ್ನು ಕನಿಷ್ಠ ಮೂರು ವರ್ಷಗಳ ವರೆಗೆ ಸಂಬಂಧಪಟ್ಟ ಔಷಧ ನಿಯಂತ್ರಕರು (Drug Inspector ) ಸೇರಿದಂತೆ ಈ ಇಲಾಖೆಯ ಅಧಿಕೃತ ಅಧಿಕಾರಿಗಳು ಪರಿವೀಕ್ಷಣೆ ಮಾಡಲು ಬಂದಾಗ ಕಡ್ಡಾಯವಾಗಿ ಒದಗಿಸಬೇಕು .
ಈ ಔಷಧಗಳನ್ನು ತಜ್ಞ ವೈದ್ಯರ ಚೀಟಿ ಇಲ್ಲದೇ ರೋಗಿಗಳಿಗೆ ಯಾವುದೇ ಕಾರಣಕ್ಕೂ ಕೊಡುವಂತಿಲ್ಲ.
ಹಾಗಾದರೆ ಇಚ್ಚೆಗೆ ಒಳಗಾಗಿ ಗರ್ಭಧಾರಣೆ ಆದವರ ಗರ್ಭಿಣಿಯರಿಗೆ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಪ್ರಸವ ಪೂರ್ವ ದಲ್ಲಿ ತಿಳಿಸಲು ರೆಡಿಯೋಜಿಸ್ಟ್ ಗಳಿಗೆ ಅವಕಾಶ ಇದೆಯೇ ?
Pre-conception and pre-natal diagnostic techniques act-1994 {ಪ್ರಸವಪೂರ್ವ ರೋಗ ನಿರ್ಣಯ ತಂತ್ರಗಳು (ನಿಯಂತ್ರಣ ಮತ್ತು ದುರ್ಬಳಕೆ ತಡೆಗಟ್ಟುವಿಕೆ) ಕಾಯ್ದೆ 1994 (PNDT) } ಈ ಕಾಯ್ದೆಯನ್ನು ಸುಧಾರಣೆ ಮಾಡುವ ಉದ್ದೇಶದಿಂದ 2003 ರಲ್ಲಿ ಇನ್ನೊಂದಿಷ್ಟು ತಿದ್ದುಪಡಿ ಮಾಡಿ ಲೈಂಗಿಕ ಆಯ್ಕೆ ನಿಷೇಧ ತಿದ್ದುಪಡಿ ಮಾಡಿತು . ಇದರಿಂದಾಗಿ ಗರ್ಭಾವಸ್ಥೆಯಲ್ಲಿ ಇರುವ ಮಗುವಿನ ಲಿಂಗವನ್ನು ರೇಡಿಯೋಜಿಸ್ಟ್ ಗಳು ಯಾವುದೇ ಕಾರಣಕ್ಕೂ ಯಾರಿಗೂ (ಸಂಭಂಧಪಟ್ಟ ಗರ್ಭಿಣಿ , ಆಕೆಯ ಗಂಡ ಸೇರಿದಂತೆ ಪೋಷಕರು) ಮಾತಿನ ಮೂಲಕವಾಗಲಿ ಅಥವಾ ಸಂಜ್ಞೆಯ ಮೂಲಕವಾಗಲಿ ಬಹಿರಂಗಪಡಿಸುವಂತಿಲ್ಲ. ಇದರ ಜತೆಗೆ , ಸ್ಕ್ಯಾನಿಂಗ್ ಯಂತ್ರವನ್ನು ಸ್ಥಾಪನೆ ಮಾಡುವಾಗ ಆರೋಗ್ಯ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಂದ ಅನುಮತಿ ಪಡೆದುಕೊಳ್ಳಬೇಕು ಮತ್ತು ಪ್ರತಿಯೊಂದು ಗರ್ಭಾವಸ್ಥೆಗೆ ಸಂಬಂಧಪಟ್ಟ ಸ್ಕ್ಯಾನಿಂಗ್ ವಿವರಗಳು ಆನ್ಲೈನ್ ಮೂಲಕ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಕಛೇರಿಗೆ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
medical termination of pregnancy ಯನ್ನು MBBS ವೈದ್ಯರು ಮಾಡಬಹುದೇ ?
