ಜನತೆಯ ಜತೆಗೆ ತಳಹಂತದಲ್ಲಿ ನಿಂತು ನಾಗರೀಕ ಸೇವೆಗಳನ್ನು ಒದಗಿಸುವ ಜವಾಬ್ದಾರಿಯುತ ಇಲಾಖೆಯಾದ ಪೌರಾಡಳಿತ ಸಚಿವರಾಗಿ ರಹೀಂ ಖಾನ್ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದಾರೆ. ಈ ನಿಮಿತ್ತ ಸಚಿವರೊಂದಿಗೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡರು ನಡೆಸಿದ ಸಂದರ್ಶನ ಇಲ್ಲಿದೆ.
ಇಲಾಖೆಯ ಆಡಳಿತದಲ್ಲಿ
ಕೆಎಂಎಸ್ ಅಧಿಕಾರಿಗಳಿಗೆ ಆದ್ಯತೆ
ಪೌರಾಡಳಿತ ಸಚಿವರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಕಳೆದಿದೆ. ಈ ಸಂಧರ್ಭದಲ್ಲಿ ಇಲಾಖೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇನು?
-ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಅಕ್ರಮ ಕಟ್ಟಡಗಳಿಗೆ ಬಿ ಖಾತೆ ನೀಡಲು ತೀರ್ಮಾನಿಸಿದ್ದೇವೆ. ಇದರಿಂದ ಕಟ್ಟಡದ ಮಾಲೀಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ಆದಾಯವು ಹೆಚ್ಚಲಿದೆ. ರಾಜ್ಯ ವ್ಯಾಪಿ ಬೀದಿ ದೀಪಗಳ ನಿರ್ವಹಣೆಗೆ ಸಿಸಿಎಂಎಸ್ ಜಾರಿಗೆ ತರಲಾಗುತ್ತಿದೆ. ಶೇ50 ರಷ್ಟು ಕೆಲಸ ಬಾಕೀ ಇದೆ ಇದು ಪ್ರಮುಖ ಸಾಧನೆಯಾಗಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಸಿಬ್ಬಂದಿಗಳು ಒಂದೇ ಸ್ಥಳೀಯ ಸಂಸ್ಥೆಯಲ್ಲಿ ಉಳಿದುಕೊಂಡಿದ್ದಾರೆ. ಇದರ ಪರಿಣಾಮ ಆಡಳಿತ ವ್ಯವಸ್ಥೆ ಕುಂಠಿತವಾಗಿದೆ ಎಂಬ ಅಭಿಪ್ರಾಯವಿದೆ?
-ಹೌದು ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಿ ಹತ್ತು ವರ್ಷಕ್ಕು ಹೆಚ್ಚು ಕಾಲ ಒಂದೇ ಮುನಿಸಿಪಾಲಿಟಿಗಳಲ್ಲಿ ಉಳಿದುಕೊಂಡಿರುವವರ ಕುರಿತು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ. (ಸಂದರ್ಶನದ ವೇಳೆಯಲ್ಲೆ ಸಚಿವರು ಈ ಕುರಿತು ತಮ್ಮ ಕಾರ್ಯದರ್ಶಿಗೆ ಕ್ರಮಕ್ಕೆ ಸೂಚಿಸಿದರು)
ಕೆಎಂಎಸ್ ಅಲ್ಲದ ಅಧಿಕಾರಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸುವುದರಿಂದ ಆಡಳಿತದಲ್ಲಿ ಉತ್ತರದಾಯಿತ್ವ ಇಲ್ಲವಾಗಿದೆ.ಇದರಿಂದ ಭ್ರಷ್ಟಚಾರಕ್ಕೂ
ದಾರಿಯಾಗುತ್ತಿದೆ ಎಂಬ ಮಾತಿದೆ?
