ಮಂಡ್ಯ: ನಮ್ಮದು ಗಟ್ಟಿಯಾದ ಸರ್ಕಾರ, ಐದು ವರ್ಷ ಪೂರ್ಣ ಅಧಿಕಾರ ಮಾಡಲಿದ್ದು, ಶಿಂಧೆ ರೀತಿ ತಾಯಿಗೆ ದ್ರೋಹ ಮಾಡುವವರು ನಮ್ಮಲ್ಲಿಲ್ಲ ಎಂದು ಮಂಡ್ಯ ಶಾಸಕ ಗಣಿಗ ಪಿ.ರವಿಕುಮಾರ್ ಗೌಡ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ಶಿಂಧೆ ಅನ್ನ ಕೊಟ್ಟ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಅವರ ರೀತಿ ನಮ್ಮಲ್ಲಿ ಶಕುನಿ ಕೆಲಸ ಯಾರು ಮಾಡಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನಮ್ಮದು 136+2 (ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರ ಬಲ) ಗಟ್ಟಿಯಾದ ಸರ್ಕಾರವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಯಾವ ಅಡ್ಡಿ ಆತಂಕವೂ ಇಲ್ಲದೇ ಸಂಪೂರ್ಣವಾಗಿ ಐದು ವರ್ಷ ಸ್ಟ್ರಾಂಗ್ ಆಗಿ ಸರ್ಕಾರ ನಡೆಯುತ್ತದೆ ಎಂದರು.
ಬಿಜೆಪಿಯ 25 ಹಾಗೂ ಜೆಡಿಎಸ್‌ನ 13 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಆದ್ದರಿಂದ ಮೊದಲು ಅವರ ಪಕ್ಷವನ್ನು ಉಳಿಸಿಕೊಳ್ಳಲಿ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಲಿ. ಎಂಪಿ ಚುನಾವಣೆ ಮುಂಚೆಯೇ ಅವರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಎಲ್ಲರೂ ಸಂಪರ್ಕದಲ್ಲಿ ಇದ್ದಾರೆ. ಅದರಂತೆ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಹಿರಿಯ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ನ ಕಟ್ಟಪ್ಪ ಆಗಿದ್ದಾರೆ. ಅವರ ಹೆಸರು ಬೇಡ, ಬೇರೆ ಅವರು ನಮ್ಮೊಟ್ಟಿಗೆ ಇದ್ದಾರೆ. ಕೆಲವೇ ದಿನಗಳಲ್ಲಿ ಬಿಜೆಪಿ ವಿರೋಧ ಪಕ್ಷ ಸ್ಥಾನ ಕಳೆದುಕೊಳ್ಳಲಿದೆ. ವಿರೋಧ ಪಕ್ಷಕ್ಕೆ ಬೇಕಾದ ಸಂಖ್ಯಾಬಲ ಅವರ ಬಳಿ ಇರಲ್ಲ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿದೆ. ರಾಜ್ಯದ ಬಿಜೆಪಿ ಯಾವಾಗಲೂ ಸ್ವತಂತ್ರವಾಗಿ ಗೆದ್ದು ಬಂದಿಲ್ಲ. ಬೇರೆ ಅವರನ್ನು ಒಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈಗ ಅದು ನಡೆಯುವುದಿಲ್ಲ. ರಾಮರಾಜ್ಯ ನಮ್ಮ ಸರ್ಕಾರದಲ್ಲಿ ನಡೆಯುತ್ತದೆ. ಟೈಂ ಪಾಸ್‌ಗೆ ಬಿಜೆಪಿ ಅವರು ಮಾತಾಡುತ್ತಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.