Gynecologist (ಹೆರಿಗೆ ಮತ್ತು ಪ್ರಸೂತಿ ತಜ್ಞರು ) ಮಾತ್ರ ಮಾಡಲು ಅವಕಾಶ ಇದೆ . ಆದರೆ MBBS ಮಾತ್ರ ಓದಿರುವ ವೈದ್ಯರು Gynecologist ಜತೆ ಕನಿಷ್ಠ 25 ಗರ್ಭಪಾತ ಮಾಡುವಾಗ ಕೆಲಸ ಮಾಡಿರಬೇಕು ಅಥವಾ ಕನಿಷ್ಠ ಆರು ತಿಂಗಳು Gynecologist ಜತೆ ಕೆಲಸ ಮಾಡಿರಬೇಕು .
ಆಯುರ್ವೇದ ವೈದ್ಯರು
ಮಾಡಲು ಆಲೋಪತಿ ಔಷಧಗಳನ್ನು ಬಳಸಲು ಅವಕಾಶ ಇದೆಯೇ ?
ಈ ವೈದ್ಯರಿಗೆ ಗರ್ಭಪಾತ ಮಾಡಲು ಆಲೋಪತಿ ಔಷಧ ಬಳಸಲು ಅವಕಾಶ ಇರುವುದಿಲ್ಲ.
ಮಂಡ್ಯದ ಎರಡು ಭ್ರೂಣ ಹತ್ಯೆ ಪ್ರಕರಣಗಳಿಗೂ ಮೇಲಿನ ವಿವರಗಳಿಗೂ ಏನು ಸಂಬಂಧ ಎಂದು ಕೆಲವರಿಗೆ ಅನ್ನಿಸಬಹುದು . ಅದಕ್ಕೆ ಕಾರಣ ಇದೆ .
ಮಂಡ್ಯದ ಎರಡು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಇದುವರೆಗೂ ಬಂಧನವಾಗಿರುವುದು ತಜ್ಞ ವೈದ್ಯರಲ್ಲದ ವ್ಯಕ್ತಿಗಳು ( ಇದರಲ್ಲಿ ಇಬ್ಬರು ಆಯುರ್ವೇದ ಆರೋಪಿಗಳಾಗಿದ್ದರು . ಆದರೆ ಇಬ್ಬರೂ ಕೂಡ ಈಗ ಬದುಕಿಲ್ಲ .) .ಹಾಗಾದರೆ ,ಮೇಲಿನ ಮೂರು
೧)medical termination of pregnancy act 1971
೨)Drug and cosmetic rule 1945
೩)Pre-conception and pre-natal diagnostic techniques act-1994
ಅಧಿನಿಯಮಗಳನ್ನು ಮೀರಿ ತಜ್ಞ ವೈದ್ಯರಲ್ಲದ ಸ್ಕ್ಯಾನಿಂಗ್ ಯಂತ್ರ ಮಾರಾಟಗಾರ , ಲ್ಯಾಬ್ ಅಸಿಸ್ಟೆಂಟ್ , ಆ್ಯಂಬುಲೆನ್ಸ್ ಚಾಲಕ , ಆಸ್ಪತ್ರೆ ಡಿ-ಗ್ರೂಪ್ ನೌಕರ , ವಿಷಯ ತಜ್ಞನಲ್ಲದ ಆಯುರ್ವೇದ ವೈದ್ಯರು ಯಾವುದೋ ಕೊಠಡಿಯಲ್ಲಿ ಗರ್ಭಪಾತ ಮಾಡಲು ಆಗುತ್ತದೆಯೇ ಎಂಬ ಪ್ರಶ್ನೆ ನಮಗೆ ಹುಟ್ಟುತ್ತದೆ .
ಇಲ್ಲಿ ಗರ್ಭಪಾತ ಮಾಡಲು medical termination of pregnancy act 1971 , Drug and cosmetic rule 1945 ,Pre-conception and pre-natal diagnostic techniques act-1994 ಒಂದಕ್ಕೊಂದು ಪೂರಕವಾಗಿವೆ . ಅಂದರೆ ಮೊದಲ ಹಂತದಲ್ಲಿ ಸಂಬಂಧಪಟ್ಟ Gynecologist ವೈದ್ಯರು ಗರ್ಭಾಪಾತ ಮಾಡಲು ಅನುಸರಿಸಬೇಕಾದ ನಿಯಮ ಮತ್ತು ವೈದ್ಯ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ . ಆನಂತರ ಸ್ಕ್ಯಾನಿಂಗ್ ಮಾಡಲು ರೇಡಿಯೋಜಿಸ್ಟ್ ಗರ್ಭದಲ್ಲಿರುವ ಭ್ರೂಣದ ಸ್ಥಿತಿಗತಿಗಳ ವಿವರವನ್ನು ದಾಖಲು ಮಾಡಬೇಕು . ನಂತರ Gynecologist ಈ ಗರ್ಭಪಾತಕ್ಕೆ ಬೇಕಾದ schedule ಔಷಧಗಳನ್ನು ಮೆಡಿಕಲ್ ಸ್ಟೋರ್ ನವರಿಗೆ ಕೊಡಬೇಕಾಗುತ್ತದೆ . ಅಂದರೆ ಇಷ್ಟೂ process ಗೆ ಎಲ್ಲವೂ ಅಧಿಕೃತ ವ್ಯಕ್ತಿಗಳೇ ಬೇಕಾಗುತ್ತದೆ . ಇವರಲ್ಲದೇ ಬೇರೆ ಯಾರೂ ಕೂಡಾ ಈ ಕೆಲಸ ಮಾಡಲು ನಮ್ಮ ವೈದ್ಯಕೀಯ ವ್ಯವಸ್ಥೆಯಲ್ಲಿ ಅವಕಾಶ ಇಲ್ಲ . ಹಾಗಾದರೆ ಈ ಪ್ರಕರಣದಲ್ಲಿ ವೈದ್ಯಕೀಯ ತಜ್ಞ ರಲ್ಲದವರು ಮಾತ್ರ ಸಿಕ್ಕಿ ಹಾಕಿಕೊಂಡಿದ್ದಾರೆ . ಈ ಪ್ರಕರಣದಲ್ಲಿ ತಜ್ಞ ವೈದ್ಯರು , ಮೆಡಿಕಲ್ ಸ್ಟೋರ್ ನವರು ಯಾಕೆ ಸಿಕ್ಕಿ ಹಾಕಿಕೊಂಡಿಲ್ಲ ಎನ್ನಬಹುದು ಇದಕ್ಕೆ ಎರಡು ಆಯಾಮದ ಉತ್ತರ ಇದೆ .
ಇದರಲ್ಲಿ ಒಂದನೇ ಆಯಾಮ,
೧)ಈಗ ಬಂಧನ ವಾಗಿರುವವರು ಅನಧಿಕೃತ ವ್ಯಕ್ತಿಗಳು ಗರ್ಭಾಪಾತ ಮಾಡಲು ಈಗಾಗಲೇ ತಜ್ಞ ವೈದ್ಯರ ಬಳಿ ಗರ್ಭಾಪಾತ ಮಾಡುವಾಗ ಅರೆ-ಬರೆ ಕಲಿತು ಈ ಕೆಲಸ ಮಾಡುತ್ತಿರಬಹುದು .
೨) ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮ ಹಾದಿಯಲ್ಲಿ ಖರೀದಿಸಿ ಸುಸಜ್ಜಿತ ವಲ್ಲದ ಕಟ್ಟಡಗಳಲ್ಲಿ (ಆಲೆಮನೆ ಸೇರಿದಂತೆ ….!) ವೈದ್ಯಕೀಯ ತಜ್ಞತೆ ಇಲ್ಲದ ವ್ಯಕ್ತಿಗಳು ಸ್ಕ್ಯಾನಿಂಗ್ ಮಾಡುವ ಅಕ್ರಮ ಕೆಲಸಗಳು.
೩) ಷೆಡ್ಯೂಲ್ H ನಲ್ಲಿ ಬರುವ ಗರ್ಭಪಾತ ಔಷಧಗಳನ್ನು ಅಧಿಕೃತ ಮೆಡಿಕಲ್ ಸ್ಟೋರ್ ನವರ ಬಳಿ ಅನಧಿಕೃತವಾಗಿ ಖರೀದಿಸಿ ಗರ್ಭಿಣಿಯರ ಮೇಲೆ ಬಳಸುವುದು.