-ಹೌದು ಇದು ನಿಜ. ಈಗ ನಮ್ಮ ಪೌರಾಡಳಿತ ಇಲಾಖೆಯಲ್ಲಿ ಕೆಎಂಎಸ್ ಅಧಿಕಾರಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದಲ್ಲದೆ ಬಡ್ತಿ ಪಡೆದ ಅಧಿಕಾರಿಗಳನ್ನೆ ಸ್ಥಳೀಯ ಆಡಳಿತದಲ್ಲಿ ನಿಯೋಜಿಸಲಾಗುವುದು. ಹಂತಹAತವಾಗಿ ಕೆಎಂಎಸ್ ಅಲ್ಲದ ಅಧಿಕಾರಿಗಳನ್ನು ಅವರ ಮಾತೃ ಸಂಸ್ಥೆಗೆ ಹಿಂತಿರುಗಿಸಲಾಗುವುದು
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯ ಸಿಬ್ಬಂದಿ ಕೊರತೆಯಿದೆ.
ಅನುಕಂಪದ ಮೇಲೆ ನೇಮಕಗೊಂಡ ಪೌರಕಾರ್ಮಿಕರನ್ನು ಹೊರತುಪಡಿಸಿ ಕಚೇರಿ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಇಲ್ಲ. ಇದರ ಪರಿಣಾಮ ನಾಗರೀಕರ ಮೇಲಾಗುತ್ತಿದೆಯಲ್ಲವೆ?
-ಕಚೇರಿ ನಿರ್ವಹಣೆಗೆ ಬೇಕಾಗಿರುವ ಅಗತ್ಯ ಸಿಬ್ಬಂದಿ ನೇಮಕಾತಿಗೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ.ಕೆಪಿಎಸ್ಸಿ ಮೂಲಕ ಕಂದಾಯಾಧಿಕಾರಿಗಳು ಸೇರಿದಂತೆ ಎರಡು ನೂರು ಮಂದಿ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೆ ನಡೆಯಲಿದೆ.
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಕಟ್ಟಡಗಳ ನಿರ್ಮಾಣದಲ್ಲಿ ನಕ್ಷೆ ಉಲ್ಲಂಘನೆ. ಕಂದಾಯ ನಿಗದಿಯಲ್ಲಿ ಲೋಪ ಸೇರಿದಂತೆ ಸಾಕಷ್ಟು ಅಕ್ರಮಗಳು ನಿರಂತರವಾಗಿವೆ. ಈ ಕುರಿತು ತಪ್ಪಿತಸ್ಥ ಅಧಿಕಾರಿ ನೌಕರರ ವಿರುದ್ದ ಡಿಎಂಎ ಹಂತದಲ್ಲಿ ಸಕಾಲಕ್ಕೆ ಕ್ರಮ ಜರುಗುತ್ತಿಲ್ಲವೆಂಬ ಆರೋಪವಿದೆಯಲ್ಲ?
-ಈ ಕುರಿತು ಕೂಡಲೇ ಗಮನಹರಿಸುತ್ತೇನೆ. ಲೋಪ ಎಸಗಿದ ಅಧಿಕಾರಿ ನೌಕರರ ಮೇಲೆ ಶಿಸ್ತು ಕ್ರಮಕ್ಕೆ ಸೂಚನೆÀಲಾಗುವುದು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕೌನ್ಸಿಲರ್ ಗಳಿಗೆ ಸೂಕ್ತ ಅಧಿಕಾರ ಸಿಗುತ್ತಿಲ್ಲ. ಪಂಚಾಯತ್ ರಾಜ್ ಕಾಯ್ದೆಯ ಆಶಯಗಳು ಈಡೇರಬೇಕಲ್ಲವೆ. ರಾಜ್ಯ ಸರಕಾರ ಈ ವಿಷಯದಲ್ಲಿ ನಿರ್ಲಕ್ಷ ತೋರುತ್ತಿದೆಯಲ್ಲವೆ?
