ನಾಡಿನ ಶಿಕ್ಷಕ ಶಿಕ್ಷಕಿ, ಉಪನ್ಯಾಸಕ, ಉಪನ್ಯಾಸಕಿ, ಪ್ರೊಫೆಸರ್ ಮತ್ತು ಪದವೀದರ ಮಹಾಶಯರೆ,
ನಿಮಗೆ ನಾಚಿಕೆ, ಮಾನ ಮಾರ್ಯಾದೆ ಅಂತ ಏನಾದ್ರೂ ಇದೆಯಾ?
ನಾಳೆ ಪದವೀದರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಿಮ್ಮ ಪ್ರತಿನಿಧಿಗಳನ್ನು ಅಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಮತ ಚಲಾಯಿಸುತ್ತಿರುವ ನಿಮ್ಮಲ್ಲಿ ಎಷ್ಟು ಜನ ಅಭ್ಯರ್ಥಿಗಳು ಮತ್ತು ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳು ಆಫರ್ ಮಾಡಿರುವ ದುಡ್ಡು, ಹೆಂಡ, ಉಡುಗೊರೆಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದೀರಿ? ರಾಜ್ಯದ ನಾನಾ ಕಡೆಗಳಿಂದ ಕೇಳಿಬರುತ್ತಿರುವ ಸಂಗತಿಗಳನ್ನು ನೋಡಿದರೆ ಜಿಗುಪ್ಸೆಯಾಗುವಂತಿದೆ. ನೀವೆಲ್ಲಾ ಸಮಾಜದ ಪ್ರಬುದ್ಧ ಮತದಾರರಾ? ನಿಮಗೆ ಆತ್ಮಸಾಕ್ಷಿ ಅನ್ನುವುದು ಏನಾದರೂ ನಿಜಕ್ಕೂ ಇದೆಯಾ?
ಒಂದು ತಾಲ್ಲೂಕಿನ ಉಪನ್ಯಾಸಕರ ಸಂಘದ ಅಧ್ಯಕ್ಷನೊಬ್ಬ ಎಲ್ಲಾ ಶಿಕ್ಷಕರಿಗೆ ಕರೆ ಮಾಡಿ “ನಾಳೆ ಓಟು ಹಾಕಿದ ಕೂಡಲೇ ಬಂದು ನಿಮ್ಮ ಕವರ್ ತಗೊಂಡೋಗಿ” ಅಂತ ಹೇಳ್ತಾನಂತೆ. ಮತ್ತೊಂದು ತಾಲ್ಲೂಕಿನಲ್ಲಿ “ಬನ್ನಿ ಇಷ್ಟಾದರೂ ತಿನ್ನಿ ಎಷ್ಟಾದರೂ ಕುಡಿಯಿರಿ” ಎಂದು ಸಕಲ ವ್ಯವಸ್ಥೆಯನ್ನು ಮಾಡಿದ್ದರೆ, ಮೂರೂ ಬಿಟ್ಟು ಹೋಗಿ ನೆಕ್ಕಿಕೊಂಡು ಬರುತ್ತಿದ್ದಾರೆ ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಮೇಸ್ಟ್ರುಗಳು. ಇಂತಹ ಪ್ರಚ್ಛನ್ನ ಭ್ರಷ್ಟಾಚಾರದಲ್ಲಿ ನೀವೂ ಭಾಗಿಯಾಗಿ ನಾಳೆ ಯಾವ ಮುಖ ಇಟ್ಟುಕೊಂಡು ನಿಮ್ಮ ವಿದ್ಯಾರ್ಥಿಗಳ ಎದುರು ನಿಲ್ಲುತ್ತೀರ?
ವಿಧಾನ ಪರಿಷತ್ತು ಅಥವಾ ಮೇಲ್ಮನೆ ಎಂದರೆ ಅದಕ್ಕೆ ಒಂದು ಘನತೆ ಗೌರವ ಇದೆ ಎಂದು ಭಾವಿಸಲಾಗಿದೆ. ಅಲ್ಲಿ ಸಮಾಜದ ಬುದ್ದಿಜೀವಿಗಳು, ಚಿಂತಕರು, ಸಾಹಿತಿಗಳು, ಕಲಾವಿದರು ಸಮಾಜದ ಅರೆಕೊರೆಗಳನ್ನು ಬಲ್ಲವರು, ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರದಿಂದ, ಸಹಕಾರಿ ಕ್ಷೇತ್ರದಿಂದ ಪ್ರತಿನಿಧಿಸಿ ಆಯಾ ಕ್ಷೇತ್ರಗಳ ಸಮಸ್ಯೆಗಳ ಕುರಿತು ಕಾಯ್ದೆ ಕಾನೂನು ರೂಪಿಸಲು ಸಹಾಯ ಮಾಡಬೇಕು ಎಂಬ ಇರಾದೆಯಲ್ಲಿ ಈ ಮೇಲ್ಮನೆ ಇರುವಂತದು. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಮೇಲ್ಮನೆ ಇಲ್ಲ. ಕರ್ನಾಟಕದಲ್ಲಿ ಇದು ಸ್ಥಾಪನೆಯಾಗಿದೆ ಎಂದರೆ ನೀವೆಲ್ಲಾ ಪ್ರಜಾಪ್ರಭುತ್ವದಲ್ಲಿ ನಿಮಗೆ ಸಿಕ್ಕಿರುವ ಒಂದು ವಿಶೇಷ ಸೌಲಭ್ಯ (ಪ್ರಿವಿಲೆಜ್) ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಕನಿಷ್ಟ ಈ ಕ್ಷೇತ್ರದಲ್ಲಿ ಹಣ,ಹೆಂಡ, ಜಾತಿ ಮತ ಪಕ್ಷ ಪಂಗಡ ನಡೆಯದಂತೆ ಈ ಕ್ಷೇತ್ರದ ಸಮಸ್ಯೆಗಳನ್ನು ನಿಜವಾಗಿ ಪ್ರತಿನಿಧಿಸುವ ವ್ಯಕ್ತಿಗಳನ್ನು ಆರಿಸಲು ನೀವು ಪಣ ತೊಡಬೇಕಿತ್ತು.
