ಮಂಡ್ಯ : ಮೇ ೨೦. ಪ್ರಜ್ವಲ್ ರೇವಣ್ಣ ಅವರ ಡಿಪ್ಲೋಮೆಟಿಕ್ ಪಾಸ್ಪೋರ್ಟ್ ರದ್ದುಪಡಿಸಿ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮೇ 30ರಂದು ಹಾಸನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ತಿಳಿಸಿದರು .
ವರ್ಗಾವಣೆ, ಬಡ್ತಿ ಸೇರಿದಂತೆ ಇನ್ನಿತರ ವಿಚಾರವಾಗಿ ಸಹಾಯ ಬಯಸಿ ಹೋದ ಹೆಣ್ಣನ್ನು ಸಂಸದ ಪ್ರಜ್ವಲ್ ರೇವಣ್ಣ ಈ ರೀತಿ ಬಳಸಿಕೊಂಡಿರುವುದು ಖಂಡನನಯ ಎಂದರು .
ಇಂತಹ ಘಟನೆಗಳು ನಡೆದಾಗ ಜನಪ್ರತಿನಿಧಿಗಳ ಹತ್ತಿರ ಮಾತನಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ರಾಜಕಾರಣ ಮಾಡುತ್ತಿದ್ದು ,ತಪ್ಪಿತಸ್ಥರಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೋರಾಡಬೇಕು ಎಂದರು.
ಎಸ್ಐಟಿ ರಚನೆಯಾದ ನಂತರ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ಪರಾರಿಯಾಗಿದ್ದಾರೆ. ಈ ವಿಚಾರ ಕೇಂದ್ರ ಸರ್ಕಾರ ,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ,ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಗೊತ್ತಿದೆ.ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಸ್ನೇಹ ವಿಚಾರದಲ್ಲಿ ಬಿಜೆಪಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದೆ. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣರ ಮೂಲ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ .ದೇವೇಗೌಡರು ಈ ವಿಚಾರ ನನಗೆ ನೋವು ತಂದಿದೆ ಎನ್ನುತ್ತಿದ್ದು ,ಆದರೆ ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಈಗ ನಡೆದಿರುವ ಘಟನೆ ಹೆಣ್ಣಿನ ಘನತೆ ವಿಚಾರವಾಗಿದೆ. ರಾಜಕೀಯ ಪಕ್ಷಗಳು ಈ ಹಿನ್ನೆಲೆಯಲ್ಲಿ ರಾಜಕೀಯವನ್ನು ಬದಿಗಿಟ್ಟು ಹೆಣ್ಣಿನ ಘನತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಸಿಐಟಿಯು ವತಿಯಿಂದ ಮೇ 30ರಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದುಪಡಿಸಿ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಾಸನ ಚಲೋ ನಡೆಸಲಾಗುತ್ತಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂಎಂ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ, ಜಿಲ್ಲಾ ಖಜಾಂಚಿ ಮಹದೇವಮ್ಮ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಉಪಸ್ಥಿತರಿದ್ದರು.