ಮಂಡ್ಯ :-ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ರಕ್ತದ ಕಣಕಣದಲ್ಲೂ ಕೆಚ್ಚಿದೆ, ನಾನೊಬ್ಬ ಸ್ವಾಭಿಮಾನಿ ಕನ್ನಡಿಗ ಎಂದು ಜಂಭ ಕೊಚ್ಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ವಿಚಾರವಾಗಿ ಮಾಡಿರುವ ಕಾನೂನಾತ್ಮಕ ಚಿಂತನೆ ಮತ್ತು ಕೊಟ್ಟಿರುವ ಕೊಡುಗೆ ಬಗ್ಗೆ ತಿಳಿಸಲಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ನಗರದ ಹೊರವಲಯದ ಅಮರಾವತಿ ಹೋಟೆಲ್ ಬಳಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದ ಅಮರಾವತಿ ಚಂದ್ರಶೇಖರ್ ರನ್ನ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸುವ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಬೇಕಾಗಿದೆ, ದೇವೇಗೌಡರ ಬಗ್ಗೆ ಲಘು ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ವಿಚಾರದಲ್ಲಿ ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿದರು.
ಗ್ಯಾರೆಂಟಿಗಾಗಿ ನೀಡುತ್ತಿರುವ ದುಡ್ಡು ಯಾರಪ್ಪನದ್ದು, ಅದು ರಾಜ್ಯದ ಜನತೆಗೆ ಸೇರಿದ ಹಣ, ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ ಸರ್ಕಾರ 1.05 ಲಕ್ಷ ಕೋಟಿ ಸಾಲ ತಂದು ಗ್ಯಾರೆಂಟಿಗೆ 52,000 ನೀಡಿದೆ ಇನ್ನುಳಿದ ದುಡ್ಡು ಎಲ್ಲಿದೆ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಲಾಗಿದೆ, ರಾಜ್ಯದ ಖಜಾನೆ ಖಾಲಿ ಮಾಡಿ ಕೇಂದ್ರ ಸರ್ಕಾರದ ಮೇಲೆ ದೋಷಾರೋಪಣೆ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೂಗಾಡುತ್ತಿದ್ದಾರೆ, ನಿಜವಾಗಲೂ ಕೇಂದ್ರ ಸರ್ಕಾರ ಯೋಜನೆಗಳಿಗೆ ಹಣ ನೀಡಲು ಮುಂದಾಗಿದೆ, ಆದರೆ ರಾಜ್ಯ ಸರ್ಕಾರ ಯೋಜನೆಯನ್ನ ರೂಪಿಸುತ್ತಿಲ್ಲ, ಸಂಘರ್ಷ ಮಾಡಿಕೊಂಡರೆ ಹಣ ಸಿಗಲಿದೆಯಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದಾಗ ಕಾಂಗ್ರೆಸ್ ಪಕ್ಷ ರೈತರ ಸಾಲ ಮನ್ನಾ ಮಾಡಲು ಅಡ್ಡಗಾಲು ಹಾಕಿತು, ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ನನ್ನನ್ನು ಎಲ್ಲಿಂದ ದುಡ್ಡು ತಂದು ಮಾಡುತ್ತಾನೆ ಎಂದು ಟೀಕಿಸಿದ್ದರು, ಆದರೆ ನಾನು ಸರ್ಕಾರ ರಚನೆ ಮಾಡಲು ಒಪ್ಪಿಕೊಂಡಿದ್ದೆ, ರೈತರ ಸಾಲ ಮನ್ನಾ ಮಾಡಿ ತೋರಿಸಲು ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ರೈತರು ಪಡೆದಿದ್ದ 750 ಕೋಟಿ ಸಾಲವನ್ನು ಮುಖ್ಯಮಂತ್ರಿ ಆಗಿದ್ದಾಗ ಮನ್ನಾ ಮಾಡಿಸಿದ್ದ 1.28 ಲಕ್ಷ ರೈತರಿಗೆ ಇದರಿಂದ ಪ್ರಯೋಜನ ದೊರೆಯಿತು, 2019ರಲ್ಲಿ 400 ಕೋಟಿ ವೆಚ್ಚದಲ್ಲಿ ಮಂಡ್ಯದಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಯೋಜನೆ ರೂಪಿಸಿ 100 ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದೆ, ಆದರೆ ಈಗಿನ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದೆ ಆದರೆ ಹಣ ನೀಡಿಲ್ಲ, ಕಾರ್ಖಾನೆ ಆಸ್ತಿ ಮಾರಾಟ ಮಾಡಿ ಹೊಸ ಕಾರ್ಖಾನೆ ನಿರ್ಮಿಸಲು ಸರ್ಕಾರ ಮುಂದಾಗಿದೆ ಆದರೆ ಕಾಂಗ್ರೆಸ್ ಶಾಸಕರು ಈಗಾಗಲೇ ಕಾರ್ಖಾನೆ ನಿರ್ಮಾಣವಾಗೋಯ್ತು ಎಂದು ಪುಟ್ಟಗಟ್ಟಲೆ ಜಾಹೀರಾತು ನೀಡಿದ್ದಾರೆ ಆದರೆ ವಾಸ್ತವವಾಗಿ ಮಂಡ್ಯ ಜಿಲ್ಲೆಗೆ ನಯ ಪೈಸೆ ಕೊಟ್ಟಿಲ್ಲ ಎಂದು ತಿಳಿಸಿದರು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಗೆ ನೀರಾವರಿ, ಶಿಕ್ಷಣ,ವಿದ್ಯುತ್ ಸೇರಿದಂತೆ ಮೂಲಸೌಕರ್ಯ ದೊರಕಿಸಿ ಕೊಟ್ಟಿದ್ದೇನೆ, ಎರಡನೇ ಬಾರಿ ಮುಖ್ಯಮಂತ್ರಿ ಯಾಗಿದ್ದಾಗ ಸಾವಿರಾರು ಕೋಟಿ ಅನುದಾನವನ್ನು ಜಿಲ್ಲೆಗೆ ನೀಡಿದಾಗ ಇದು ರಾಜ್ಯ ಬಜೆಟ್ ಅಲ್ಲ ಮಂಡ್ಯ ಜಿಲ್ಲೆ, ಬಜೆಟ್ ಎಂದು ಟೀಕಿಸಿದ್ದರು ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆ ಮನೆಗೆ ಹೋಗಿ ಜನತೆಗೆ ವಾಸ್ತವ ವಿಚಾರ ಮನದಟ್ಟು ಮಾಡಿಕೊಡಿ, ಆ ಮೂಲಕ ಚುನಾವಣಾ ಪ್ರಚಾರ ನಡೆಸಿ ಎಂದು ಮನವಿ ಮಾಡಿದರು.
ಶಾಸಕ ಎಚ್ ಟಿ ಮಂಜು,ಮಾಜಿ ಸಚಿವ ಡಿ.ಸಿ ತಮ್ಮಣ್ಣ, ಸುರೇಶ ಗೌಡ, ಡಾ. ಕೆ ಅನ್ನದಾನಿ, ಪಕ್ಷದ ಜಿಲ್ಲಾಧ್ಯಕ್ಷ ಡಿ ರಮೇಶ್, ಮುಖಂಡರಾದ ರಾಮಚಂದ್ರ, ವಿಜಯ ಆನಂದ್, ಸಿದ್ದರಾಮೇಗೌಡ ಇತರರಿದ್ದರು.