ಮಂಡ್ಯ : ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಎಂ ಎಸ್ ರಘುನಂದನ್ ಆಗ್ರಹ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಿಂದಿನ ಸರ್ಕಾರ ರೈತರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ಪ್ರತಿ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು .ಆದರೆ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೊಡೆತ ಬೀಳುವ ಹಾಗೆ ನಿರ್ಧಾರ ಕೈಗೊಂಡಿದೆ ಎಂದು ದೂರಿದರು. ಹಾಲು ಉತ್ಪಾದಕರಿಗೆ ಸರಿಯಾದ ಸಮಯದಲ್ಲಿ ಪ್ರೋತ್ಸಾಹ ಧನ ನೀಡುತ್ತಿಲ್ಲ. ರಾಜ್ಯದಲ್ಲಿ 600 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಬೇಕಿದ್ದು ಇದರಲ್ಲಿ ಮಂಡ್ಯ ಜಿಲ್ಲೆಗೆ 67 ಕೋಟಿ ರೂಪಾಯಿ ಕೊಡಬೇಕಾಗಿದೆ. ಆದ್ದರಿಂದ ತಕ್ಷಣವೇ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ದಿನವನ್ನು ವಿತರಿಸಬೇಕು ಎಂದು ಆ ಗ್ರಹ ಪಡಿಸಿದರು .
ಮಂಡ್ಯ ಜಿಲ್ಲೆಯಲ್ಲಿರುವ ಸಹಕಾರ ಇಲಾಖೆ ಅಧಿಕಾರಿಗಳು ಮಂಡ್ಯ ಉಪ ವಿಭಾಗ ಹಾಗೂ ಪಾಂಡವಪುರ ವಿಭಾಗದ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾಪಕ್ಷದ ಆಡಳಿತವಿರುವ ಸಹಕಾರ ಸಂಘಗಳಲ್ಲಿ ಮನಸ್ಸು ಇಚ್ಛೆ ಬಂದ ಹಾಗೆ ನಿರ್ದೇಶಕರನ್ನು ವಜಾ ಮಾಡಲಾಗುತ್ತಿದೆ ಎಂದು ಆರೋಪಿಸಿದರು .
ಸಹಕಾರ ಸಂಘಗಳನ್ನು ವಜಾ ಮಾಡುವುದರ ಮುಖಾಂತರ ಕಾಂಗ್ರೆಸ್ನ ಕೈಗೊಂಬೆಗಳಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇದು ಸಹಕಾರ ತತ್ವ ನಿಯಮಗಳು ಮತ್ತು ಕಾಯಿದೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದರು .
ಇದೇ ರೀತಿ ಸಂಘಗಳನ್ನು ನಿರ್ದೇಶಕರನ್ನು ವಜಾ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಸಹಕಾರ ಇಲಾಖೆಯಲ್ಲಿ ಅನವಶ್ಯಕ ರಾಜ್ಯ ಸರ್ಕಾರದ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗಿ ಸಹಕಾರ ಸಂಘಗಳ ಇಲ್ಲದಂತಾಗುತ್ತದೆ .ಆದ್ದರಿಂದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು .
ಡಿ ಆರ್ ಮತ್ತು ಎ ಆರ್ ರಾಜಕೀಯ ಪ್ರೇರಿತವಾಗಿ ಕಾನೂನು ತತ್ವ ಸಿದ್ಧಾಂತ ಪಾಲಿಸದೆ ಜೆಡಿಎಸ್ ಮತ್ತು ಬಿಜೆಪಿ ನಿರ್ದೇಶಕರು ಇರುವ ಸಂಗವನ್ನು ವಜಾ ಮಾಡುತ್ತಿದ್ದಾರೆ. ರಾಮಚಂದ್ರು ,ರೂಪ ಸೇರಿದಂತೆ ಇತರರನ್ನು ವಜಾ ಮಾಡಿದ್ದು ಆದರೆ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು. ಕಾಳೇಗೌಡ ಅವರು ಮಾತನಾಡಿ ಹಿಂದಿನ ಆಡಳಿತ ಮಂಡಳಿಯ ವೈಫಲ್ಯವನ್ನು ಮುಚ್ಚಿಡಲಾಗುತ್ತಿದೆ. ನಮ್ಮ ಕೆಲಸಗಳನ್ನು ಮಾಡಿಕೊಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ .ಆದರೆ ಚುನಾವಣೆ ವಿಚಾರದಲ್ಲಿ ಮಾತ್ರ ನಮ್ಮನ್ನು ಗುರಿಯಾಗಿಟ್ಟುಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು .
ಗೋಷ್ಟಿಯಲ್ಲಿ ರಾಮಚಂದ್ರ ,ರೂಪ ,ನೆಲ್ಲಿಗೆರೆ ಬಾಲು ,ವಸಂತ್ ಕುಮಾರ್ ಉಪಸ್ಥಿತರಿದ್ದರು.