Saturday, November 7, 2026
spot_img

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಕನ್ನಡ ಕಡ್ಡಾಯಕ್ಕೆ ದ್ರಾವಿಡ ಕನ್ನಡಿಗರ ಆಗ್ರಹ

**ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ‘ಸಾಮಾನ್ಯ ಕನ್ನಡ’ ಕಡ್ಡಾಯಗೊಳಿಸಲು “ನಾವು ದ್ರಾವಿಡ ಕನ್ನಡಿಗರು ಚಳುವಳಿ” ಆಗ್ರಹ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ**

ಬೆಂಗಳೂರು: SDA, FDA ಹಾಗೂ ಆಬಕಾರಿ ಗಾರ್ಡ್ ನೇಮಕಾತಿ ಪರೀಕ್ಷೆಗಳಲ್ಲಿ ‘ಸಾಮಾನ್ಯ ಕನ್ನಡ’ ಪ್ರಶ್ನೆ ಪತ್ರಿಕೆಯನ್ನು ಮರುಸೇರಿಸಬೇಕೆಂದು ಆಗ್ರಹಿಸಿ “ನಾವು ದ್ರಾವಿಡ ಕನ್ನಡಿಗರು ಚಳುವಳಿ”ಯು ರಾಜ್ಯ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದೆ. ಈ ಸಂಬಂಧ ಸಂಘಟನೆಯು ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಪತ್ರ ಸಲ್ಲಿಸಿದೆ.

ಪ್ರಸಕ್ತ 2026ನೇ ಸಾಲಿನಲ್ಲಿ KEA ಹೊರಡಿಸಿರುವ SDA ಮತ್ತು FDA ನೇಮಕಾತಿ ಅಧಿಸೂಚನೆಯಲ್ಲಿ, ಹಿಂದಿನ ಪರೀಕ್ಷಾ ಕ್ರಮದಲ್ಲಿದ್ದ ‘ಸಾಮಾನ್ಯ ಕನ್ನಡ’ ಪತ್ರಿಕೆಯನ್ನು ಕೈಬಿಟ್ಟು ಕೇವಲ ‘ಸಂವಹನ’ ಪತ್ರಿಕೆಯನ್ನು ಸೇರಿಸಲಾಗಿದೆ. ಆಬಕಾರಿ ಗಾರ್ಡ್ ನೇಮಕಾತಿಯಲ್ಲೂ ‘ಸಾಮಾನ್ಯ ಕನ್ನಡ’ ಪತ್ರಿಕೆಯನ್ನು ತೆಗೆದು ‘ಸಾಮಾನ್ಯ ಜ್ಞಾನ’ ಪತ್ರಿಕೆಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗಲಿದೆ ಎಂದು ಸಂಘಟನೆ ಆರೋಪಿಸಿದೆ.

