Tuesday, October 15, 2024
spot_img

ಸಿಲ್ಕ್ ಸ್ಮಿತಾ ಎಂಬ ಪೂರ್ತಿ ಸತ್ಯದ ಹುಡುಗಿ ಕುರಿತು

ಇವಳು ಅರ್ಧಸತ್ಯದ ಹುಡುಗಿಯಲ್ಲ, ಪೂರ್ತಿ ಸತ್ಯದವಳು

ಅವಳಿಗೆ ಯಾವ ಶ್ರೀಮಂತ ಖಾನ್ದಾನಿನ ಹಿನ್ನೆಲೆಯಿಲ್ಲ , ಬಡವನೊಬ್ಬನ ಮಗಳು, ಗಂಡನನ್ನ ಬಿಟ್ಟು ಬಂದವಳು, ಹದಿಹರೆಯದ ವಯಸ್ಸಿನವಳು, ನೋಡಿದವರ ಕಣ್ಕುಕ್ಕುವಂತಾ ಸುಂದರಿ, ಅದರ ಜೊತೆಗೆ ನಿರ್ಭಿಡೆಯ ಸ್ವತಂತ್ರ ನಡವಳಿಕೆಯವಳು, ಸಿನಿಮಾ ತಾರೆಯಾಗಬೇಕೆಂಬ ಕನಸು ಬೇರೆ! ಆ ಕಾಲವಾದರೂ ಯಾವುದು? 80 ರ ದಶಕ, ಇಂತಹಾ ಹೆಣ್ಣಿನ ಭವಿಷ್ಯ ಏನಾಗಿರಬಹುದು ಎಂದು ಊಹಿಸಲು ಇಷ್ಟು ಮಾಹಿತಿ ಸಾಕಲ್ವಾ? ಹೌದು ನಿಮ್ಮ ಊಹೆ ಸರಿ ಇದೆ, ನೀವು ಈಗ ಯೋಚಿಸಿದಂತೇ ಆಗಿತ್ತು. ಪುರುಷ ಪ್ರಧಾನ ಸಿನಿಮಾ ಜಗತ್ತು ಆ ಹೆಣ್ಣನ್ನ ತನ್ನಿಚ್ಛೆಯಂತೆ ತಕಧಿಮಿ ಕುಣಿಸಿ 35 ನೇ ವಯಸ್ಸಿಗೇ ಅವಳ ಜೀವವನ್ನ ನೀಗಿ ನೀರು ಕುಡಿದಿತ್ತು. ಇದು ನನ್ನ ಕಾಲದ ಜನಪ್ರಿಯ ನಟಿಯೊಬ್ಬಳ ಬದುಕಿನ ಕಥೆ. ಅವಳೇ ಸಿಲ್ಕ್ ಸ್ಮಿತಾ.
ಈ ಹೆಸರು ಕೇಳಿದ ತಕ್ಷಣ ಅದೆಷ್ಟು ಗಂಡಸರ ಎದೆ ಜಲ್ಲೆಂದಿದೆಯೋ, ಮೈ ಜುಮ್ಮೆಂದಿದೆಯೋ! ಅಂಥಹಾ ಅದ್ಭುತವಾದ ಮೈಮಾಟವಿದ್ದ ಹೆಣ್ಣು ಆಕೆ. ಅವಳು ಕಾಮದೇವತೆ, ಸೆಕ್ಸ್ ಐಕಾನ್, ಕ್ಯಾಬರೆ ನರ್ತಕಿ, ಮಾದಕ ನಟಿ ಇವೆಲ್ಲಾ ಆಗಲೇ ಬೇಕಾದ ಅನಿವಾರ್ಯತೆಯನ್ನ ಸೃಷ್ಟಿಸಿದ್ದು ಈ ಸಿನಿಮಾ ಎಂಬ ಮಾಯಾಲೋಕ. ಆದರೆ ಸಿಲ್ಕ್ ಸ್ಮಿತಾ ಅಂದರೆ ಅದಷ್ಟೇ ಆಗಿರಲಿಲ್ಲ!

‘ವಿಜಯಲಕ್ಷ್ಮಿ ವಾಟಪಟ್ಲ’ ಎಂಬ ಮುಗ್ಧ
ಊರು ಬಿಟ್ಟು ಚನ್ನೈಗೆ ಬಂದ ನಂತರ ಅವಳ ಸುತ್ತ ಹುತ್ತ ಕಟ್ಟಿರುವ ಕತೆಗಳೆಲ್ಲಾ ಗಾಸಿಪ್ ಲೆಕ್ಕಾಚಾರದಲ್ಲಿ‌ ನಡೆದ ಊಹಾಪೋಹಗಳೇ ಹೊರತು ಬೇರೇನಲ್ಲ. ಹೀರೋ ಕೃಷ್ಣನೋ,ಬಾಬುವೋ ಮತ್ಯಾರೋ ಇವೆಲ್ಲಾ ಕಲ್ಪಿತ ಕ್ಯಾರೆಕ್ಟರ್ ಗಳೇ. ಹುಡುಕುತ್ತಾ ಹೋದರೆ ಸಿಗುವುದೆಲ್ಲಾ ಈ ತರ ಪ್ರೂವಾಗದ ಕಟ್ಟುಕತೆಗಳೇ.ಇದೇ ಸತ್ಯವೆನ್ನಲು ಯಾವ ಸಾಕ್ಷಿಯೂ ಇಲ್ಲ. ಹಾಗಂತ ಅವರು ಮಾಡಿದ ಮೋಸದ ಸಮರ್ಥನೆಯಲ್ಲ ಇದು. ಸಿಲ್ಕ್ ಗೆ ಹೀರೋ ಒಬ್ಬನಿಂದ ಅನ್ಯಾಯವಾಯಿತು ಎಂದು ಸುದ್ದಿಯನ್ನು ಹಬ್ಬಿಸುವುದೂ, ಅವಳ ವಿಷಯವನ್ನ ಎಳೆದು ತರುವುದೂ, ಆ ಯಾವುದೋ ಹೀರೋನನ್ನು ತುಳಿಯುವ ಉದ್ದೇಶಕ್ಕಾಗಿ ಇವಳ ಹೆಗಲ ಮೇಲೆ ಗನ್ನಿಟ್ಟು ಹೊಡೆದ‌ ಗುರಿಯಾಗಿತ್ತೇ ಹೊರತು‌ ಈಕೆಗೆ ನ್ಯಾಯ ಒದಗಿಸುವ ಉದ್ದೇಶದ್ದಂತೂ ಆಗಿರಲೇ ಇಲ್ಲ. ಸಿಲ್ಕ್ ಸ್ಮಿತಾ ರಿಪೀಟೆಡ್ ಆಗಿ ಬಳಕೆಯಾಗಿದ್ದು ಇಂತಹ ಸಿನಿಮಾ ರಾಜಕೀಯದ ದಾಳವಾಗಿಯೇ. ಎಂದೆಂದೂ ನ್ಯಾಯ ಸಿಗದ ಅನ್ಯಾಯ ಎಂಬುದು ಒಂದು ಇರುತ್ತಲ್ಲಾ ಅದಕ್ಕಿಂತಾ ಘೋರವಾದದ್ದು ಮತ್ತೊಂದಿಲ್ಲ.
