ಕೆಂಪನಂಜಮ್ಮಣ್ಣಿ ಅವರ ತ್ಯಾಗ ಸ್ಮರಣೆ: ಭೂತನ ಹೊಸೂರಿನಲ್ಲಿ ಅ.23ರಂದು ವಿಶೇಷ ಕಾರ್ಯಕ್ರಮ
ಮಂಡ್ಯ: ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನಿರ್ಮಾಣಕ್ಕಾಗಿ ತಮ್ಮ ಒಡವೆಗಳನ್ನು ಕೊಡುಗೆಯಾಗಿ ನೀಡಿದ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ) ಅವರ ತ್ಯಾಗ ಮತ್ತು ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ, ಶ್ರೀ ವಾಣಿ ವಿಲಾಸ ಮನೆವೊಕ್ಕಲು ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 23ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಡ್ಯ ತಾಲ್ಲೂಕಿನ ಭೂತನ ಹೊಸೂರಿನಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಅವರು ಕೆಂಪನಂಜಮ್ಮಣ್ಣಿ ಅವರ ಜೀವನ, ತ್ಯಾಗ ಹಾಗೂ ಕೃಷ್ಣರಾಜ ಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಯ ಕುರಿತು ಮಾತನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ನಾವು ದ್ರಾವಿಡ ಕನ್ನಡಿಗರು’ ಸಂಘಟನೆಯ ಅಭಿ ಒಕ್ಕಲಿಗ ಅವರು ಮಾಹಿತಿ ನೀಡಲಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಹಾಗೂ ವಂಚನೆಗಳಿಂದ ರಕ್ಷಿಸಿಕೊಳ್ಳುವ ಕುರಿತು ಅರಿವು ಮೂಡಿಸುವುದು ಈ ಉಪನ್ಯಾಸದ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಮೈಸೂರಿನ ಪತ್ರಕರ್ತ ಪ್ರಕಾಶ್ ಬಾಬು ಹಾಗೂ ‘ಹಳೇ ಮೈಸೂರು ಪ್ರಾದೇಶಿಕ ದಿನಪತ್ರಿಕೆ’ಯ ಸಂಪಾದಕ ಎಂ.ಬಿ. ನಾಗಣ್ಣಗೌಡ ಅವರು ಉಪಸ್ಥಿತರಿರಲಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ ಅವರು ತಮ್ಮ ಸಹೋದರಿ ನಿರ್ಮಿಸಿರುವ ನೂತನ ಮನೆಯ ಮನೆಯೊಕ್ಕಲು ಭಾಗವಾಗಿ ಈ ಎಲ್ಲ ಆಯೋಜನೆಯ ಜವಾಬ್ದಾರಿ ವಹಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ. ಮನೆಯೊಕ್ಕಲು ನೆಪದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾದವರ ನೆನೆಯುವ ಅದೇ ಸಂಧರ್ಭದಲ್ಲಿ ಸೈಬರ್ ವಂಚನೆಯ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮ ಇದಾಗಿದೆ.