ಹಣ ಹೆಂಡ ಹಂಚಿ ಮೇಲ್ಮನೆ ಚುನಾವಣೆ ಮಾಡಲು ಬರುವವರ ಮಕ್ಕುಗಿದು ಹೀಗೆ ಮಾಡಬೇಡಿ ಎಂದು ಹೇಳುವ ನೈತಿಕ ಸ್ಥೈರ್ಯ ನಿಮ್ಮಲ್ಲಿ ಇರಬೇಕಿತ್ತು…
ಆದರೆ, ನೀವು ನಿಜಕ್ಕೂ ಮಾಡುತ್ತಿರುವುದೇನು? ಎಲ್ಲಾ ಚುನಾವಣೆಗಳಲ್ಲಿ ಜನರು ತಮ್ಮ ಮತಗಳನ್ನು ಮಾರಿಕೊಳ್ಳುವಂತೆ ಈಗಲೂ ಮಾರಿಕೊಳ್ಳುತ್ತಿದ್ದೀರ. ತೀರಾ ನಾಚಿಕೆಗೇಡಿತನ.
ಸರ್ಕಾರಗಳು ನೌಕರರಿಗೆ NPS ಜಾರಿ ಮಾಡಬೇಕು, ಶಿಕ್ಷಣ ಕ್ಷೇತ್ರಕ್ಕೆ ಸೂಕ್ತ ಅನುದಾನ, ಸರಿಯಾದ ನೀತಿ ನಿರೂಪಣೆಗಳು ಅಗಬೇಕು, ಶಿಕ್ಷಕರು ದಿನನಿತ್ಯ ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿವೆ… ನಿಮ್ಮಿಂದ ಆಯ್ಕೆಯಾದವರು ಅವುಗಳಿಗೆ ದನಿಯಾಗಬೇಕಿತ್ತು.
ಆದರೆ ನಾಳೆ ಗೆದ್ದು ಬಂದವರಿಂದ ಇವನ್ನೆಲ್ಲಾ ಕೇಳುವ, ನಿರೀಕ್ಷಿಸುವ ಯಾವುದೇ ನೈತಿಕ ಹಕ್ಕನ್ನು ನೀವು ಉಳಿಸಿಕೊಂಡಿರುವುದಿಲ್ಲ. ಯಾಕೆಂದರೆ ನೀವು ಅಭ್ಯರ್ಥಿಗಳು ನೀಡುವ ಹಣ, ಹೆಂಡ, ಉಡುಗೊರೆ ಪಡೆದು ಓಟು ಹಾಕುತ್ತೀರ…
ನೀವೆಲ್ಲಾ ಪದವೀದರರು, ಶಿಕ್ಷಕಕರು ಎಂದರೆ ನಿಮ್ಮ ಸುತ್ತಮುತ್ತಲಿನ ಸಮಾಜ ನಿಮ್ಮನ್ನು ವಿಶೇಷ ಸ್ಥಾನದಲ್ಲಿ ಇಟ್ಟು ನೋಡುತ್ತಿರುತ್ತದೆ. ಅಂತವರಿಗೆ ಮಾದರಿಯಾಗಿ ನಡೆದುಕೊಳ್ಳಬೇಕಾದವರು ನೀವು…
ಆದರೆ ನಿಮ್ಮ ಈ ನಡೆ?
ನಿಮ್ಮಲ್ಲಿ ಕೆಲವರಾದರೂ ಅಂತಹ ನೈತಿಕ ಸ್ಥೈರ್ಯ ಉಳಿಸಿಕೊಂಡಿದ್ದರೆ, ಯಾವುದೇ ಅಭ್ಯರ್ಥಿಯಿಂದ ಹಣ ಹೆಂಡ ಪಡೆಯದೆ, ಜಾತಿ ಮತ ನೋಡದೇ ನಿಮ್ಮ ಕ್ಷೇತ್ರದ ಹಿತದಿಂದ, ಪ್ರಜಾತಂತ್ರದ ಉಳಿವಿಗಾಗಿ ನಾಳೆ ಮತ ಚಲಾಯಿಸಿದ್ದೇ ಆದರೆ ಅಂತವರಿಗೆಲ್ಲಾ ತಲೆಬಾಗಿ ವಂದಿಸುತ್ತೇನೆ.
– ಹರ್ಷಕುಮಾರ್ ಕುಗ್ವೆ.