ನಾನು ಈ ಲೇಖನ ಬರೆಯಲು ಕುಳಿತಾಗ, ಸಿಲ್ಕ್ ಸ್ಮಿತಾಳ ಬದುಕಿನ ಬಗ್ಗೆ ತಿಳಿಯಲು ಇತರೆ ಲೇಖನ, ಸಿನಿಮಾ ಆದಿಯಾಗಿ ಎಲ್ಲಿ ಹುಡುಕಿದರೂ ಓದಲು ಮಜವಾದ ವಿವರಗಳು ಸಿಕ್ಕವೇ ಹೊರತು, ಅವಳಿಗಾದ ಅನ್ಯಾಯಕ್ಕೆ ಉತ್ತರ ಸಿಗಲೇ ಇಲ್ಲ.
ಬಹುಮುಖ್ಯವಾಗಿ ನಾವಿವತ್ತು ಎರಡು ನೆಲೆಗಳಲ್ಲಿ ಸಿಲ್ಕ್ ಸ್ಮಿತಾಳನ್ನ ಗಮನಿಸಬೇಕಾಗಿದೆ.
ಪಾಯಿಂಟ್ ಒನ್ ; ಸಿಲ್ಕ್ ಸ್ಮಿತಾಳ ಮೇಲೆ ನಡೆದ ಅನಾಚಾರ, ದೌರ್ಜನ್ಯ, ಅತ್ಯಾಚಾರ, ಕಾಸ್ಟ್ ಕೌಚಿಂಗ್ ಇತ್ಯಾದಿಗಳು ಈಗಾಗಲೇ ಎಲ್ಲರಿಗೂ ಗೊತ್ತಿರುವಂತದ್ದೇ. ಅದನ್ನೇ ರಸವತ್ತಾಗಿ ನನ್ನ ಮೂಗಿನ ನೇರಕ್ಕೂ ನಾನಿಲ್ಲಿ ಬರೆಯಲು ಹೋಗುತ್ತಿಲ್ಲ. ಸಿಲ್ಕ್ ಸ್ಮಿತಾ ಎಂಬ ಪ್ರತಿಭಾವಂತ ನಟಿಯ ಸ್ಟ್ರಗಲ್ ತುಂಬಿದ ಬದುಕನ್ನ ಸರಿಯಾಗಿ ನೋಡುವ ನಿಟ್ಟಿನಲ್ಲಿ ಇದುವರೆಗಿನ ಯಾವ ಬರಹಗಳೂ ಬರಲಿಲ್ಲ ಎಂಬುದು ನನ್ನ ತಕರಾರು. ಈ ತಕರಾರಿಗೆ ಉತ್ತರವಾಗಿ, ಹಾಗಾದರೆ ಅವಳನ್ನ ಹೇಗೆ ನೋಡಬೇಕು? ಅವಳ ಮೇಲಾದ ದೌರ್ಜನ್ಯಕ್ಕೆ ನ್ಯಾಯ ಸಲ್ಲಬೇಕಾದ್ದು ಹೇಗೆ!
ಒಂದು ಆಂಬಿಷನ್ ಇಟ್ಟುಕೊಂಡು ತನ್ನ
ಊರು-ನೆಲೆ ತ್ಯಜಿಸಿ ಬರುವ, ಅಪರೂಪದ ಸೌಂದರ್ಯವನ್ನು ಹೊಂದಿದ ಹೆಣ್ಣೊಬ್ಬಳು ಅದನ್ನು ಸಾಧಿಸುವ ಹಾದಿಯಲ್ಲಿ ಹೊಂದುವ ಒತ್ತಡ ಮತ್ತು ಅವಳ ಮೇಲಾಗುವ ದೌರ್ಜನ್ಯಗಳು ಎಂತವು? ಮಹತ್ವಾಕಾಂಕ್ಷೆಯ ಹೆಣ್ಣೊಬ್ಬಳು ಸಾಮಾನ್ಯ ಬದುಕನ್ನ ಬದುಕಲು ಒಪ್ಪದೇ ತನ್ನ ಕನಸಿನಂತೆ, ಯೋಜನೆಯಂತೆ ಬದುಕಲು ಹೊರಟಾಗ ನಡೆಸಬೇಕಾದ ಹೋರಾಟ ಬಹಳ ಕಷ್ಟದ್ದು. ಗೆಲುವು ಆಕೆಗೆ ಸುಲಭವಾಗಿ ದಕ್ಕುವಂತದ್ದಲ್ಲ. ಹಳ್ಳಿಯ‌ ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿದ ಸಾಮಾನ್ಯ ಹೆಣ್ಣೊಬ್ಬಳು ಸಾಮಾನ್ಯ ಮಗಳಾಗೋ, ಸೊಸೆಯಾಗೋ ಇಲ್ಲವೋ ಹೆಂಡತಿಯಾಗೋ ಬದುಕಬೇಕು ಎಂಬ ಸೋ ಕಾಲ್ಡ್ ನಿಯಮವನ್ನ ಮುರಿದು, ಅದಕ್ಕೆ ವಿರುದ್ಧವಾದ ಸಿನಿಮಾ ಕ್ಷೇತ್ರವನ್ನ ತನ್ನ ಬೆಳವಣಿಗೆಯ ಅಥವಾ ಆಸಕ್ತಿಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಾಗ ಅವಳ ಮೇಲೆ ಮೊಟ್ಟಮೊದಲ ಮೂಲ ನೆಲೆಯ ದೌರ್ಜನ್ಯ ಹೆಗಲೇರುತ್ತದೆ. ಇದು ಮೊದಲು ಆಕೆಯ ಕಾಲಿಗೆ ಬೀಳುವ ಸರಪಳಿ. ಇದನ್ನೂ ಕಿತ್ತೆಸೆದು, ಯಾರ ಬೆಂಬಲವೂ ಇಲ್ಲದೆ, ಹೊರಬಂದು, ಚೆನ್ನೈ ನಂತ ನಗರದಲ್ಲಿ ಸಿಲ್ಕ್ ಸ್ಮಿತಾ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಎದುರಿಸಿದ ದೌರ್ಜನ್ಯದ ಇನ್ನೊಂದು ಮಗ್ಗುಲು ಬೇರೆಯ ತರಹವೇ ಇದೆ.
