ಕಾರಗೃಹ ಆರೋಪಿಗೆ ಆಸ್ಪತ್ರೆಯಲ್ಲಿ ಅನಧಿಕೃತ ಚಿಕಿತ್ಸೆ! ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಅಮಾನತ್ತಿಗೆ ಆಗ್ರಹ
ಮಂಡ್ಯ ಜಿಲ್ಲೆಯ
ಶ್ರೀರಂಗಪಟ್ಟಣದ ಭೂದಾಖಲೆಗಳ ಕಚೇರಿಯಲ್ಲಿ ನಡೆದಿದ್ದ ನಕಲಿ ದಾಖಲೆ, ನಕಲಿ ಸೀಲುಗಳ ಪ್ರ-ಕರಣದಲ್ಲಿ ಈಚೆಗೆ ಬಂಧಿಸಲಾಗಿದ್ದ ಪ್ರಮುಖ ಆರೋಪಿ ಎಡಿಎಲ್‌ಆರ್ ಮಹಮ್ಮದ್ ಹುಸೇನ್, ನ್ಯಾಯಾಧೀಶರ ಅನುಮತಿಯಿಲ್ಲದೆ ಕಾರಾಗೃಹದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬಂದು ಅನಧಿಕೃತವಾಗಿ ಚಿಕಿತ್ಸೆ ಪಡೆಯಲು ಸಹಕರಿಸಿದ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ ಶಿವಕುಮಾರ್ ರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.
ಈ ಸಂಬಂದ ವೈದ್ಯಕೀಯ ಶಿಕ್ಷಣ ಅಪರ ಕಾರ್ಯದರ್ಶಿ ಹಾಗೂ ವೈದ್ಯಕೀಯ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅವರು ಪತ್ರದಲ್ಲಿ.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರ ತಂಡ ಮಿಮ್ಸ್ ಆಸ್ಪತ್ರೆಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಮಹಮ್ಮದ್ ಹುಸೇನ್ ಮಿಮ್ಸ್ ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ
ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರನ್ನು ನ್ಯಾಯಾಧೀಶರು ವಿಚಾರಿಸಿದಾಗ, ‘ಆರೋಪಿ ಒತ್ತಾಯ-ಪೂರ್ವಕವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರುವುದಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಅವರನ್ನು ವಿಚಾರಿಸಿದಾಗ, ‘ಜೈಲಿನ ವೈದ್ಯಾಧಿಕಾರಿ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿಲ್ಲ. ಇನ್ನು ಮುಂದೆ ತಿಳಿಸುತ್ತೇವೆ. ಎಂದು ಉತ್ತರ ನೀಡಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಯನ್ನು ಅ.21ರಿಂದ ಇಲ್ಲಿಯವರೆಗೆ ದಾಖಲಿಸಿರುವುದು ಸ್ಪಷ್ಟ ಕಾನೂನಿನ ಉಲ್ಲಂಘನೆ ಎಂದು ನ್ಯಾಯಾಧೀಶರು ಕಿಡಿಕಾರಿದ್ದಾರೆ. ಈ ಬಗ್ಗೆ ಕಾರಾಗೃಹದ ಅಧೀಕ್ಷಕರು ಮತ್ತು ಮಿಮ್ಸ್ ಆಸ್ಪತ್ರೆಯ ಅಧೀಕ್ಷಕರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಯಾವುದೆ ಚಿಕಿತ್ಸೆ ಅಗತ್ಯ ಇಲ್ಲದಿದ್ದಾಗ ನಿಯಮಾನುಸಾರ ರೋಗಿಯನ್ನು ಬಿಡುಗಡೆಗೊಳಿಸಿ ಕಳುಹಿಸುವ ಬದಲು ಆರೋಪಿಯೊಂದಿಗೆ ಶಾಮೀಲಾಗಿ ಅನಧಿಕೃತವಾಗಿ ಆಸ್ಪತ್ರೆಯಲ್ಲೆ ಮುಂದುವರಿಸಿರುವ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಕ್ರಮ ನಿಯಮಬಾಹಿರ ಮಾತ್ರವಲ್ಲದೆ ನ್ಯಾಯಾಲಯಕ್ಕು ವಂಚಿಸುವ ಕ್ರಿಮಿನಲ್ ಪ್ರಯತ್ನದ ಭಾಗವಾಗಿದೆ.