**ಸಂಘಟನೆ ಮುಂದಿಟ್ಟ ಪ್ರಮುಖ ಆಕ್ಷೇಪಗಳು:**

– **ಆಡಳಿತ ಭಾಷೆಯ ಕಲಿಕೆಗೆ ಹಿನ್ನಡೆ:** 100 ಅಂಕಗಳ ‘ಸಾಮಾನ್ಯ ಕನ್ನಡ’ ಪತ್ರಿಕೆಯು ಆಡಳಿತದಲ್ಲಿ ಕನ್ನಡ ಬಳಕೆ ಹಾಗೂ ಭಾಷಾ ಅಧ್ಯಯನದ ಭಾಗವಾಗಿತ್ತು. ಅದನ್ನು ಕೈಬಿಟ್ಟರೆ ಕನ್ನಡದ ಒಟ್ಟಾರೆ ಅಭಿವೃದ್ಧಿಗೆ ತಡೆಯಾಗುತ್ತದೆ.
– **ಕನ್ನಡ ಪದವೀಧರರಿಗೆ ಧಕ್ಕೆ:** ಬಿ.ಎ.ಯಲ್ಲಿ ಕನ್ನಡವನ್ನು ಪ್ರಮುಖ ವಿಷಯವಾಗಿ ಓದಿದವರಿಗೆ ಈ ಹುದ್ದೆಗಳು ಸುಲಭವಾಗಿ ಸಿಗುತ್ತಿದ್ದವು. ಈಗ ಎಂ.ಎ., ಪಿಎಚ್.ಡಿ.ಯಲ್ಲಿ ಕನ್ನಡ ಆಯ್ಕೆ ಮಾಡುವವರ ಸಂಖ್ಯೆ ಕ್ಷೀಣಿಸುವ ಆತಂಕವಿದೆ.
– **ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಭೀತಿ:** ಸರ್ಕಾರಿ ಕೆಲಸಕ್ಕೆ ಈ ಪತ್ರಿಕೆ ಮುಖ್ಯವಾಗಿದ್ದರಿಂದ ಪೋಷಕರು ಮಕ್ಕಳನ್ನು ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಸೇರಿಸುತ್ತಿದ್ದರು. ಇದು ಇಲ್ಲದಿದ್ದರೆ CBSE, ICSE ಶಾಲೆಗಳ ವಿದ್ಯಾರ್ಥಿಗಳಿಗೂ ಹುದ್ದೆಗಳು ಸುಲಭವಾಗಿ ಸಿಗಲಿದ್ದು, ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಬಹುದು.
– **ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುಂಠಿತ:** ಕೇವಲ ‘ಸಂವಹನ’ ಪತ್ರಿಕೆಯಿಂದ ಅಭ್ಯರ್ಥಿಯ ಆಳವಾದ ಭಾಷಾ ಜ್ಞಾನ ಮತ್ತು ವ್ಯಾಕರಣ ಶುದ್ಧತೆಯನ್ನು ಅಳೆಯಲಾಗದು. ಸಾರ್ವಜನಿಕರ ಸಂಪರ್ಕದಲ್ಲಿರುವ ತಳಮಟ್ಟದ ಹುದ್ದೆಗಳಿಗೆ ಉತ್ತಮ ಕನ್ನಡ ಜ್ಞಾನ ಅಗತ್ಯವಾಗಿದ್ದು, ಇಲ್ಲದಿದ್ದರೆ ಸರ್ಕಾರಿ ಕಡತಗಳಲ್ಲಿ ಭಾಷಾ ದೋಷಗಳು ಹೆಚ್ಚಾಗುತ್ತವೆ.
– **ಗ್ರಾಮೀಣ, ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅಸಮಾನತೆ:** ನಗರ ಹಾಗೂ ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಲು ಗ್ರಾಮೀಣ ಪ್ರತಿಭಾವಂತರಿಗೆ ಈ ಪತ್ರಿಕೆ ದೊಡ್ಡ ಆಸರೆಯಾಗಿತ್ತು. ಅದನ್ನು ತೆಗೆದರೆ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಸಮಾನ ಅವಕಾಶದಿಂದ ವಂಚಿತರಾಗುತ್ತಾರೆ.
– **ಕನ್ನಡ ಕಡ್ಡಾಯ ಆಶಯಕ್ಕೆ ವಿರುದ್ಧ:** ಸರ್ಕಾರ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಕಡ್ಡಾಯಕ್ಕೆ ಶ್ರಮಿಸುತ್ತಿರುವಾಗ, ನೇಮಕಾತಿ ಪರೀಕ್ಷೆಗಳಿಂದಲೇ ಕನ್ನಡವನ್ನು ದೂರವಿಡುವುದು ಸರ್ಕಾರದ ಭಾಷಾ ನೀತಿ ಹಾಗೂ ಕನ್ನಡ ಕಾಯಕ ವರ್ಷದ ಆಶಯಕ್ಕೆ ತದ್ವಿರುದ್ಧ ಎಂದು ಸಂಘಟನೆ ಹೇಳಿದೆ.

**ಬೇಡಿಕೆ ಮತ್ತು ಎಚ್ಚರಿಕೆ:** ಲಕ್ಷಾಂತರ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಳೆಯ ಮಾದರಿಯಲ್ಲೇ ನೇಮಕಾತಿ ನಡೆಸಬೇಕು. ಮುಂಬರುವ ಎಲ್ಲ ನೇಮಕಾತಿಗಳಲ್ಲಿ ಕೇವಲ ‘ಸಂವಹನ ಪತ್ರಿಕೆ’ಗೆ ಸೀಮಿತವಾಗದೆ, ಅದರೊಂದಿಗೆ ಅಥವಾ ಅದರ ಬದಲಾಗಿ 100 ಅಂಕಗಳ ‘ಸಾಮಾನ್ಯ ಕನ್ನಡ’ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಸಂಘಟನೆ ಗೌರವಪೂರ್ವಕವಾಗಿ ವಿನಂತಿಸಿದೆ. ಬೇಡಿಕೆ ಈಡೇರದಿದ್ದರೆ ಕನ್ನಡ ನಾಡು-ನುಡಿ ಉಳಿಸಲು ಬೀದಿ ಹೋರಾಟ ಹಾಗೂ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ.

ಎಚ್ಚರಿಕೆ ಪತ್ರ ಸಲ್ಲಿಸುವ ಸಂದರ್ಭದಲ್ಲಿ “ನಾವು ದ್ರಾವಿಡ ಕನ್ನಡಿಗರು ಚಳುವಳಿ”ಯ ವಿದ್ಯಾರ್ಥಿ ನಾಯಕ ತೇಜಸ್ ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!