Wednesday, September 18, 2024
spot_img

ಓಲೈಕೆ ರಾಜಕಾರಣ ಮಾಡುವುದು ಮರಿತಿಬ್ಬೇಗೌಡರಿಗೆ ನೀರು ಕುಡಿದಷ್ಟೇ ಸುಲಭ:ಪುಟ್ಟಸಿದ್ದ ಶೆಟ್ಟಿ ಲೇವಡಿ

ಮಂಡ್ಯ: ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಮರಿತಿಬ್ಬೇಗೌಡರು ಆಸೆ, ಆಮಿಷಗಳನ್ನು ಒಡ್ಡಿ, ಜಾತಿ ಹೆಸರನ್ನು ಮುನ್ನೆಲೆಗೆ ತಂದು ಗೆದ್ದು ಶಿಕ್ಷಕರನ್ನು ವಂಚಿಸಿದ್ದಾರೆ. ಜೆಡಿಎಸ್ ಪರಿಷತ್ ಸದಸ್ಯರಾದವರು ಈಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ ಎಂದರೆ ಯಾರು ಅಧಿಕಾರದಲ್ಲಿರುತ್ತಾರೋ ಅವರನ್ನು ಓಲೈಸಿ ರಾಜಕಾರಣ ಮಾಡುವುದು ಮರಿತಿಬ್ಬೇಗೌಡರಿಗೆ ನೀರು ಕುಡಿದಷ್ಟೇ ಸುಲಭ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಸ್ವಾಭಿಮಾನಿ ಶಿಕ್ಷಕರ ವೇದಿಕೆ(ಮೈಸೂರು ವಿಭಾಗ) ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಶಿಕ್ಷಕರ ಬೇಡಿಕೆಗಳಿಗಾಗಿ ನನ್ನ ಸಂಘಟನಾತ್ಮಕ ಹೋರಾಟಗಳಿಂದ ಶಿಕ್ಷಕರ ಕ್ಷೇತ್ರಕ್ಕೆ ನಾನು ಮಾಡಿರುವ ಸಾಧನೆ ಪರಿಗಣಿಸಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಪಕ್ಷೇತರವಾಗಿ ಸ್ಪರ್ಧಿಸಿರುವ ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಶಿಕ್ಷಕರ ಕ್ಷೇತ್ರದಲ್ಲಿನ ಹಲವು ಬೇಡಿಕೆಗಳ ಕುರಿತು ಸಂಘಟನಾತ್ಮಕ ಹೋರಾಟ ನಡೆಸಿದ್ದೇನೆ. ಈ ಪ್ರಯತ್ನದ ಫಲವಾಗಿ ಶಿಕ್ಷಕರಿಗೆ ಹಲವು ಅನುಕೂಲವಾಗಿವೆ ಎಂದು ತಿಳಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರ ಸೇರಿ ಸುಮಾರು ೧೮,೩೭೯ ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ೧೯೮೬ ರಿಂದ ೨೦೧೨ ರವರೆಗೆ ನಾನು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ಥಾಪಿಸಿದ್ದು, ಮೂವರು ಶಿಕ್ಷಕರನ್ನು ಪಕ್ಷೇತರರನ್ನಾಗಿ ನಿಲ್ಲಿಸಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದ್ದು, ೧೯೯೪ರಲ್ಲಿ ನಾನೂ ಕೂಡ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದೆ ಎಂದರು.

ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ದಕ್ಷಿಣ ಭಾರತದ ಉತ್ತಮ ಶಾಸಕ ಪ್ರಶಸ್ತಿಯನ್ನೂ ಪಡೆದಿದ್ದೇನೆ ಎಂದು ಅವರು ವಿವರಿಸಿದರು.

ಮರಿತಿಬ್ಬೇಗೌಡರ ಮರ್ಮವು ಸ್ವಾಭಿಮಾನಿ ಶಿಕ್ಷಕರಿಗೆ ತಿಳಿಯದ್ದೇನಲ್ಲ, ಆದ್ದರಿಂದ ಜಾತಿ, ಮತ ಪರಿಗಣಿಸದೆ ಈ ಕ್ಷೇತ್ರದಲ್ಲಿ ಯಾರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಶಿಕ್ಷಕರು ತುಲನೆ ಮಾಡಿ ಪಕ್ಷೇತರವಾಗಿ ಕಣಕ್ಕಿಳಿದಿರುವ ನನ್ನನ್ನು ಬೆಂಬಲಿಸಬೇಕಿದೆ ಎಂದರು.

೧೯೮೬ ರಿಂದ ೧೯೮೯ ರವರೆಗೆ ಪ್ರೌಢಶಾಲಾ ಸಹಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸದನದ ಒಳಗೆ ಮತ್ತು ಹೊರಗೆ ನಡೆಸಿದ ಹೋರಾಟದ ಫಲವಾಗಿ ರಾಮಕೃಷ್ಣ ಹೆಗಡೆ ಅವರಿಂದ ಎರಡು ಪ್ರಮುಖ ಬೇಡಿಕೆಗಳು ಈಡೇರಿವೆ. ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಗ್ರೇಡ್–೧ ಹುದ್ದೆ ಜಾರಿಯಾಗಿದ್ದು ಸೇರಿದಂತೆ ಇತರೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದು ನನ್ನ ಸಂಘಟನಾತ್ಮಕ ಹೋರಾಟದ ಪರಿಣಾಮಗಳಿಂದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾಯಕ ಸಮಾಜ ಒಕ್ಕೂಟದ ರಾಜ್ಯ ಸಂಚಾಲಕ ಹೆಚ್.ಎಲ್.ಕೆಂಪಶೆಟ್ಟಿ, ಉಪಾಧ್ಯಕ್ಷ ಶಿವಪ್ಪಶೆಟ್ಟಿ, ಮೋಹನ್,ಸಂಘಟನಾ ಕಾರ್ಯದರ್ಶಿ ಶಿವರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!