ಈಗಿನ ಕಾಲದ ಐಟಂ ಗರ್ಲ್ ಗಳ ಮನಸ್ಥಿತಿಯ‌ ಸಣ್ಣ ಎಳೆಯು ತಪ್ಪಿದರೂ, ಹೆಣ್ಣಿನ ಮೇಲಿನ ದೌರ್ಜನ್ಯ ಮತ್ತು ಫೆಮಿನಿಸಂಗೆ ಇರುವ ಹಕ್ಕು ಬಾದ್ಯತೆಗಳ ನಡುವೆ ಕ್ಲಾಶ್ ಆಗಿ ಮತ್ತೊಮ್ಮೆ ತೊಂದರೆ ಆಗುವುದು ಹೆಣ್ಣಿಗೇ. ‘ಮೈ ಬಾಡಿ ಮೈ ರೈಟ್’ ಇತ್ಯಾದಿ ಹೆಣ್ಣಿನ ವಿಚಾರದಲ್ಲಿ ಇರುವ ಈಗಿನ ತೀವ್ರಗಾಮಿ ದೋರಣೆಗಳು ಯಾವೂ ಇಲ್ಲದೇ ಬೆಳೆದವಳು ಸಿಲ್ಕ್ ಸ್ಮಿತಾ. ಆ ತರದ ಯಾವುದೇ ಹಕ್ಕನ್ನು ಘೋಷಿಸಿಕೊಳ್ಳದ ಕಾಲದವಳಾಗಿ, ಇವ್ಯಾವನ್ನೂ ಕ್ಲೈಮ್ ಮಾಡದೇ ಇಲ್ಲಿ ನಡೆಯುತ್ತಲೇ ಹೋಗುತ್ತಾಳೆ. ಇದರ ಹಿಂದೆ ಅವಳಿಗೆ ಬಹಳವೇ ಸಾಮಾಜಿಕ‌ ಒತ್ತಡವಿತ್ತು. ಆ ಒತ್ತಡ ಈ ಕಾಲದ ಐಟಂ ಸಾಂಗ್ ಮಾಡುವ ಹೆಣ್ಣು ಮಕ್ಕಳಿಗೆ ಇದ್ದದ್ದು ಕಡಿಮೆಯೇ. ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಮೇಲೆ‌ ಅಲ್ಲಿ ಹಳ್ಳಿ ಹುಡುಗಿ, ಸಿಟಿ ಹುಡುಗಿ ಇತ್ಯಾದಿ‌ ಯಾವ ರಿಯಾಯಿತಿಯನ್ನೂ ಆ ಕ್ಷೇತ್ರ ಕೊಡುವುದಿಲ್ಲ. ಅಲ್ಲಿನ ವ್ಯವಸ್ಥೆಗೆ ತಕ್ಕಂತೆ ಎಲ್ಲರೂ ಹೋಗಬೇಕಾಗುತ್ತದೆ. ಕೆಲವರು ಇದನ್ನ ಒಪ್ಪಿ ಇದೇ‌ ನಮ್ಮ‌ ವೃತ್ತಿ ಬದುಕಿನ ಮ್ಯಾಂಡೆಟರಿ ಎಂದುಕೊಂಡು ಮುಂದುವರೆಯುತ್ತಾರೆ, ಒಪ್ಪದೇ ತಿರುಗಿ ಬಿದ್ದವರ ಬದುಕೇ ಬೇರೆ ತೆರನಾಗುತ್ತದೆ.
ಎರಡನೆಯದಾಗಿ ಪಂಡರಿಬಾಯಿ, ಸರೋಜಿನಿ ದೇವಿ ತರದವರು ನಟಿಸುವ, ಗೌರವಯುತ ನಟಿಯರೆಂದು ಹೊಗಳಿಸಿಕೊಳ್ಳುವ ನಟಿಯರ ಸಿನಿಮಾಗಳಲ್ಲಿ ಒಬ್ಬ ಅನುರಾಧ, ಒಬ್ಬ ಸಿಲ್ಕ್ ಸ್ಮಿತಾ, ಇನ್ನೊಬ್ಬ ಡಿಸ್ಕೋಶಾಂತಿ ಯಂತ ನಟಿಯರು ಕುಣಿಯ ಬೇಕಾದ ಅವಶ್ಯಕತೆ ಯಾಕೆ ಬಿತ್ತು? ನಟಿಯರ ನಡುವೆ ಇವರು ಈ ತರದವರು, ಅವರು ಆ ತರದವರು ಎಂಬ ಒಡಕನ್ನು ತಂದದ್ದು ಯಾವಾಗ? ನಟಿ ನಟಿಯೇ ಅಲ್ಲವೇ?