ಈ ಮೂಲಕ ಕೆಟ್ಟ ನಡಾವಳಿಯೊಂದನ್ನು ಸೃಷಿಸಿದ್ದಾರೆ.ಇದಲ್ಲದೆ ಆರೋಪಿಗೆ ಪ್ರತ್ಯೇಕ ಕೋಣೆ ನೀಡಿ ಅಲ್ಲಿ ಆತನೊಂದಿಗೆ ಆಕೆಯ ಗೆಳತಿಯು ಇರಲು ಅವಕಾಶ ಕಲ್ಪಿಸಿ ಆಸ್ಪತ್ರೆಯನ್ನು ಲಾಡ್ಜ್ ಆಗಿ ಪರಿವರ್ತಿಸಿದ್ದಾರೆ.
ನಿಯಮಾನುಸಾರ ಆರೋಪಿಯೊಂದಿಗೆ ಪೋಲಿಸರ ಹೊರತು ಮತ್ತೊಬ್ಬರು ಖಾಸಗಿ ವ್ಯಕ್ತಿ ವಾಸ್ತವ್ಯ ಹೂಡಲು ಅವಕಾಶ ಇರುವುದಿಲ್ಲ.
ಈ ಪ್ರಕರಣದಲ್ಲಿ ಡಾ.ಶಿವಕುಮಾರ ಆರೋಪಿಗಳೊಂದಿಗೆ ಹಣ ಮತ್ತಿತರ ಅಮಿಷಕ್ಕೆ ಶಾಮೀಲಾಗಿ ನ್ಯಾಯಲಯಕ್ಕೆ ದಾರಿ ತಪ್ಪಿಸುವ ಕೃತ್ಯಕ್ಕೆ ಬೆಂಬಲವಾಗಿದ್ದಾರೆ.
ಶ್ರೀರಂಗಪಟ್ಟಣ ಎಡಿಎಲ್ ಆರ್ ಕಚೇರಿಯಲ್ಲಿ ನಕಲಿ ದಾಖಲೆಗಳ ಮೂಲಕ ನೂರಾರು ಎಕರೆ ಭೂಕಬಳಿಕೆಗೆ ಕಾರಣವಾದ ಆರೋಪಿತ ಅಧಿಕಾರಿಯನ್ನು ಲೋಕಾಯುಕ್ತ ಪೋಲಿಸರು ಸತತ ಎರಡು ತಿಂಗಳ ಕಾಲ ಬೆನ್ನಟ್ಟಿ ಬಂಧಿಸಿದ್ದು.ಅವರ ಪ್ರಯತ್ನವನ್ನು ವಿಫಲಗೊಳಿಸಿ ಜೈಲಿನ ಬದಲು ಆರೋಪಿಯನ್ನು ಆಸ್ಪತ್ರೆಯಲ್ಲಿ ಅಕ್ರಮವಾಗಿ
ಮುಂದುವರಿಸಿರುವ
ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ತನಿಖೆ ಎರ್ಪಡಿಸುವಂತೆ ಆಗ್ರಹಿಸಿದ್ದಾರೆ.
ನಾಗಣ್ಣಗೌಡ ದೂರಿನ ಹಿನ್ನೆಲೆಯಲ್ಲಿ ವೈದ್ಯಕೀಯ ನಿರ್ದೇಶನಾಲಯ ದೂರಿನ ಸಂಬಂದ ವಿವರವಾದ ವರದಿ ಸಲ್ಲಿಸುವಂತೆ ಮಿಮ್ಸ್ ನಿರ್ದೇಶಕರಿಗೆ ಆದೇಶಿಸಿದೆ.