-ನಿರ್ಲಕ್ಷದ ಮಾತೇ ಇಲ್ಲ. ಮೊದಲಿಗೆ ಮೀಸಲಾತಿಯ ವಿಷಯವನ್ನು ಕೋರ್ಟಿಗೆ ಒಯ್ದು ಈಗ ಕಗ್ಗಂಟಾಗಿಸಲಾಗಿದೆ. ಈ ಕುರಿತು ಅಡ್ವೋಕೇಟ್ ಜನರಲ್ ರೊಂದಿಗೆ ಚರ್ಚಿಸಿ ಅಗತ್ಯ ಕಾನೂನು ಸಮರ ನಡೆಸಿ ಪುರಪಿತೃಗಳಿಗೆ ಅಧಿಕಾರ ಚಲಾವಣೆಗೆ ಅವಕಾಶ ಮಾಡಿಕೊಡುತ್ತೇವೆ
ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡುವ ಸಂಬAಧ ಸ್ಪಷ್ಟವಾದ ಆದೇಶವಿಲ್ಲದೆ ಸಾಕಷ್ಟು ಗೊಂದಲಗಳಾಗಿ ಭತ್ಯೆ ನೀಡಿಲ್ಲ. ಈ ಕುರಿತು ಸ್ಪಷ್ಟ ಆದೇಶ ನೀಡಬಹುದಲ್ಲವೆ?
-ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ತೀರ್ಮಾನ ಕೈಗೊಳ್ಳುತ್ತೇನೆ. ಸಂಕಷ್ಟ ಭತ್ಯೆ ತ್ವರಿತವಾಗಿ ನೀಡುವ ಕೆಲಸ ಆಗಲೇಬೇಕು. ಇಲ್ಲವಾದರೆ ಕಾರ್ಮಿಕರಿಗೆ ಕಷ್ಟವಾಗುತ್ತದೆ ಎಂಬ ಅರಿವಿದೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಹೊರಗುತ್ತಿಗೆ ನೌಕರರ ನೇರಪಾವತಿ ಎಲ್ಲಿಗೆ ಬಂತು?
-ಹೊರಗುತ್ತಿಗೆ ನೌಕರರ ಆಗ್ರಹ ಜೋರಾಗಿದೆ. ಮತ್ತು ಅವರ ದುಡಿಮೆಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಈಗಾಗಲೇ ಎರಡು ಬಾರಿ ಈ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂದ ನಗರಾಭಿವೃದ್ಧಿ ಸಚಿವರೊಡಗೂಡಿ ಮುಖ್ಯಮಂತ್ರಿಗಳನ್ನು ಒಪ್ಪಿಸಿ ನೇರಪಾವತಿ ಜಾರಿಗೆ ಕ್ರಮವಹಿಸುತ್ತೇನೆ.
ವಿವಿಧ ಇಲಾಖೆಗಳ ಸ್ವಚ್ಚತೆಗೂ ಪೌರಕಾರ್ಮಿಕರನ್ನು ಅನೇಕ ಕಡೆಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ನಗರದ ಸ್ವಚ್ಚತೆ ಮೇಲೆ ಪೆಟ್ಟು ಬೀಳುತ್ತಿದೆ ಅನಿಸುತ್ತಿಲ್ಲವೆ?
-ಸರಕಾರಿ ಕಚೇರಿ ಇರಲಿ, ಜಿಲ್ಲಾಧಿಕಾರಿ ಮನೆಗೂ ಸಹ ನಗರಸಭೆಯ ಪೌರಕಾರ್ಮಿಕರನ್ನು ಬಳಸುವಂತಿಲ್ಲ. ಈಗಾಗಲೇ ಈ ಕುರಿತು ಆದೇಶ ಮಾಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಪೌರಕಾರ್ಮಿಕರಿಗೆ ಹೆಚ್ಚುವರಿಯಾಗಿ ಯಾವುದೇ ಕೆಲಸಗಳನ್ನು ಹೇರಿಕೆ ಮಾಡುವುದನ್ನು ನಾನು ವೈಯುಕ್ತಿಕವಾಗಿಯೂ ವಿರೋಧಿಸುತ್ತೇನೆ.