ಜಾತಿ ವರ್ಗದ ಕಾರಣಕ್ಕೆ ಹೆಣ್ಣುಗಳ ನಡುವೆ ಮಡಿವಂತಿಕೆ ಯಾಕೆ ಬಂತು? ಒಂದು ವರ್ಗದ, ಒಂದು ಶೇಡಿನ ಪ್ರಿವಿಲೇಜ್ಡ್ ನಟೀ ಮಣಿಯರಿಗೆ ಈ ತರಹದ ಕಾಸ್ಟ್ ಕೌಚಿಂಗ್ ಸಮಸ್ಯೆಗಳು ಕಾಡುವುದೇ ಇಲ್ಲ, ಹಾಗಾದರೆ ಇವರಿಗೆ ಸಮಸ್ಯೆಗಳು ಇರಲಿಲ್ಲವೆ? ಅವರಿಗೆ ಆಯ್ಕೆಗಳು ಅಷ್ಟು ಸುಲಭವಾಗಿ ಸಿಕ್ಕಿಬಿಡುವುದು ಹೇಗೆ? ಅವರನ್ನ ಕಾಪಾಡಿದ ಶಕ್ತಿಗಳು ಯಾವುವು? ನೆಪೋಟಿಸಂನಿಂದ ಬಂದ ನಟಿಯರಿಗೆ ತಮಗೆ ಬೇಕಾದ ರಕ್ಷಣೆಗಳೆಲ್ಲಾ ಅದು ಹೇಗೆ ಸಿಕ್ಕಿಬಿಡುತ್ತವೆ! ಸುಮ್ಮನೇ ಒಮ್ಮೆ ಯೋಚಿಸಿ ನೋಡಿ, ಮಂಜುಳಾ ಕಲ್ಪನಾ ಇವರ ಕಾಲದಿಂದ ಮಾತ್ರ ಕಾಸ್ಟ್ ಕೌಚಿಂಗ್ ಶುರುವಾಯಿತಾ? ಹಾಗಾದರೆ ಕಲ್ಪನಾಳ‌ ಜೀವನದಲ್ಲಿ ನಡೆದದ್ದೇನು? ಮಂಜುಳಾ ಎಂಬ ನಟಿಯ ದುರಂತ ಸಾವು ಯಾಕಾಯ್ತು? ಮೀನಾ ಕುಮಾರಿ, ವಿಮಿ, ಪರ್ವೀನ್ ಬಾಬಿ, ಸ್ಮಿತಾ ಪಾಟೀಲ್, ದಿವ್ಯಾ ಭಾರತಿ, ಜಿಯಾ ಖಾನ್, ನಿವೇದಿತಾ ಇವರೆಲ್ಲಾ ತಮ್ಮ ಮುವತ್ತೈದನೇ ವಯಸ್ಸಿನ ಒಳಗೇ ದುರಂತ ಸಾವನ್ನ ಕಂಡ ನಟಿಯರು.ಇವರ ಬದುಕಿನ ಕತೆಗಳೆಲ್ಲಾ ಯಾಕೆ ಆ ತಿರುವಿನಲ್ಲಿ ಅಂತ್ಯವಾಗಿ ಹೋಗುತ್ತವೆ? ದುರಂತದ ಬದುಕನ್ನ ಬದುಕುತ್ತಿರುವ ಲೀಲಾವತಿಯ ಕತೆಯೇನು? ಸೊಲ್ಲೇ ಎತ್ತದಂತೆ ಉಡುಗಿಸಿದ ಸುಧಾರಾಣಿ, ಶೃತಿ, ಭವ್ಯಾಳ ಜೀವನದಲ್ಲಿ ನಡೆದದ್ದೇನು. ಇಂತಹಾ ಹೆಣ್ಣುಮಕ್ಕಳೇ ಬಲಿಪಶುವಾಗುವುದು ಯಾಕಾಗಿ? ಶೃತಿ ಹರಿಹರನ್ ಎತ್ತಿದ ಮೀ ಟೂ ಅಭಿಯಾನ ನಡೆದ ಮೇಲೆ ಏನಾಯ್ತು, ಏನೂ ಬದಲಾಗಲಿಲ್ಲ. ಅಲ್ಲಿ ಮುನ್ನೆಲೆಗೆ ಬಂದ ನಟನಿಗೆ ಏನಾದರೂ ಆಗುವ ಬದಲಾಗಿ ಹಲವು ಶೋಷಕರಿಗೆ, ಅವರ ನಡವಳಿಕೆಗೆ ಒಂದು ಕ್ಲೀನ್ ಚಿಟ್ ಸಿಕ್ಕಿತು ಅಷ್ಟೇ. ಮತ್ತೆ ಸಾಮಾನ್ಯರಲ್ಲಿ ಸಿನಿಮಾಕ್ಷೇತ್ರ ಇರುವುದೇ ಹೀಗೆ, ನಡೆಯುವುದೇ ಈ ತರ, ಹೀಗಿದ್ದರೇ ಮುಂದೆ ಬರಬಹುದೆಂಬ ಒಂದು ಗಟ್ಟಿ ಮೇನಿಯಾವನ್ನ ಹುಟ್ಟು ಹಾಕಿ, ಕೆಲ ಹೆಣ್ಣುಮಕ್ಕಳ ಬದುಕಿನ ಬಗ್ಗೆ ಹಲವು ಬಾಯಿಗಳು ಮಾತಾಡುವಂತಾಯ್ತು ಅಷ್ಟೇ. ಹೆಣ್ಣಿಗೇ ಇದು ಯಾಕಾಗುತ್ತೆ ಅನ್ನುವ ಪ್ರಶ್ನೆ ಬಂದರೆ ಹೌದು ಇಂಥವೆಲ್ಲಾ ಹೆಣ್ಣಿಗೇ ಆಗುವುದು. ಚಿತ್ರವೊಂದಕ್ಕೆ ಹೀರೋನೇ ಬೇಡ ಅನ್ನುವ ಮಟ್ಟಕ್ಕೆ ವರ್ಚಸ್ಸನ್ನು ಬೆಳೆಸಿಕೊಂಡ ಎಲ್ಲಾ ನಟಿಯರೂ ಭಾಷಾತೀತವಾಗಿ ಈ ಹಂತವನ್ನು ಹೊಕ್ಕವರೇ. ಇದುವರೆಗಿನ ಸಿನಿಮಾ ಜಗತ್ತಿನ ಎಲ್ಲಾ ನಟಿಯರೂ ಅರ್ಧ ಸತ್ಯದ ಹುಡುಗಿಯರೇ. ಆದರೆ ಸಿಲ್ಕ್ ಸ್ಮಿತಾ ಪೂರ್ತಿ ಸತ್ಯದವಳು.