ಎರಡನೆಯ ಆಯಾಮ ,
ಮೇಲಿನ ಮೂರು ಅಂಶಗಳ ವಿರುದ್ಧವಾಗಿ ಅಧಿಕೃತ ವ್ಯಕ್ತಿಗಳು ಮಾಡಿದ ಅಪರಾಧವನ್ನು ಕೆಳಗಿನ ವ್ಯಕ್ತಿಗಳ ಮೇಲೆ ಹೊರಿಸಿ ಬಚಾವಾಗಿರಬಹುದು .
ಇಲ್ಲಿ ಎರಡನೆಯ ಆಯಾಮ ನಿಜವಾಗಿದ್ದಲ್ಲಿ , ತನಿಖೆಯ ಹಾದಿಯನ್ನು ಇನ್ನಷ್ಟು ಚುರುಕುಗೊಳಿಸಿ ಅಂತಹ ವ್ಯಕ್ತಿಗಳನ್ನು ತನಿಖೆ ಒಳಪಡಿಸುವ ಅಗತ್ಯತೆ ಇದೆ . ಆದರೆ ಒಂದನೆಯ ಆಯಾಮ ನಿಜವಾಗಿದ್ದಲ್ಲಿ , ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ . ಕಾರಣ , ವೈದ್ಯಕೀಯ ತಜ್ಞತೆ ಇಲ್ಲದ ವ್ಯಕ್ತಿಗಳು ಪ್ರಸೂತಿ ಚಿಕಿತ್ಸೆಯನ್ನು ಮಾಡುತ್ತಿದ್ದರೆಂದರೆ ವೈದ್ಯಕೀಯ ಪಾವಿತ್ರ್ಯತೆ ಹಾದಿ ತಪ್ಪಿದೆ ಎಂದೇ ಅರ್ಥ…! ಇಂತಹ ನಡೆಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕಕ್ಕೆ ಬಹಳ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ .
ಕೊನೆಯಲ್ಲಿ ಎರಡು ಮಾತು ,
೧) ಮೆಡಿಕಲ್ ಸ್ಟೋರ್, ಬ್ಲಡ್ ಬ್ಯಾಂಕುಗಳನ್ನು ತಪಾಸಣೆ ಮಾಡುವ ರಾಜ್ಯ ಸರ್ಕಾರದ Drug inspector ಗಳು ಇಡೀ ರಾಜ್ಯದಲ್ಲಿ ಕೇವಲ ಆರು ಅಧಿಕಾರಿಗಳು ಮಾತ್ರ ಇದ್ದಾರೆ …..! ಇನ್ನು ಮಂಡ್ಯ ಜಿಲ್ಲೆ ಮಟ್ಟದ assistant Drug controller ಕಛೇರಿಯಲ್ಲಿ ಇರುವ ಸಿಬ್ಬಂದಿಗಳು ಕೇವಲ ಇಬ್ಬರು ಮಾತ್ರ . ಇದರಲ್ಲಿ ಅಧಿಕಾರಿ ಆಗಿರುವ Assistant drug controller ಜಿಲ್ಲೆಯಲ್ಲಿರುವ ಬ್ಲಡ್ ಬ್ಯಾಂಕ್ ಗಳು ಮತ್ತು ಸುಮಾರು 750+ ಮೆಡಿಕಲ್ ಸ್ಟೋರ್ ಪರಿವೀಕ್ಷಣೆ ಮಾಡಬೇಕು . ಅದರಲ್ಲಿ ಸೂಕ್ಷ್ಮವಾದ ಔಷಧಗಳಾದ ಷೆಡ್ಯೂಲ್ H ಮತ್ತು X ಔಷಧಗಳನ್ನು ತಪಾಸಣೆ ಮಾಡಬೇಕಿರುತ್ತದೆ . ಈ ಅಧಿಕಾರಿ ಆಫೀಸ್ ನಲ್ಲಿ ಕೆಲಸ ಮಾಡಬೇಕಾ ಅಥವಾ ಮೆಡಿಕಲ್ ಸ್ಟೋರ್ ತಪಾಸಣೆ ಮಾಡಬೇಕಾ ……!?
೨) ಇಂತಹ ಆಧುನಿಕ ಕಾಲದಲ್ಲೂ ಹೆಣ್ಣು ದ್ವೇಷದ ಪರಿಸ್ಥಿತಿಗೆ ತಂದೊಡ್ಡಿರುವ ಜನರ ಮನಸ್ಥಿತಿಯನ್ನು ಬದಲಾಯಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ.