Sunday, November 29, 2026
spot_img

ಮಂಡ್ಯ:ಬೆಂ-ಮೈಸೂರು ಹೆದ್ದಾರಿಯಲ್ಲಿ ಅಪಘಾತ.ಆರ್ ಟಿ ಓ ಅಧಿಕಾರಿಗಳ ಕೃತ್ಯಕ್ಕೆ ಎರಡು ಬಲಿ!

**ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಟಿಪ್ಪರ್‌ಗೆ ಥಾರ್ ಡಿಕ್ಕಿ: ಕೇರಳದ ಇಬ್ಬರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ**

**ಮಂಡ್ಯ:** ಇಂಡುವಾಳು ಗ್ರಾಮದ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಜಲ್ಲಿ ತುಂಬಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಮಹೀಂದ್ರಾ ಥಾರ್ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವತಿ ಮತ್ತು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತರಲ್ಲಿ ಒಬ್ಬರನ್ನು ಲಿಫೈಲ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಯುವತಿಯ ಹೆಸರು ತಿಳಿದುಬಂದಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಬಾಸಿಲ್ ಎಂಬಾತನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರೂ ಥಾರ್‌ನಲ್ಲಿ ಮೈಸೂರು ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದರು.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಹನಗಳನ್ನು ತೆರವುಗೊಳಿಸಿದರು. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

**ಆರ್‌ಟಿಓ ಅಧಿಕಾರಿಗಳ ವಿರುದ್ಧ ಆರೋಪ**

ದುರಂತದ ಬೆನ್ನಲ್ಲೇ ಸ್ಥಳದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಅಪಘಾತಕ್ಕೆ ಆರ್‌ಟಿಓ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಂಡುವಾಳು ಸಮೀಪದ ಹೆದ್ದಾರಿ ನಿರ್ಗಮನ ಮಾರ್ಗದಲ್ಲಿ ಆರ್‌ಟಿಓ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಿತಿಮೀರಿ ಜಲ್ಲಿ ತುಂಬಿದ್ದ ಮೂರು ಟಿಪ್ಪರ್‌ಗಳು ಬಂದಿವೆ. ಅಧಿಕಾರಿಗಳು ಕೈ ತೋರಿಸಿ ತಡೆದಾಗ ಎರಡು ಟಿಪ್ಪರ್‌ಗಳು ನಿಂತಿದ್ದು, ಒಂದು ಟಿಪ್ಪರ್ ನಿಲ್ಲಿಸದೆ ವೇಗವಾಗಿ ಮುಂದೆ ಸಾಗಿದೆ. ಇದರಿಂದ ಕೆರಳಿದ ಅಧಿಕಾರಿಗಳು ತಮ್ಮ ವಾಹನದಲ್ಲಿ ಟಿಪ್ಪರ್ ಅನ್ನು ಬೆನ್ನಟ್ಟಿ, ಮುಂದೆ ಹೋಗಿ ಏಕಾಏಕಿ ಅಡ್ಡಲಾಗಿ ವಾಹನ ನಿಲ್ಲಿಸಲು ಯತ್ನಿಸಿದರು ಎನ್ನಲಾಗಿದೆ.

ಆರ್‌ಟಿಓ ವಾಹನ ಅಡ್ಡ ಬರುತ್ತಿದ್ದಂತೆ ಗಾಬರಿಗೊಂಡ ಟಿಪ್ಪರ್ ಚಾಲಕ ಹೆದ್ದಾರಿಯ ನಡುವೆಯೇ ಹಠಾತ್ತಾಗಿ ಬ್ರೇಕ್ ಹಾಕಿದ್ದಾನೆ. ವೇಗದ ಕಾರಿಡಾರ್‌ನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಟಿಪ್ಪರ್ ನಿಂತಿದ್ದರಿಂದ, ಹಿಂದಿನಿಂದ ಬರುತ್ತಿದ್ದ ಥಾರ್ ಚಾಲಕನಿಗೆ ವಾಹನವನ್ನು ನಿಯಂತ್ರಿಸಲಾಗದೆ ನೇರವಾಗಿ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ.

ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳನ್ನು ಈ ರೀತಿ ಬೆನ್ನಟ್ಟಿ ರಸ್ತೆ ಮಧ್ಯೆ ಹಠಾತ್ತಾಗಿ ನಿಲ್ಲಿಸುವುದು ಅತ್ಯಂತ ಅಪಾಯಕಾರಿ. ಹೀಗಿದ್ದರೂ ಅಧಿಕಾರಿಗಳು ಇಂತಹ ಸಾಹಸಕ್ಕೆ ಕೈಹಾಕಿ ಇಬ್ಬರ ಪ್ರಾಣಕ್ಕೆ ಕಾರಣರಾದರೇ ಎಂಬ ಪ್ರಶ್ನೆ ಎದ್ದಿದೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ವಾಹನಗಳ ಅತಿವೇಗಕ್ಕೆ ಮಾತ್ರವಲ್ಲದೆ ಅಧಿಕಾರಿಗಳ ಅಜಾಗರೂಕತೆಗೂ ಬಲಿಯಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!