ಓರ್ವ ಕ್ಯಾಬರೇ ಡ್ಯಾನ್ಸರಾಗಿದ್ದೂ ತನ್ನೊಳಗಿದ್ದ ನಟನಾ ಕೌಶಲ್ಯವನ್ನ, ತನ್ನ ಶಕ್ತಿಯನ್ನ, ಸಮರ್ಪಕವಾಗಿ ಬಳಸಿಕೊಂಡು, ಅದಕ್ಕಷ್ಟೇ ಗಟ್ಟಿಯಾಗಿ ನಿಲ್ಲದೆ ಹೋದರೆ ಆಗುವ ಪರಿಣಾಮಕ್ಕೆ ಸಿಲ್ಕ್ ಸ್ಮಿತಾಳೇ ಸಾಕ್ಷಿ. ಅವಳ ಗೆಸ್ಚರನ್ನ ‘ಫಿಕ್ಸ್‌ಡ್ ಫಾರ್ ಕ್ಯಾಬರೆ’ ಅಥವಾ ‘ಎ ಸರ್ಟಿಫೈಡ್ ಮೂವೀಸ್’ ಅಂತ ಸೀಮಿತವಾಗಿಸಿ, ಅವಳು ತಮ್ಮ ಚಿತ್ರಕ್ಕೆ ಇದೇ ತರ ಬೇಕೇ ಬೇಕು ಎನ್ನುವ ಹಂತಕ್ಕೆ ತರಲಾಗುತ್ತದೆ. ಅಲ್ಲಿಗೆ ಒಂದು ಶೃಂಗಾರ ಮತ್ತು ಕಾಮದ ನಡುವಿನ ವ್ಯಾಖ್ಯೆಯಲ್ಲಿ ಅವಳನ್ನು ನಿಲ್ಲಿಸಲಾಗುತ್ತದೆ. ಅಲ್ಲಿಂದಾಚೆಗೆ ಬಹುತೇಕ ಅವಳ ಮೈಮಾಟವನ್ನು ಹುಡುಕಿ ಬಂದ ಪಾತ್ರಗಳೇ ಹೆಚ್ಚು. ಅವಳ‌ ಲೀಲಾ ಜಾಲ ಅಭಿನಯ, ಕಣ್ಣೋಟ, ನಯ ನಾಜೂಕುತನವನ್ನು ಮಾತ್ರ ಚಿತ್ರರಂಗ ಗುರುತಿಸುತ್ತದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಚಿತ್ರ ಮಂದಿರಕ್ಕೆ ಬರುವಂತೆ ಮಾಡಿದ್ದೇ ಸಿಲ್ಕ್. ಆಕೆ ತೆರೆಯ ಮೇಲೆ ಬರುವಷ್ಟೂ ಹೊತ್ತು ಫಿಲಂ ನೋಡುತ್ತಿದ್ದ ಹುಡುಗರು ಆಮೇಲೆ ಲೊಚಗುಟ್ಟುತ್ತಾ ಆಚೆ ನಡೆಯತೊಡಗುತ್ತಾರೆ. ಅಂದಿನಿಂದ‌ ಪಿಚ್ಚರ್ ನಿರ್ಮಾಪಕರ ತಿಜೋರಿ ತುಂಬುವ ಲಕ್ಷ್ಮಿ ಯಾಗಿ ಸಿಲ್ಕ್ ಇನ್ ಸ್ಕ್ರೀನ್‌ ಆಗಿಬಿಡುತ್ತಾಳೆ. ತಮ್ಮ ಓಡದೇ ಉಳಿದ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾಳ ಸಾಂಗ್ ಒಂದನ್ನು ಹಾಕಿದರೆ ಸಾಕು ಅದು ಓಡಿಬಿಡುತ್ತದೆ ಎಂದು ನಿರ್ಮಾಪಕರು ಡಿಸೈಡ್ ಮಾಡುತ್ತಾರೆ. ಹಾಗೇ ಹಲವು ಚಿತ್ರಗಳು ಓಡಿದವೂ ಕೂಡ.
” ಅಲೈಗಳ್ ಓಯುವುದಿಲ್ಲೈ, ಲಾವಣ್ಯಮ್ (ಹಿಂದಿಯಲ್ಲಿ ‘ರೇಷ್ಮಾ ಕಿ ಜವಾನಿ’), ಮೂನ್ರಾಂ ಪಿರೈ (ಹಿಂದಿಯಲ್ಲಿ ‘ಸದ್ಮಾ’) ಇವೆಲ್ಲದರಲ್ಲಿ ಈಕೆಯನ್ನು ಟೈಪ್ ಕ್ಯಾಸ್ಟ್ ಮಾಡಿ ಲಾಭ ಮಾಡಿಕೊಂಡವರು ಪ್ರಸಿದ್ಧ ನಿರ್ದೇಶಕರು. ಸಿಲ್ಕ್ ಸ್ಮಿತಾಳ ಅಭಿನಯದ ಕೇವಲ ಒಂದೇ ಒಂದು ಹಾಡಿನ ಸೇರ್ಪಡೆಯಿಂದ ಅನೇಕ ವರ್ಷಗಳ ಕಾಲ ವ್ಯಾಪಾರವಿಲ್ಲದೆ ಕ್ಯಾನುಗಳಲ್ಲಿದ್ದ ಚಿತ್ರಗಳು ಮರುಜೀವ ಪಡೆದವು” ಎನ್ನುತ್ತಾರೆ ಚಲನಚಿತ್ರ ಇತಿಹಾಸಕಾರರಾದ ” ರಂಡಾರ್ ಗೈ”.
