ಪಾಂಡವಪುರ : ಬಹುಜನರ ಬಹುದಿನದ ಬೇಡಿಕೆಯಾಗಿದ್ದ ಆಶ್ರಯ ಮನೆ ನಿವೇಶನದ ಹಂಚಿಕೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರಕಿದೆ. ಅಂದು 1996ರಲ್ಲಿ ಈ ಹಿಂದಿನ ಶಾಸಕರಾಗಿದ್ದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಾವಿರಕ್ಕೂ ಹೆಚ್ಚು ಬಡ ಜನರಿಗೆ ಆಶ್ರಯ ನಿವೇಶನವನ್ನು ಹಂಚಿಕೆ ಮಾಡಿದ್ದರು. ಇದೀಗ ಅವರ ಪುತ್ರ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪಟ್ಟಣದ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದಾರೆ.
ಅ.27ರಂದು ನಿವೇಶನ ಹಂಚಿಕೆಗೆ ದಿನಾಂಕ ನಿಗದಿ: ಪಟ್ಟಣದ ಹಾರೋಹಳ್ಳಿ ಸಮೀಪ ಅರ್ಹ ಫಲಾನುಭವಿಗಳಿಗೆ ಅ.27 ರಂದು ಮಂಗಳವಾರ ಆಶ್ರಯ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಆಶ್ರಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾರೋಹಳ್ಳಿ ಸಮೀಪ ಬಡವರಿಗಾಗಿ 178 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಿವೇಶನಕ್ಕಾಗಿ ಭೂಮಿ ಕಳೆದುಕೊಂಡ ರೈತರು, ಪಟ್ಟಣದಲ್ಲಿ ರಸ್ತೆ ನಿರ್ಮಾಣಕ್ಕಾಗಿ ನಿವೇಶನ ನೀಡಿದವರು ಹಾಗೂ ಪೌರ ಕಾರ್ಮಿಕರಿಗಾಗಿ 25 ನಿವೇಶನಗಳನ್ನು ಮೀಸಲು ಇಡಲಾಗಿದೆ. ಉಳಿದ 153 ನಿವೇಶನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 34 ನಿವೇಶನ ಕಾಯ್ದಿರಿಸಲಾಗುವುದು. ಉಳಿಕೆ 119 ನಿವೇಶಗಳನ್ನು ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ವಿವರಿಸಿದರು.
ಪುರಸಭೆ ಅಧಿಕಾರಿಗಳ ತಂಡ ಸಲ್ಲಿಕೆಯಾಗಿದ್ದ 693 ಅರ್ಜಿಗಳ ಪೈಕಿ 415 ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದಾರೆ. ಈ ಎಲ್ಲಾ ಅರ್ಹ ಫಲಾನುಭವಿಗಳ ಹೆಸರುಗಳನ್ನು ಪಟ್ಟಿ ಮಾಡಿ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಫಲಾನುಭವಿಗಳನ್ನು ವರ್ಗೀಕರಿಸಿ ಪ್ರತ್ಯೇಕವಾಗಿ ಲಾಟರಿ ಮೂಲಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಎಫ್ ಐ ಆರ್ ದಾಖಲೆಗೆ ಕ್ರಮ : ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ವಿತರಿಸಲಾಗಿರುವ ನಿವೇಶನಗಳಲ್ಲಿ ಪ್ರಭಾವಿಗಳು ಅಕ್ರಮ ಎಸಗಿರುವ ಬಗ್ಗೆ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ನಿವೇಶಗಳಲ್ಲಿ ಅಕ್ರಮ ನಡೆದಿರುವ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಅದರಂತೆ ಮುಖ್ಯಾಧಿಕಾರಿಗಳು ದಾಖಲೆ ಸಮೇತ ಪೊಲೀಸರಿಗೆ ದೂರು ಸಲ್ಲಿಸಲಿದ್ದಾರೆ. ಬಳಿಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಶಾಸಕರು ಇದೇ ವೇಳೆ ತಿಳಿಸಿದರು.
ಪಟ್ಟಣದ ಅಭಿವೃದ್ಧಿಗೆ ಕ್ರಮ : ಪಟ್ಟಣದ ಹೃದಯ ಭಾಗದಲ್ಲಿರುವ ಸಂತೆ ಮೈದಾನದ ಅಭಿವೃದ್ಧಿಗೆ 64 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಅದರಂತೆ ಯೋಜನೆಯ ರೂಪುರೇಷೆ ರೂಪಿಸಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜತೆಗೆ ಪಟ್ಟಣದ ಹಳೇ ಬಸ್ ನಿಲ್ದಾಣ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಅನಧಿಕೃತ ನಾಮಫಲಕ ತೆರವುಗೊಳಿಸಿ : ಪಟ್ಟಣದ ಬಹುತೇಕ ಕಡೆಗಳಲ್ಲಿ ಅನಧಿಕೃತ ನಾಮಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಪಟ್ಟಣದ ಅಯಾಕಟ್ಟಿನ ಸ್ಥಳದಲ್ಲಿರುವ ಎಲ್ಲಾ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸುವಂತೆ ಮುಖ್ಯಾಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಪುರಸಭೆಗೆ ಸೇರಿದ 82 ವಾಣಿಜ್ಯ ಮಳಿಗೆಗಳ ಪೈಕಿ 26 ಮಳಿಗೆಗಳನ್ನು ಮರು ಹರಾಜು ಮಾಡಲಾಗಿದೆ. ಹರಾಜು ಪ್ರಕ್ರಿಯೆಗೂ ಮುನ್ನ 26 ಮಳಿಗೆಗಳಿಂದ ಮಾಸಿಕ ಕೇವಲ 24 ಸಾವಿರ ಆದಾಯ ಬರುತ್ತಿತ್ತು. ಈಗ 2.3 ಲಕ್ಷ ಆದಾಯ ಬರುತ್ತಿದೆ. ಎಲ್ಲಾ ಮಳಿಗೆಗಳನ್ನು ಮರು ಹರಾಜು ಮಾಡಿದರೆ ಪ್ರತಿ ತಿಂಗಳು 1 ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಪುರಸಭೆ ಇಂಜಿನಿಯರ್ ಗಳಾದ ಚಾಡಪ್ಪ, ಯಶಸ್ವಿನಿ, ವ್ಯವಸ್ಥಾಪಕಿ ಮಂಜುಳಾ, ಪರಿಸರ ಇಂಜನಿಯರ್ ಸಹನಾಗೌಡ, ಆರೋಗ್ಯಾಧಿಕಾರಿ ಮಂಜುನಾಥ್, ಪುರಸಭೆ ಸಿಬ್ಬಂದಿ ವರ್ಗದವರಾದ ಮಣಿಪ್ರಸಾದ್, ನಾಗೇಶ್, ಸಂತೋಷ್, ಮಹೇಶ್, ನರಸಿಂಹ ಇತರರು ಇದ್ದರು.


