Wednesday, October 23, 2024
spot_img

ಮೈಸೂರು:ಮೂಡಾ ಅಕ್ರಮ ಪ್ರಶ್ನಿಸಿ ರಾಷ್ಟ್ರ ಸಮಿತಿ ಪಕ್ಷದ ಪ್ರತಿಭಟನೆ.ಬಂಧನ

 

ಕೆ. ಆರ್. ಎಸ್. ಪಕ್ಷದಿಂದ ಮೈಸೂರು ಮೂಡಾ ಮುತ್ತಿಗೆ – 50:50 ಸಿಎಂ ಸಿದ್ದರಾಮಯ್ಯ ಅವರನ್ನು ಕಾಪಾಡಲು ಅಕ್ರಮವಾಗಿ ಬಂಧಿಸಿದ ಪೊಲೀಸರು.

ಮೈಸೂರು ಮೂಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರುವ 50:50 ಸಿಎಂ ಸಿದ್ದರಾಮಯ್ಯನವರ ರಾಜಿನಾಮೆಗೆ ಆಗ್ರಹಿಸಿ ಇಂದು ಕೆ.ಆರ್.ಎಸ್. ಪಕ್ಷವು ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಮೂಡಾ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ, ಪೊಲೀಸರು ಕಾನೂನು ಬಾಹಿರವಾಗಿ ಪ್ರತಿಭಟನಾಕಾರರನ್ನು ಬಂಧಿಸಿದರು.

