ಕಳೆದ 800 ವರ್ಷಗಳಿಂದ ಅಸ್ಪೃಶ್ಯತೆ ಕಾರಣದಿಂದಾಗಿ ದೇವಾಲಯದಿಂದ ದೂರ ಉಳಿದಿದ್ದ ದಲಿತರು, ಸರ್ಕಾರದ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಬೀರೇಶ್ವರ ದೇವಾಲಯಕ್ಕೆ ಪ್ರವೇಶ ಮಾಡಿದ ಐತಿಹಾಸಿಕ ಘಟನೆ ಮಂಡ್ಯ ತಾಲ್ಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಶುಕ್ರವಾರ (ಮಾ.15) ಸಂಜೆ ನಡೆಯಿತು.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಲಕ್ಷ್ಮಣ್ ಚೀರನಹಳ್ಳಿಯವರ ನೇತೃತ್ವದಲ್ಲಿ, ದಸಂಸದ ಎಂ.ವಿ.ಕೃಷ್ಣ, ಕರ್ನಾಟಕ ರಕ್ಷಣ ವೇದಿಕೆಯ ಹೆಚ್.ಡಿ.ಜಯರಾಂ ಕಂದಾಯ ಇಲಾಖೆಗೆ ರಾಜಸ್ವ ನಿರೀಕ್ಷಕ ಟಿ.ಅರವಿಂದ ಕುಮಾರ್, ಗ್ರಾಮ ಆಡಳಿತಾಧಿಕಾರಿ ರಾಜು, ಹಳುವಾಡಿ ಪಿಡಿಓ ಚಿಕ್ಕತಾಯಮ್ಮ ಹಾಗೂ ಮುಜರಾಯಿ ಇಲಾಖೆಯ ಮಂಜೇಶ್ ಅವರ ಸಮ್ಮುಖದಲ್ಲಿ ದಲಿತರು ಇಂದು ದೇವಾಲಯ ಪ್ರವೇಶ ಮಾಡಿದರು.
ದೇವಾಲಯ ಪ್ರವೇಶ ಮಾಡಿದ ದಲಿತರಿಗೆ ದೇವಾಲಯದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ ಸಂಭ್ರಮಿಸಿದರು. ಅಲ್ಲದೇ ದೇವಾಲಯ ಒಳ ಆವರಣದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಟಿ.ಅರವಿಂದ ಕುಮಾರ್ ಮಾತನಾಡಿ, ಈ ದೇವಾಲಯಕ್ಕೆ ಎಲ್ಲ ಜಾತಿ, ಜನಾಂಗದ ಜನರಿಗೆ ಮುಕ್ತವಾದ ಅವಕಾಶವಿದೆ, ಇಲ್ಲಿ ಯಾರೇ ಆಗಲಿ ಭೇದ ಭಾವ ಮಾಡಿದರೆ, ಅದು ಸರ್ಕಾರ ಕಾನೂನುಗಳಿಗೆ ವಿರುದ್ದವಾಗುತ್ತದೆ. ಗ್ರಾಮದ ಎಲ್ಲಾ ಸಮುದಾಯಗಳ ಜನರು ಸಹಬಾಳ್ವೆಯಿಂದ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ದೇವಾಲಯ ಪ್ರವೇಶಕ್ಕೆ ಪ್ರತಿಯೊಬ್ಬರಿಗೆ ಸಮಾನವಾದ ಹಕ್ಕುಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಕಲ್ಪಿಸಿದೆ, ಹಾಗಾಗಿ ತಾರತಮ್ಯ ಮಾಡುವುದು ಅಪರಾಧವಾಗುತ್ತದೆ. ಅದರ ವಿರುದ್ದ ಸರ್ಕಾರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದಂತೆ ನಮ್ಮ ಗ್ರಾಮದ ಎಲ್ಲ ಮುಖಂಡರು ಒಪ್ಪಿ ದಲಿತರಿಗೆ ಮುಕ್ತ ಅವಕಾಶ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.
