ಮನ್ಮುಲ್ ನಿರ್ದೇಶಕಿ ರೂಪಾಗೆ ನೊಟೀಸ್ ಜಾರಿ ಖಂಡಿಸಿ ಧರಣಿ
ಮಂಡ್ಯ, ಜೂ.೧೧: ಕಾಂಗ್ರೆಸ್ ನಾಯಕರ ಷಡ್ಯಂತ್ರದಿಂದ ಮಂಡ್ಯ ಹಾಲು ಒಕ್ಕೂಟ(ಮನ್ಮುಲ್)ದ ನಿರ್ದೇಶಕಿ ರೂಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮುಂದಾಗಿದ್ದಾರೆ ಎಂದು ಆರೋಪಿಸಿ ನಿಬಂಧಕರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಮದ್ದೂರು ತಾಲೂಕಿನಿಂದ ಆಯ್ಕೆಯಾಗಿರುವ ರೂಪ ಅವರಿಗೆ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡಲಾಗುತ್ತಿದೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಷಡ್ಯಂತ್ರ ರೂಪಿಸಿ ರೂಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ರೂಪ ಅವರ ಪ್ರಕರಣಕ್ಕೆ ಸಂಬಂದಿಸಿದಂತೆ ಸರ್ವೋಚ್ಛ ನ್ಯಾಯಾಲಯದ ತಡೆಯಾಜ್ಞೆ ಇದೆ. ಈ ಕುರಿತು ರೂಪಾ ಅವರು ವಕಾಲತ್ತು ಅರ್ಜಿ ಸಲ್ಲಿಸಲು ವಕೀಲರೊಂದಿಗೆ ಹೋದಾಗಲೂ ಸಹಾಯಕ ನಿಬಂಧಕರು ವಕಾಲತ್ತು ದಾಖಲಿಸಿಕೊಳ್ಳದೆ ತಿರಸ್ಕರಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸದೆ ಏಕಾಏಕಿ ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ನೊಟೀಸ್ ನೀಡುವ ಮೂಲಕ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಅವರು ದೂರಿದರು.
ರೂಪಾ ಅವರಿಗೆ ನೀಡಿರುವ ನೊಟೀಸ್ ವಾಪಸ್ಸು ಪಡೆದು ತಕ್ಷಣ ಅವರಿಂದ ವಕಾಲತ್ತು ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು. ಸಹಾಯಕ ರಿಜಿಸ್ಟಾರ್ ಅನಿತಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು.
—