ಪ್ರತಿಭಟನೆ ನಡೆಸಿ ಪಾದಯಾತ್ರೆ ಮೂಲಕ ಮೂಡಾ ಕಚೇರಿಗೆ ತೆರಳಲೆಂದು ಗನ್ ಹೌಸ್ ಬಳಿ ಸೇರಿದ್ದವರನ್ನು ಸಕಾರಣ ನೀಡದೆ ಬಂಧಿಸಲಾಯಿತು. ಈ ವಿಚಾರ ತಿಳಿದ, ಮುತ್ತಿಗೆ ಹಾಕಲು ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಆಗಮಿಸಿದ್ಧ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರೈಲು ನಿಲ್ದಾಣದ ಬಳಿ ಸೇರಿ, ಅಲ್ಲಿಂದಲೇ ನೇರವಾಗಿ ಮೂಡಾಗೆ ಮುತ್ತಿಗೆ ಹಾಕಲು ಪಾದಯಾತ್ರೆ ಆರಂಭಿಸಿದರು. ಘೋಷಣೆ ಕೂಗುತ್ತ 50:50 ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಹಾಗೂ ನ್ಯಾಯಾಂಗದ ಮೂಲಕ ತನಿಖೆ ಮಾಡಿಸಬೇಕೆಂದು ಆಗ್ರಹಿಸಿ ಹೊರಟಿತು. ಪಾದಯಾತ್ರೆಯನ್ನು ಮೂಡಾ ಕಚೇರಿಯ ಹತ್ತಿರದ ವೃತ್ತದಲ್ಲಿ ತಡೆದ ಪೊಲೀಸರು ಅಕ್ರಮ ಬಂಧನಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪೊಲೀಸರಲ್ಲಿ ಸಮರ್ಪಕ ಉತ್ತರ ಇರಲಿಲ್ಲ. ಸಂವಿಧಾನ ರಕ್ಷಿಸುತ್ತೇವೆ ಎಂದು ಹೋದಲೆಲ್ಲಾ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆ ತಡೆಯಲು ಪೊಲೀಸರನ್ನು ಬಳಸಿಕೊಂಡಿದ್ದಾರೆ. ಇಂತಹ ಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ಅವರು ಭಾವಿಸಿದ್ದರೆ ಅದು ಅವರ ಮೂರ್ಖತನ ಆಗುತ್ತದೆ. ತಕ್ಷಣವೇ ಅವರು ರಾಜಿನಾಮೆ ನೀಡಬೇಕು ಮತ್ತು ನ್ಯಾಯಯುತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಘೋಷಣೆ ಕೂಗುತ್ತಿದ್ದ ಪಕ್ಷದ ಪದಾಧಿಕಾರಿಗಳನ್ನು, ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್., ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ಕಾರ್ಯದರ್ಶಿಗಳಾದ ರಘು ಜಾಣಗೆರೆ, ರಘುಪತಿ ಭಟ್, ವಿಜಯರಾಘವ ಮರಾಠೆ, ಮಂಜುನಾಥ್ ಎಸ್., ಸೋಮಸುಂದರ್ ಕೆ. ಎಸ್., ರವಿಕುಮಾರ್ ಎಂ., ಅರುಣ ಕುಮಾರ ಹೆಚ್. ಎಂ, ರಮೇಶ್ ಗೌಡ ಜಿ.ಎಂ, ಮೈಸೂರು ಜಿಲ್ಲಾಧ್ಯಕ್ಷರಾದ ಸುಂದರ್ ಪ್ರೇಮ್ ಕುಮಾರ್ ಹಾಗೂ ಇತರ ಪದಾಧಿಕಾರಿಗಳನ್ನು ಪೊಲೀಸರು ಬಲವಂತವಾಗಿ ಬಂಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಕೃಷ್ಣಾರೆಡ್ಡಿ ಅವರು, ಸಿದ್ದರಾಮಯ್ಯನವರು 50:50 ಸಿಎಂ ಆಗಿದ್ದು, ಕೇವಲ ಮೂಡದಲ್ಲಿ ಅಕ್ರಮವಾಗಿ 50:50 ಸೈಟ್ ಪಡೆಯದೆ ವಿರೋಧ ಪಕ್ಷಗಳೊಂದಿಗೆ 50:50 ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡುತ್ತಿದ್ದು ಅವರು ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ, ಸೈಟುಗಳಾಗಿ ಮಾರಾಟವಾಗಿರುವ ಜಮೀನನ್ನು ಬೇನಾಮಿ ಮೂಲಕ ಕೊಂಡುಕೊಂಡು, ದಾನಪತ್ರದ ಮೂಲಕ ಪತ್ನಿಯ ಹೆಸರಿಗೆ ವರ್ಗಾಯಿಸಿಕೊಂಡು, ಈಗ ಬಿಜೆಪಿಯವರು ಕೊಟ್ಟಿದ್ದಾರೆ, ನಾನು ತೆಗೆದುಕೊಂಡಿದ್ದೇನೆ ಎಂದು ನಿರ್ಲಜ್ಜೆಯಿಂದ ಮಾತನಾಡುತ್ತಿದ್ದಾರೆ. ಈ ಹಿಂದೆ ಅರ್ಕಾವತಿ ರೀಡೂ ಪ್ರಕರಣದಿಂದ ಪಾರಾಗಲು ಲೋಕಾಯುಕ್ತವನ್ನು ಮುಚ್ಚಿದ ಅಪಖ್ಯಾತಿ ಹೊಂದಿದ್ದಾರೆ. ಇವರನ್ನು ಮುಖ್ಯಮಂತ್ರಿಯಾಗಿ ಮಾಡಿ ಮತ್ತಷ್ಟು ಅಕ್ರಮಗಳನ್ನು ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಇದೇ ರೀತಿಯ ಅಕ್ರಮಗಳು, ಅವ್ಯವಹಾರಗಳು ನಡೆಯುತ್ತಿದ್ದು, ಲಕ್ಷಾಂತರ ಜನರು ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡು ಚಾತಕ ಪಕ್ಷಿಗಳಂತೆ ದಶಕಗಳ ಕಾಲ ಕಾಯುವ ಭಾಗ್ಯ ಹಾಗೂ ಗ್ಯಾರಂಟಿಗಳನ್ನು ನೀಡಿ ತಮಗೆ ಹಾಗೂ ತಮ್ಮ ಆಪ್ತರಿಗೆ ಮಾತ್ರ ಅಕ್ರಮವಾಗಿ ಸೈಟ್ ನೀಡಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ವಿಚಾರವಾಗಿ ಪಕ್ಷವು ಹೋರಾಟವನ್ನು ಮುಂದುವರಿಸುವುದಾಗಿ ಹಾಗೂ ನ್ಯಾಯಾಂಗಕ್ಕೂ ಪ್ರಕರಣವನ್ನು ಒಯ್ಯುವುದಾಗಿ ಪಕ್ಷದ ಸಂಘಟನಾ ಕಾರ್ಯದರ್ಶಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ರವಿಕುಮಾರ್ ಎಂ. ಅವರು ತಿಳಿಸಿದರು.

ಈ ಸದರಿ ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ಅಧ್ಯಕ್ಷ ಡಿ.ಜಿ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಜಿಲ್ಲಾ ಕಾರ್ಯದರ್ಶಿಗಳಾದ ಶಾಂತಿ ಪ್ರಸಾದ್, ಯೋಗೀಶ್ ಹೆಚ್.ಇ, ಮಹೇಶ್ ಕೂಳಗೆರೆ, ನಂದೀಶ್ ಕುಮಾರ, ಶಶಿಧರ್ ವೈ.ಕೆ ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!