ಜಿಲ್ಲೆಗೆ ಮಾದರಿಯಾದ ಚೀರನಹಳ್ಳಿ
ಕೆಲ ದಿನಗಳ ಹಿಂದೆ ಚೀರನಹಳ್ಳಿ ಗ್ರಾಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ, ದೇವರ ಮೆರವಣಿಗೆ ಪೂಜಾ ಕುಣಿತದಲ್ಲಿ ದಲಿತರು ಭಾಗವಹಿಸುವಂತಿಲ್ಲ ಎಂಬಂತ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು ಇದರಿಂದ ಎಚ್ಚೆತ್ತ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲಾ ಜಾತಿ ಜನಾಂಗದವರಿಗೆ ಮುಕ್ತ ಪ್ರವೇಶ ನೀಡಬೇಕೆಂದು ಅರ್ಚಕರಿಗೆ ಸೂಚಿಸಿದ್ದರು.
ಆನಂತರ ಚೀರನಹಳ್ಳಿ ಗ್ರಾಮಸ್ಥರು ಸರಣಿ ಸಭೆಗಳನ್ನು ನಡೆಸಿದ ಚೀರನಹಳ್ಳಿ ಗ್ರಾಮದ ಎಲ್ಲ ಜಾತಿಗಳ ಮುಖಂಡರು ಸರಣಿ ಸಭೆಗಳನ್ನು ನಡೆಸಿ, ಅಂತಿಮವಾಗಿ ಎಲ್ಲ ಜಾತಿಯವರಿಗೆ ದೇವಸ್ಥಾನಕ್ಕೆ ಮುಕ್ತ ಪ್ರವೇಶ ನೀಡುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಾದೇಶ್, ಯಜಮಾನರಾದ ಶಿವಣ್ಣ, ಜವನಯ್ಯ, ಸೋಮರಾಜು, ನಿವೃತ್ತ ನೌಕರ ಬೊಮ್ಮಯ್ಯ, ರಾಮಯ್ಯ, ಜಯಪ್ರಕಾಶ್, ಉಮೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಬಾಕ್ಸ್
ಎಲ್ಲರಿಗೂ ಮುಕ್ತ ಪ್ರವೇಶ
ಬೀರೇಶ್ವರ ದೇವಾಲಯಕ್ಕೆ ಎಲ್ಲ ಜಾತಿ ಜನಾಂಗದವರಿಗೂ ಮುಕ್ತ ಪ್ರವೇಶವಿದೆ, ಇಲ್ಲಿ ಯಾವುದೇ ತಾರತಮ್ಯವಿಲ್ಲ. ಆಸಕ್ತಿ ಇರುವ ಯಾರೂ ಬೇಕಾದರೂ ಪೂಜೆ ಸಲ್ಲಿಸಲು ಮುಕ್ತ ಅವಕಾಶವಿದೆ ಎಂದು ಅರ್ಚಕ ಚನ್ನಮಾದು ತಿಳಿಸಿದರು.
ಚೀರನಹಳ್ಳಿಯ ಬೀರೇಶ್ವರ ದೇವಾಲಯಕ್ಕೆ ದಲಿತರ ಪ್ರವೇಶದ ಘಟನೆಯೂ ಮಂಡ್ಯ ಜಿಲ್ಲೆಗೆ ಮಾದರಿಯಾಗಿದೆ. ಯಾವುದೇ ಪೊಲೀಸ್ ದೂರುಗಳಿಲ್ಲದೇ, ಘರ್ಷಣೆ ಇಲ್ಲದೆ ಗ್ರಾಮದ ಎಲ್ಲ ಸಮುದಾಯದ ಜನತೆ ಕುಳಿತು ಕಾನೂನಿನ ಬಗ್ಗೆ ಮನವರಿಕೆ ಮಾಡಿ, ವಿಶ್ವಾಸಗಳಿಸಿ, ದಲಿತರಿಗೆ ಪ್ರವೇಶ ಕಲ್ಪಿಸಿರುವುದು ಜಿಲ್ಲೆಯಲ್ಲಿ ಸೌಹಾರ್ದತೆಗೆ ಚೀರನಹಳ್ಳಿ ಮಾದರಿಯಾಗಿದೆ ಎಂದು ವಕೀಲ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದ್ದಾರೆ.