ಮಂಡ್ಯ : ಬರಗಾಲದಿಂದಾಗಿ ಸಂಕಷ್ಟಕ್ಕೀಡಾಗಿ ತತ್ತರಿಸಿ ಹೋಗಿರುವ ರೈತರಿಗೆ ರಾಜ್ಯ ಸರ್ಕಾರ
ಶೀಘ್ರ ಬರ ಪರಿಹಾರ ವಿತರಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದರು.
ರಾಜ್ಯದ ಎಲ್ಲಾ ತಾಲೂಕುಗಳು ಭೀಕರ ಬರ ಕಂಡಿವೆ. ಸರ್ಕಾರ ಬರ ಪರಿಹಾರ ನೀಡುವುದಾಗಿ ಹೇಳಿ ಈವರೆಗೂ ನೀಡಿಲ್ಲ. ಅದರಲ್ಲೂ ಕೇವಲ ಒಣಭೂಮಿಗೆ ಮಾತ್ರ ಪರಿಹಾರ ಎನ್ನುವ ಧೋರಣೆ ಸರಿಯಲ್ಲ. ಹಸಿ ಭೂಮಿಗೂ ಪರಿಹಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬರದಿಂದ ಕಬ್ಬು, ತೆಂಗು, ಅಡಕೆ ಬೆಳೆ ಬಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಇದನ್ನು ಬರ ಎಂದು ಪರಿಗಣಿಸಿ ತ್ವರಿತವಾಗಿ ರೈತರ ಖಾತೆಗೆ ಪರಿಹಾರ ಕೊಡಬೇಕು. ಒಣಬರ, ಹಸಿಬರ ಎಂದು ವಿಂಗಡಣೆ ಸಲ್ಲದು. ಒಣಬರ ಎಂದರೆ ಬಿತ್ತನೆ ಹಾಕದಿರುವುದು, ಹಸಿಬರ ಎಂದರೆ ಬಿತ್ತನೆ ಮಾಡಿ ನಾಟಿ ಹಾಕಿ ಬೆಳೆ ಒಣಗಿರುವುದು. ಈಗಾಗಲೇ ಶೇ. 24ರಷ್ಟು ತೆಂಗು ನಾಶವಾಗಿದೆ. ಬರ ಪರಿಹಾರದ ಪಟ್ಟಿ ಬಿಡುಗಡೆಯಾಗಿದೆ ಅಷ್ಟೇ. ರೈತರ ಖಾತೆಗೆ ಹಣ ಬಿಡುಗಡೆಯಾಗಿಲ್ಲ. ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ ಟಿಸಿ, ಸರ್ವೆ ನಂ ಇದೆ. ಹೀಗಾಗಿ ಪರಿಹಾರಕ್ಕೆ ನೋಂದಣಿ ಮಾಡಿಸಬೇಕು ಎಂಬ ಪ್ರಶ್ನೆಯೇ ಉದ್ಬವಿಸುವುದಿಲ್ಲ. ನೀರಾವರಿ, ಮಳೆಯಾಶ್ರಿತ ಎಂಬುದಲ್ಲ, ಬದಲಿಗೆ ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕು. ಬೆಳೆ ವಿಮೆಗೆ ಮಾತ್ರ ನೋಂದಣಿ ಮಾಡಿಸಬೇಕಷ್ಟೇ. ಬರ ಪರಿಹಾರಕ್ಕಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸರ್ಕಾರ ತ್ವರಿತಗತಿಯಲ್ಲಿ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿ ನಾಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ ಅವರು, ಕಾಮಗಾರಿ ಪ್ರಾರಂಭವಾಗಿ ಇದೀಗ ಕುಂಠಿತಗೊಂಡಿದೆ. ಚಾಲನೆಗೆ ಒಪ್ಪಿದ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ ಎಂದರು.
7 ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಒಟ್ಟು 42 ಕಿ.ಮೀ ಕಾಮಗಾರಿಯಲ್ಲಿ ಕೇವಲ 18ಕಿ.ಮೀ ಕಾಮಗಾರಿ ಮುಗಿದಿದೆ. ಶೇ. 40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಶೇ.60ರಷ್ಟು ಬಾಕಿ ಇದೆ. ಕಳೆದ 15ದಿನಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ನೀರು ಬರುತ್ತೆ. ನಂತರ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಈಗಾಗಲೇ 6 ತಿಂಗಳಿಂದ ಬೆಳೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಗಂಭೀರವಾಗಿ ಪರಿಗಣಿಸಿ ಹಗಲು-ರಾತ್ರಿ ಕಾಮಗಾರಿ ನಡೆಸುವ ಮೂಲಕ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಆಧುನೀಕರಣ ಕಾಮಗಾರಿಯಲ್ಲಿ ಕಾಂಕ್ರೀಟ್ ಕೆಲಸ ಮಾಡುವ ಮೊದಲು ಸೇತುವೆ, ಸೋಪಾನಕಟ್ಟೆ, ರಾಂಪ್ ಕೆಲಸ ಮುಗಿಸಬೇಕಿತ್ತು. ಕಾಂಕ್ರೀಟ್ ಕೆಲಸ ಮಾಡುತ್ತಿರುವುದರಿಂದ ಮಳೆ ಬಂದರೆ ಕೊಚ್ಚೆಹೋಗಿ ನಷ್ಟವಾಗಲಿದೆ ಎಂದರು.
ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಕಳಪೆಯಾಗಿಲ್ಲ. ಆದರೆ ತ್ವರಿತವಾಗಿ ಕಾಮಗಾರಿ ನಡೆಯುತ್ತಿಲ್ಲ. ಮಾಜಿ ಶಾಸಕ ಪುಟ್ಟಣ್ಣಯ್ಯ ಅವಧಿಯಲ್ಲಿ ನಡೆದ ಸಿಡಿಎಸ್ ನಾಲಾ ಆಧುನೀಕರ ಕಾಮಗಾರಿ ಪರಿಪಕ್ವತೆಯಿಂದ ಕೂಡಿದೆ ಎಂದು ತಿಳಿಸಿದರು.
ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ : ರೈತರು ಬರಗಾಲದಿಂದ ತತ್ತರಿಸಿರುವುದರಿಂದ ಸರ್ಕಾರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಹೈನುಗಾರಿಕೆಯಿಂದ ಒಂದಷ್ಟು ಹಣ ನೋಡುತ್ತಿದ್ದಾರೆ. ಹೀಗಾಗಿ ಶೀಘ್ರ ಪ್ರೋತ್ಸಾಹ ಧನ ಬಿಡುಗಡೆಗೊಳಿಸಬೇಕು. ಜತೆಗೆ ಮನ್ ಮುಲ್ ಹಾಲು-ನೀರು ಹಗರಣದ ತನಿಖೆ ಯಾವ ಹಂತದಲ್ಲಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ನಷ್ಟದ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ರೈತಸಂಘ ಹಾಲು-ನೀರು ಹಗರಣದ ಬಗ್ಗೆ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ. ಹಿಂದಿನ ಸರ್ಕಾರ ಸಿಐಡಿ ತನಿಖೆಗೆ ಪ್ರಕರಣ ಒಪ್ಪಿಸಿತ್ತು. ಈ ಸರ್ಕಾರ ತನಿಖೆ ಚುರುಕುಗೊಳಿಸಿ ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಕೆರೆ ಹೂಳೆತ್ತಲು ಆಗ್ರಹ : ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆಗಳ ಹೂಳೆತ್ತಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಈಗಾಗಲೇ ಪಾಂಡವಪುರ ತಾಲೂಕಿನ ಬೇಬಿ, ಡಾಮಡಹಳ್ಳಿ, ಹಾರೋಹಳ್ಳಿ ಕೆರೆಗಳಲ್ಲಿ ರೈತರು ಹೂಳೆತ್ತಿದ್ದಾರೆ. ಸರ್ಕಾರವೇ ಮಳೆ ಬೀಳುವ ಮುಂಚೆ ಎಲ್ಲಾ ಕೆರೆ ಹೂಳೆತ್ತಿಸುವುದು ಸೂಕ್ತವೆನಿಸುತ್ತದೆ. ಪಾಂಡವಪುರ ಹಿರೋಡೆ ಕೆರೆಯಲ್ಲಿ ನೀರೇ ಇಲ್ಲ, ಹೂಳು ಜಾಸ್ತಿ ಇದೆ. ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಹೂಳೆತ್ತಿಸುವ ಜ್ಞಾನವಿಲ್ಲವೇ? ನೆರೆ ಬಂದಾಗ ಕೆರೆ-ಕಟ್ಟೆಗಳನ್ನು ತುಂಬಿಸಲು ಸರ್ಕಾರ ಮುಂದಾಗಬೇಕು. ಆಗ ನೀರಿನ ಲೆಕ್ಕ ಸಿಗಲ್ಲ. ತಮಿಳುನಾಡಿಗೆ ನೀರು ಹರಿಸಬಹುದು. ಕೋರ್ಟ್ ಕೂಡ ನೀರಿನ ಲಭ್ಯತೆ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸುವ ಆದೇಶ ನೀಡಬೇಕು. ಅಣೆಕಟ್ಟೆಯಲ್ಲಿ ನೀರಿದೆಯೋ, ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಮೈಕ್ರೋ ಫೈನಾನ್ಸ್ ಗಳ ಹಾವಳಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದೆ. ಮೊದಲೆ ಬರ ಇದೆ. ಅಂತಹದ್ದರಲ್ಲಿ ಹಳ್ಳಿಗಳಿಗೆ ತೆರಳಿ ಸಾಲ ವಸೂಲಿಗೆ ರೈತರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಜತೆಗೆ ರೈತರ ಚಿನ್ನಾಭರಣಗಳನ್ನು ಹರಾಜು ಹಾಕಲಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಹರಾಜು ನಿಲ್ಲಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರೈತಸಂಘದ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆನ್ನಾಳು ನಾಗರಾಜು, ಹರವು ಪ್ರಕಾಶ್, ರವಿಕುಮಾರ್, ಬಾಲಚಂದ್ರು, ಶಿವಳ್ಳಿ ಚಂದ್ರು ಇತರರಿದ್ದರು.