ಸಿಲ್ಕ್ ಸ್ಮಿತಾ ಅಪಾರ ಮಹತ್ವಾಕಾಂಕ್ಷೆಯ ಹುಡುಗಿಯಾಗಿದ್ದಳು. ಎಲ್ಲವೂ ಸರಿಯಾಗಿದ್ದರೆ ಈ ಚಲನಚಿತ್ರ ಜಗತ್ತು ಮೆಚ್ಚುಗೆಯಿಂದ ಕೊಂಡಾಡಬಹುದಾಗಿದ್ದ ಅದ್ಭುತ ನಟಿಯೊಬ್ಬಳು ಅವಳ ಒಳಗೆ ಅಡಗಿ ಕುಳಿತಿದ್ದಳು. ಆಕೆಗೆ ಯಾವ ಕೊರತೆಯಿತ್ತು ಹೇಳಿ, ರೂಪವಾ? ಮೈಮಾಟವಾ? ಅಭಿನಯ ಚತುರತೆಯಾ? ತನ್ನ ಆ ದೊಡ್ಡ ಬಟ್ಟಲುಗಣ್ಣುಗಳಲ್ಲೇ ನವರಸಗಳನ್ನೂ ಪ್ರೇಕ್ಷಕರೆದೆಗೆ ದಾಟಿಸಿಬಿಡುವ ತಾಕತ್ತಿತ್ತು ಅವಳಿಗೆ. ಚತುರ ನೃತ್ಯಗಾರ್ತಿ, ಸಿರಿಕಂಠದ ಹಾಡುಗಾರ್ತಿ,
ತುಂಬಾ ರೆಸ್ಪಾಸಿಬಲ್‌ ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿ, ಅತಿ ಕಡಿಮೆ ಶಿಕ್ಷಣದ ಹೊರತಾಗಿಯೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಲಿತಿದ್ದಳು. ಶೂಟಿಂಗ್ ಪ್ರಾರಂಭವಾಗುವ ಮೊದಲೇ ಚಲನಚಿತ್ರ ಸೆಟ್‌ಗಳಿಗೆ ಹಾಜರಾಗುವ ಟೈಮ್ ಸೆನ್ಸ್ ಚೆನ್ನಾಗಿತ್ತು. ಸಿನಿಮಾ ರಂಗ ಬಯಸುವ ಅಷ್ಟೂ ಕ್ವಾಲಿಟಿಗಳು ಅವಳಲ್ಲಿ ಮುಕ್ಕುರಿದು ಬಿದ್ದಿದ್ದವು. ಆದರೆ, ಹೌದು, ಆದರೆ ಮೈಮಾಟ ಪ್ರದರ್ಶನವನ್ನು ಬಿಟ್ಟು, ಅದಕ್ಕಿಂತ ಹೆಚ್ಚಿನ ಅವಕಾಶಗಳನ್ನು ಅವಳಿಗೆ ಯಾರೂ ಕೊಡುವುದೇ ಇಲ್ಲ. ಅವಳೊಬ್ಬ ಹೀರೋಯಿನ್ ಆಗದ ಶಾಪಗ್ರಸ್ತ ಅಪ್ಸರೆಯಾಗೇ ಉಳಿದು ಬಿಡುತ್ತಾಳೆ. ತನ್ನ ವಯೋಮಾನಕ್ಕೆ ತಕ್ಕಂತೆ, ಬೇಕಾದಂತ ಕ್ಯಾರೆಕ್ಟರ್ ಗಳನ್ನ ನಿಭಾಯಿಸುವ ಶಕ್ತಿ ಸಿಲ್ಕ್ ಸ್ಮಿತಾಳಿಗೆ ಇತರೇ ಹಲವು ನಟಿಯರಿಗೆ ಇದ್ದಷ್ಟೇ ಇತ್ತು. ಹೆಲನ್, ಅನುರಾಧಾ ಹಾಗೂ ಮತ್ತಿತರ ಕ್ಯಾಬರೆ ಡ್ಯಾನ್ಸರ್ ಗಳ ನಟನೆಯನ್ನು ಗಮನಿಸಿದರೆ ಇವರ್ಯಾರಿಗೂ ನನಗನಿಸಿದಂತೆ ಪೂರ್ಣ ಪ್ರಮಾಣವಾಗಿ ಒಂದು ಸಿನಿಮಾವನ್ನ ಕ್ಯಾರಿ ಮಾಡುವ, ಹೀರೋಯಿನ್ ಆಗುವ ಸಾಮರ್ಥ್ಯ ಇರಲೇ ಇಲ್ಲ. ಆದರೆ ಆ ಪ್ರತಿಭೆ ಸಿಲ್ಕ್ ಸ್ಮಿತಾಗಿತ್ತು. ಹೆಚ್ಚಿಗೆ ಬೇರೇನೂ ಬೇಡ,
“ತಲತ್ತು ಕೇಟ್ಕುತ್ತಮ್ಮಾ” ಎಂಬ ತಮಿಳು ಮೂವಿಯಲ್ಲಿ ಓರ್ವ ಡಾಕ್ಟರ್ ಪಾತ್ರದಲ್ಲಿ ಆಕೆಯ ಪ್ರಬುದ್ಧ ನಟನೆಯನ್ನ, ಕಣ್ಣಿನಲ್ಲೇ ಪ್ರೀತಿ, ಅಸೂಯೆ, ಕಕ್ಕುಲಾತಿಗಳನ್ನ ಹೊರಹಾಕುವುದನ್ನ ನೋಡಿ ಸಾಕು ನೀವು. ಅದೆಂತಹಾ ನಟನೆ ಅವಳದ್ದು. ಸದ್ಮಾ ಚಿತ್ರದಲ್ಲಿ ಶ್ರೀದೇವಿಯೇ ಮಂಕೆನಿಸುವಂತಾ ಗ್ರೇಸ್ ಸಿಲ್ಕ್ ಸ್ಮಿತಾಗಿತ್ತು. ಅನ್‌ಫಾರ್ಚುನೇಟ್ಲಿ ಅವಳ ಪೊಟೆನ್ಷಿಯಲ್ ಆಕ್ಟಿಂಗ್ ಪೋಟ್ರೇ ಆಗುವುದೇ ಬೇರೆ ತರಹ‌, ರೆಸ್ಟ್ರಿಕ್ಟಿವ್ ಸೊಸೈಟಿಯ ಕಣ್ಣೇ ಬೇರೆ ತರಹ. ಫ್ಯಾನ್ ಪ್ರಿಫರೆನ್ಸಿನ ಹೆಸರಿನಲ್ಲಿ ಈಕೆಗೆ ಒಳ್ಳೆಯ ಸ್ನೇಹಿತ ಎಂದು ಹೇಳಲಾಗುವ ರವಿಚಂದ್ರನ್ ‘ ಕೂಡ ‘ ಹಳ್ಳಿಮೇಷ್ಟ್ರು’ ಎಂಬ ಕನ್ನಡ ಚಿತ್ರದಲ್ಲಿ ಕೊಟ್ಟಿದ್ದೂ ಈ ತರಹದ ಪಾತ್ರವನ್ನೇ. ಆಕೆಯ ಬಾಡಿಲಾಂಗ್ವೇಜಿನ ಮುಂದೆ ನಟನೆ ಗೌಣವಾಗಿಬಿಡುತ್ತದೆ. ಬಿ ಸರೋಜಾದೇವಿ, ಜಯಲಲಿತಾ, ಇತ್ಯಾದಿ ನಟಿಯರ ನಟನೆ ಮತ್ತು ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ ಮತ್ತಿತರರ ನಟನೆಯ ನಡುವೆ ನನಗೆ ಅಂತಹಾ ವ್ಯತ್ಯಾಸವೇನು ಕಾಣುವುದಿಲ್ಲ. ನಟನೆ ಯಾವುದಾದರೂ ನಟನೆ ಅಷ್ಟೆ. ಸ್ಟ್ರಗಲಿಂಗ್ ಪೀರಿಯೆಡ್ ನ ದೃಷ್ಟಿಯಿಂದ ನೋಡಿದರೆ ಸಿಲ್ಕ್ ಸ್ಮಿತಾ ಇವರ ನಟನೆಗಿಂತ ಒಂದು ತೂಕ ಹೆಚ್ಚಾಗೇ ತೂಗುತ್ತಾಳೆ ಅನಿಸುತ್ತದೆ ನನಗೆ. ಓರ್ವ ವಿಲನ್ ನ ನಟನೆ ಹೀರೋನ ನಟೆನೆಗಿಂತ ಹೇಗೆ ಕಡಿಮೆ ಅಲ್ಲವೋ ಹಾಗೆ ಇವಳ ನಟನೆಗೂ ಅದರದೇ ಆದ ಗೌರವವಿದೆ. ಆ ಕಾಲದಲ್ಲೇ ಗ್ಲಾಮರ್ರನ್ನೂ ಮೀರಿ ಉಳಿದುಹೋಗುವ ಎಲ್ಲಾ ಹೀರೋಯಿನ್ ಗಳ ಸಾಲಿನಲ್ಲಿ ಇವಳಿಗೆ ಸೇರಲು ಆಗುವುದೇ ಇಲ್ಲ. ಅವಳ ಪರ್ಸನಲ್ ಆಯ್ಕೆ, ಆಸಕ್ತಿ, ಸೆಳೆತ ಇದೇ ಆಗಿತ್ತಾ ಅಥವಾ ಅನಿವಾರ್ಯವಾಗಿ ಹೊಂದಿಕೊಂಡಳಾ? ಕಡಿಮೆ ಬಟ್ಟೆ ಧರಿಸದೆಯೂ ಹಾಟ್ ಅನಿಸಿಬಿಡುವ, ಒಳ್ಳೆಯ ಕ್ಯಾರೆಕ್ಟರ್ರೇ ಆದರೂ ಅದರಲ್ಲಿ ಮಾದಕತೆ ಇಣುಕಿಬಿಡುವ ಅಥವಾ ಹಾಗೇ ಪ್ರೇಕ್ಷಕ ಗ್ರಹಿಸುವ ಹಂತಕ್ಕೆ ಹೋದ ಸಿಲ್ಕ್ ಅಲ್ಲಿಂದ ಹಿಂತಿರುಗಲು ಆಗಲೇ ಇಲ್ಲವೇನೋ ಎನಿಸುತ್ತದೆ. ಇದು ಬೇಕು, ಇದು ಬೇಡ ಎಂದು ಹೇಳುವ ಪರ್ಸನಲ್ ಸ್ಪೇಸ್ ಇಟ್ಟುಕೊಳ್ಳದೇ ಬೆಳ್ಳಿತೆರೆಯ ಬ್ರೂಟಲ್ ಎಕನಾಮಿಕ್ಸ್ ಮತ್ತು ಸೆಕ್ಷುಯಲ್ ಪಾಲಿಟಿಕ್ಸ್ ಎಂಬ ಇಕ್ಕಳದಲ್ಲಿ ಸಿಕ್ಕಿಕೊಂಡ ಹಲವು ನಟಿಯರ ಪ್ರತಿನಿಧಿಯೇ ಆಗಿದ್ದಾಳೆ ಸಿಲ್ಕ್ ಸ್ಮಿತಾ.
ಕ್ಯಾಸ್ಟ್ ಕೌಚಿಂಗಿಗೆ ಸಾಮಾನ್ಯರ ಊಹೆಗೂ ನಿಲುಕದ ಸಾಧ್ಯತೆಗಳಿವೆ.ಇವತ್ತಿನ‌ ಡೇಟಿಂಗ್ ಕಲ್ಚರ್ ನಲ್ಲಿ ಅದು ಈಗ ದೊಡ್ಡ ವಿಷಯವೇ ಅಲ್ಲ. ನೋರಾ ಫತೇ ಅಲೀ ಖಾನ್, ಮಲೈಕಾ ಅರೋರಾ, ರಾಗಿಣಿ ದ್ವಿವೇದಿ, ಸನ್ನಿ ಲಿಯೋನ್, ಜಾಕ್ವಲೀನ್ ಫರ್ನಾಂಡೀಸ್ ಇತ್ಯಾದಿ ನಟಿಯರನ್ನೆಲ್ಲಾ ಈ ಹೊತ್ತಿನ ನೆಲೆಯಲ್ಲಿ ನಿಂತು ನೋಡಿದರೆ, ಸಿಲ್ಕ್ ಳ ಕಾಲದಲ್ಲಿ ಬಹುದೊಡ್ಡ ವಿಷಯವಾಗಿದ್ದ ಕ್ಯಾಬರೆ ಡ್ರೆಸ್ ಆಗಲಿ, ಅಂಗಾಂಗ ಪ್ರದರ್ಶನವಾಗಲಿ, ಎರಾಟಿಕ್ ಬಾಡಿ ಲಾಂಗ್ವೇಜಿನ ನರ್ತನವಾಗಲಿ, ನಿರ್ದೇಶಕ ಇತ್ಯಾದಿಗಳ ಜೊತೆಗಿನ ಅಡ್ಜಸ್ಟ್‌ಮೆಂಟಾಗಲಿ ಇಂತಹಾ ಯಾವುದೇ ಅಂಶಗಳನ್ನು ಅದೊಂದು ಕಾಮನ್ ವಿಷಯವಾಗಿ ತೆಗೆದುಕೊಂಡು, ಯಶಸ್ಸಿನ ಹಾದಿಯಲ್ಲಿ ಸಲೀಸಾಗಿ ಹೆಜ್ಜೆ ಇಡುತ್ತಿದ್ದಾರೆ. ಅದು ಅವರವರದ್ದೇ ಪರ್ಸನಲ್ ಆಯ್ಕೆ. ಅವರಿಗೆ ಒತ್ತಡಗಳಿಲ್ಲ. ಅದನ್ನ ಅಗೌರವದಿಂದ ಕಾಣಬೇಕಾಗಿಲ್ಲ. ಗೌರವಿಸೋಣ. ಆದರೆ ಇಲ್ಲಿ ಮುಖ್ಯವಾಗೋದು ಇವರ ಆಯ್ಕೆಯ ಹಿಂದೆ ಇರುವ ಉದ್ದೇಶ ಯಾವ ತರದ್ದು ಎಂಬುದು ಮುಖ್ಯವಾಗುತ್ತದೆ. ಕೆರಿಯರ್ ಕಟ್ಟಿಕೊಳ್ಳುವ ಕಾರಣಕ್ಕಾಗೇ ವ್ಯಕ್ತಿಯನ್ನಾಗಲೀ ಮೌಲ್ಯಗಳನ್ನಾಗಲೀ ಬಳಸಿಕೊಳ್ಳುವುದನ್ನು ಒಪ್ಪಲಾಗುವುದಿಲ್ಲ. ಈ ನೆಲೆಯಲ್ಲಿ ಎಲ್ಲೂ ಸಿಲ್ಕ್ ಸ್ಮಿತಾ ನಿಲ್ಲುವುದೇ ಇಲ್ಲ.

