ಮಂಡ್ಯ:ಜೂ೧೮.ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ಜತೆಗೆ ನೀರಾವರಿ ಕಾಯಿದೆಗಳಿಗೆ ತಿದ್ದುಪಡಿ ತಂದು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಮಂಗಲ ನೀರು ಬಳಕೆದಾರರ ಸಂಘದ ಸ್ಥಾಪಕ ಅಧ್ಯಕ್ಷ ಮಂಗಲ ಯೋಗೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಹ ಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಿ ಆ ಮೂಲಕ ರೈತರಲ್ಲಿ ನೀರು ನಿರ್ವಹಣೆ, ನೀರಿನ ಮಿತಬಳಕೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯೊಡನೆ ಪ್ರಾರಂಭಿಸಿದ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕವಾಗಿದೆ ಎಂದರು.
ಕಳೆದ ಸಾಲಿನಲ್ಲಿ ಭೀಕರ ಕ್ಷಾಮ ತಲೆದೋರಿದ ಸಂದರ್ಭದಲ್ಲಿ ನೀರು ನಿರ್ವಹಣೆಯ ಮಹತ್ವ ಹಿಂದೆಂದಿಗಿಂತಲೂ ಪ್ರಸ್ತುತತೆ ಹೆಚ್ಚಾಗಿದೆ. ಇದರ ಮಹತ್ವವನ್ನು ಅರಿತು ಇಡೀ ರಾಷ್ಟ್ರದಲ್ಲಿ ಸಹಕಾರ ತತ್ವದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಿದ ಹೆಮ್ಮೆಯ ಗುರುತು ಕಾಂಗ್ರೆಸ್ ಸರ್ಕಾರಕ್ಕಿದೆ ಎಂದರು.
ಹೀಗಾಗಿ ನೀರಾವರಿ ಕಾಯಿದೆಗಳಿಗೆ ತಿದ್ದುಪಡಿ ತಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು
ರೈತರು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಲ್ಲಿ ಇರಬೇಕಾದದ್ದು ಅವಶ್ಯಕ ಎನಿಸಿದೆ ಎಂದರು.
ಕಳೆದ ಮೂರು ದಶಕಗಳಿಂದಲೂ ನೀರು ಬಳಕೆದಾರರ ಸಹಕಾರ ಸಂಘಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶ ಸಾಧಿಸದಿರುವುದು ವಿಷಾದನೀಯ. ಈ ಸಂಬಂಧ ನೀರು ಬಳಕೆದಾರರ ಸಹಕಾರ ಸಂಘ, ವಿತರಣಾ ನಾಲಾ ವ್ಯಾಪ್ತಿಯಲ್ಲಿ ಒಕ್ಕೂಟ, ಅಣೆಕಟ್ಟೆ ವ್ಯಾಪ್ತಿಯಲ್ಲಿ ಯೋಜನಾ ಮಟ್ಟದ ಮಹಾ ಮಂಡಳ, ರಾಜ್ಯ ಮಟ್ಟದಲ್ಲಿ ಶೃಂಗ ಮಹಾ ಮಂಡಳಗಳು ರಚನೆಯಾಗಬೇಕಾಗಿರುವುದು ಜರೂರಾಗಿದೆ ಎಂದರು.
ವಿಕೇಂದ್ರಿತ ಸಂಘಗಳ ಕಾರ್ಯಚಟುವಟಿಕೆಗಳು ಪ್ರಸಕ್ತ ಹೆಚ್ಚು ಪರಿಣಾಮಕಾರಿಯಾಗಿ ಜರುಗಬೇಕಾದರೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷದ ಕಾಳಜಿಯನ್ನು ವಹಿಸಬೇಕಾಗಿದೆ. ಯೋಜನೆಗಿಂತ ಮುನ್ನ 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯಿದೆಯನ್ನು ತಿದ್ದುಪಡಿ ತಂದು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಬಲವರ್ಧನೆಗೆ ಸಹಕಾರಿಯಾಗಿದ್ದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ ಎಂದರು.
ಟಿ.ಎಂ.ವಿಜಯಭಾಸ್ಕರ್ ವರದಿ ಅನುಷ್ಠಾನಗೊಳಿಸಿ : ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 6ನೇ ವರದಿಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನೀರು ಬಳಕೆದಾರರ ಸಹಕಾರ ಸಂಘಗಳು ರಾಜ್ಯದಲ್ಲಿ ಸಮರ್ಪಕ ವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.
ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡುವ ಅಗತ್ಯವಿದ್ದು, ಸಹ ಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಿ ಆ ಮೂಲಕ ರೈತರಲ್ಲಿ ನೀರು ನಿರ್ವಹಣೆ, ನೀರಿನ ಮಿತ ಬಳಕೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯೊಡನೆ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕ ಎಂದು ತಿಳಿಸಿದರು.
ಪ್ರಮುಖ ಒತ್ತಾಯಗಳು:
ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ವಿತರಿಸುವಾಗ ನೀರು ಬಳಕೆದಾರರ ಸಹಕಾರ ಸಂಘಗಳಿಂದ ಬೇ ಬಾಕಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸುವುದು, ಕೇಂದ್ರ ಸರ್ಕಾರದ ಧನ ಸಹಾಯದ ಕಾರ್ಯಕ್ರಮದಲ್ಲಿ ನೀರು ಬಳಕೆದಾರರ ಸಂಘಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ ಕಾರ್ಯಾಧನವನ್ನು 1 ಲಕ್ಷದಿಂದ 5 ಲಕ್ಷದವರೆಗೆ ನೀಡುವಂತೆ ಆದೇಶಿಸುವುದು. ನಿಗಮಗಳಲ್ಲಿ ಹೊಲಗಾಲುವೆಗಳ ನಿರ್ವಹಣೆ ಜವಾಬ್ದಾರಿಯನ್ನು 5 ಲಕ್ಷಗಳವರೆಗೆ ಸಂಘಗಳಿಗೆ ನೀಡಿ ಬಲವರ್ಧನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2023-24 ತೀವ್ರತರ ಬರಗಾಲ ಬಂದಿರುವುದರಿಂದ ಸಂಗ್ರಹಿಸುವ ನೀರಿನ ತೆರಿಗೆಯನ್ನು ಮನ್ನಾ ಮಾಡಬೇಕು. ವಿ.ಸಿ. ನಾಲಾ ಆಧುನೀಕರಣ ಕಾಮಗಾರಿಯನ್ನು ನಿಲ್ಲಿಸಿ, ಪ್ರಸಕ್ತ ಮುಂಗಾರಿನಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.
ಮಹಾ ಮಂಡಳಗಳಿಗೆ ಷೇರುಧನವಾಗಿ 1 ಕೋಟಿ ರೂ.ಗಳನ್ನು ಸರ್ಕಾರ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವಿವಿಧ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳಾದ ಸೋಮಶೇಖರ್, ಕೆ.ಎಸ್.ರವಿ, ಚನ್ನಪ್ಪ, ಎಂ.ವಿ.ಸುರೇಶ್ ಮಹೇಶ್ ಇತರರಿದ್ದರು.