ಅಮ್ನಿ ಮೇಲೆ ಮರಬಿದ್ದು ಯುವಕ ಸಾವು
ಮಂಡ್ಯ: ಮೇ.೦೭.ಸೋಮವಾರ ತಡರಾತ್ರಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದ ವೇಳೆ ಮರವೊಂದು ಮಾರುತಿ ಆಮ್ನಿ ವಾಹನದ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನಗರದ ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ನಡೆದಿದೆ.
ಮಳೆ ಬೀಳುತ್ತಿದ್ದ ಕಾಲಕ್ಕೆ ತನ್ನ ಸ್ನೇಹಿತರ ಜತೆ ಆಮ್ನಿ ವಾಹನದಲ್ಲಿ ಕುಳಿತಿದ್ದ ಮಂಡ್ಯ ತಾಲೂಕಿನ ದುದ್ದಾ ಹೋಬಳಿಯ ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯ ಅವರ ಪುತ್ರ ಕಾರ್ತಿಕ್(೨೮) ಸಾವನ್ನಪ್ಪಿದ್ದು, ಇಬ್ಬರು ಸ್ನೇಹಿತರು ಪಾರಾಗಿದ್ದಾರೆ.
ಮಂಗಳವಾರ ಕಾರ್ತಿಕ್ ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಗೆಳೆಯರಾದ ಸುನಿಲ್ ಹಾಗೂ ಚೀರನಹಳ್ಳಿಯ ಮಂಜು ಅವರ ಜತೆ ಹೊಸಬಟ್ಟೆ ಖರೀದಿಸಿ ಆಮ್ನಿಯಲ್ಲಿ ಬರುತ್ತಿದ್ದಾಗ ಬಿರುಗಾಳಿಗೆ ಮರಬಿದ್ದು ಈ ದುರಂತ ಸಂಭವಿಸಿದೆ.
ಸೋಮವಾರ ತಡರಾತ್ರಿ ಮಳೆಗಿಂತ ಬಿರುಗಾಳಿಯೇ ಹೆಚ್ಚಾಗಿ ಬೀಸಿದ್ದು, ನಗರದ ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದು, ರಸ್ತೆ ಸಂಚಾರಕ್ಕೆ ತೀವ್ರ ವ್ಯತ್ಯಯವಾಗಿದೆ. ಅಲ್ಲದೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನಗರದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಬೆಳೆಸಿರುವ ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೊಂಬೆಗಳನ್ನು ಕಡಿದು ಹಾಕುತ್ತಿಲ್ಲ. ಇದರಿಂದ ಗಾಳಿಗೆ ಮುರಿದು ಬೀಳುತ್ತಿವೆ ಎಂದು ನಾಗರಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕರಿಂದ ಪರಿಹಾರ ಘೋಷಣೆ:ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಮೃತ ಕುಟುಂಬಕ್ಕೆ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದು.ರಾಜ್ಯ ಸರಕಾರದಿಂದ ಐದು ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ
–