2011 ರಲ್ಲಿ ದೌರ್ಜನ್ಯಕ್ಕೆ ಒಳಗಾದ ಸಿಲ್ಕ್ ಸ್ಮಿತಾಳನ್ನು ಕುರಿತು ಹೊರತಂದ ಚಿತ್ರಕ್ಕೆ ಅದರ ನಿರ್ದೇಶಕ ಡರ್ಟಿ ಪಿಚ್ಚರ್ ಎಂಬ ಡರ್ಟಿ ಹೆಸರಿಟ್ಟುಕೊಳ್ಳುತ್ತಾನೆ, ಆ ಚಿತ್ರದ ಒಂದು ಹಾಡು ಅದೆಷ್ಟು ಹಿಟ್ ಆಗಿಬಿಡುತ್ತದೆ ಎಂದರೆ ಸಿಲ್ಕ್ ಅಷ್ಟೇ ಫೇಮಸ್ ಆಗುವ ಆ ಚಿತ್ರದ ಹೀರೋಯಿನ್ ವಿದ್ಯಾ ಬಾಲನ್ ಗೇ ತಾನೆಲ್ಲಿ ತನ್ನ ನಿಜವಾದ ಐಡೆಂಟಿಟಿಯನ್ನ ಕಳೆದುಕೊಂಡು ಸಿಲ್ಕ್ ಸ್ಮಿತಾಳ ಹೆಸರಿಗೆ ಸ್ಟಿಕಾನ್ ಆಗಿಬಿಡುತ್ತೇನೋ ಎಂದು ಬೆಚ್ಚಿಬೀಳುವಂತಾಗುತ್ತದೆ. ಆ ರೀತಿ ಆ ಸಿನಿಮಾದಲ್ಲಿ ಇವಳ ಕ್ಯಾರೆಕ್ಟರನ್ನು ಪಿಚ್ಚರೈಸ್ ಮಾಡಲಾಗುತ್ತದೆ. ಸಿಲ್ಕ್ ಸ್ಮಿತಾಳ ನೋವು ವಿದ್ಯಾ ಬಾಲನ್ ಗೆ ಒಂದು ಗ್ರೇಟ್ ಕಮ್‌ಬ್ಯಾಕ್ ಕೊಡುತ್ತದೆ. ಒಬ್ಬ ವ್ಯಕ್ತಿಯ ಅದರಲ್ಲೂ ಹೆಣ್ಣೊಬ್ಬಳ ಬಯೋಪಿಕ್ ಮಾಡುವಾಗ ಬಹಳ ಸಂವೇದನೆಯ ಮನಸ್ಸು ಮೇಕಿಂಗ್ ಮಾಡುವವರಿಗೆ ಇರ ಬೇಕಾಗುತ್ತದೆ. ನಿರ್ದೇಶಕ ಮಿಲನ್ ಲೂಥ್ರಿಯಾ ಆಗಲಿ, ನಿರ್ಮಾಪಕಿ ಏಕ್ತಾ ಕಪೂರ್ ಆಗಲಿ, ಸ್ವತಃ ಫೆನಿನಿಸಮ್ ಬಗ್ಗೆ ಮಾತಾಡುವ ವಿದ್ಯಾ ಬಾಲನ್ ನಂತಹ ಸೂಕ್ಷ್ಮ ನಟಿಯಾಗಲಿ ಸ್ವಲ್ಪೇ ಸ್ವಲ್ಪ ಸೆನ್ಸಿಬಲ್ ಆಗಿ ಯೋಚಿಸಿದ್ದಿದ್ದರೆ ಸಿಲ್ಕ್ ಸ್ಮಿತಾಗೆ ಸ್ವಲ್ಪಮಟ್ಟಿಗಾದರೂ ನ್ಯಾಯ ದೊರಕುತ್ತಿತ್ತೇನೋ, ಆದರೆ ಅಲ್ಲಿ ಅದ್ಯಾವ ಲಕ್ಷಣವೂ ಕಾಣುವುದಿಲ್ಲ. ಅವಳ ಭಾವನೆಗಳಿಗೂ ಈ ಸಿನಿಮಾಕ್ಕೂ ಯಾವ ಸಂಬಂಧಗಳೂ ಇಲ್ಲ, ಸ್ಟಿಲ್ ಶೀ ಈಸ್ ಎ ಮಾರ್ಕೆಟ್‌ ಅನ್ನೋದನ್ನ ಈ ಸಿನಿಮಾ ಕೂಡ ಬಳಸಿಕೊಂಡಿತು ಅಷ್ಟೆ. ಆಕೆ ಸತ್ತದ್ದಕ್ಕೆ ಅಯ್ಯೋ ಪಾಪ ಹಿಂಗಾಗೋಯ್ತಲ್ಲ ಎನ್ನುವಂತಾಯ್ತು ಅಷ್ಟೆ. ಆಕೆಯ ವಿಷಯಗಳಿಗೆ ಅಯ್ಯೋ ಪಾಪ ಅಲ್ಲ ಬೇಕಾಗಿರುವುದು. ಮಾನವೀಯ ನೆಲೆಯಲ್ಲಿ ಯೋಚಿಸಬೇಕಾದ ಅಗತ್ಯವಿದೆ.
ಆಕೆಯ ಕುರಿತು ಮತ್ತೊಂದು ಬಯೋಪಿಕ್ ಬರುತ್ತದೆ ಎಂಬ ಮಾತಿದೆ. ಅಟ್‌ಲಾಸ್ಟ್.. ಒಟ್ಟು 16 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿ.. ಐದು ಭಾಷೆಗಳಲ್ಲಿ 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಸಿಲ್ಕ್‌ ಕುರಿತು ಅದ್ಯಾವ ತರದ್ದೇ ಚಿತ್ರ ತಯಾರಾದರೂ ಆ ಮೂವಿಯ ಸ್ಟೋರಿಯು ಅವಳ ಬದುಕಿನ ಅಂಶಗಳ ಕುರಿತು ಹೇಳಬಹುದು, ಆದರೆ ಅವಳ ಅಂತರಂಗದ ಅಳಲನ್ನು ತೋರಬಲ್ಲದೇ!

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!